Advertisement

ಢವಳೇಶ್ವರ ಗ್ರಾಪಂಗೆ ಪ್ರವಾಹ ನಿಭಾಯಿಸಿದ ಕೀರ್ತಿ

05:00 PM Oct 02, 2020 | Suhan S |

ಮಹಾಲಿಂಗಪುರ: ಗಡಿ ಗ್ರಾಮ ಢವಳೇಶ್ವರ ಗ್ರಾಮ ಪಂಚಾಯತಿಯು ರಾಜ್ಯ ಸರಕಾರದ 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.

Advertisement

ಪ್ರವಾಹ ಪೀಡಿತ ಗ್ರಾಮ: ಮಹಾಪ್ರವಾಹದ ವೇಳೆ ಢವಳೇಶ್ವರ ಸಂಪೂರ್ಣ ಜಲಾವೃತವಾಗಿತ್ತು. ಗ್ರಾಮದ ಶೇ. 80 ಮನೆಗಳು ನೀರಲ್ಲಿ ಮುಳುಗಿದ್ದವು. ಪ್ರವಾಹ ಇಳಿಮುಖವಾದ ನಂತರ ಗ್ರಾಪಂನಿಂದ ಸ್ವತ್ಛತೆಗೆ ಆದ್ಯತೆ ನೀಡುವ ಮೂಲಕ ರೋಗರುಜಿನಗಳಿಗೆ ಅವಕಾಶ ನೀಡದೇ, ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಕೀರ್ತಿ ಇಲ್ಲಿನ ಗ್ರಾಮ ಪಂಚಾಯತ್‌ಗೆ ಸಲ್ಲುತ್ತದೆ.

ಶೌಚಾಲಯ ನಿರ್ಮಾಣಕ್ಕೆ ಆದ್ಯತೆ: ಢವಳೇಶ್ವರ ಗ್ರಾಮ 1250 ಕುಟುಂಬ ಹಾಗೂ 7962 ಜನಸಂಖ್ಯೆಯನ್ನು ಹೊಂದಿದೆ. ಗ್ರಾಮದಲ್ಲಿ ಇಲ್ಲಿಯವರೆಗೆ ಸುಮಾರು ಸಾವಿರ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿವೆ. ಗ್ರಾಪಂನಿಂದ ಗ್ರಾಮದ ವಿವಿಧ ಓಣಿಗಳಲ್ಲಿ 18 ಗುಂಪು ಒಡೆತನದ ಶೌಚಾಲಯ ನಿರ್ಮಿಸಲಾಗಿದೆ. ಎಲ್ಲವು ನೀರು,ವಿದ್ಯುತ್‌ ಸೌಲಭ್ಯದೊಂದಿಗೆ ಬಳಕೆಯಲ್ಲಿವೆ. ಸದ್ಯ ಮತ್ತೆ ಎರಡು ಗುಂಪು ಶೌಚಾಲಯಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಗ್ರಾಮದಲ್ಲಿನ ಪ್ರತಿಯೊಂದು ಅಂಗಡಿಗಳಿಗೆ ಕಸದ ಡಬ್ಬಿಗಳನ್ನು ವಿತರಿಸಿ, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.

ಮಾದರಿ ಮುಕ್ತಿಧಾಮ: ಪಟ್ಟಣದ ಸಮಸ್ತ ಹಿಂದೂ ಸಮಾಜದ ಹಿರಿಯರು ಕೂಡಿಕೊಂಡು 1.10 ಎಕರೆ ಜಾಗೆಯಲ್ಲಿ ಸುಸಜ್ಜಿತ ಮುಕ್ತಿಧಾಮ(ಸ್ಮಶಾನ) ನಿರ್ಮಿಸಲಾಗಿದೆ. ಗ್ರಾಪಂನಿಂದ ಸುಮಾರು ನಾಲ್ಕು ಲಕ್ಷ ವೆಚ್ಚದಲ್ಲಿ ಸ್ಮಶಾನದ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಗ್ರಾಪಂನಿಂದ ವಿದ್ಯುತ್‌ ದೀಪ, ಜಲಕುಂಬ ಸ್ಥಾಪಿಸಿ, ನೀರಿನ ವ್ಯವಸ್ಥೆ, ನಿರಂತರ ಸ್ವಚ್ಚತಾ ಕಾರ್ಯ ಕೈಗೊಳ್ಳುವ ಮೂಲಕ ಈ ಭಾಗದ ಮಾದರಿ ರುದ್ರಭೂಮಿಯಾಗಿಸುವಲ್ಲಿ ಗ್ರಾಮದ ಹಿರಿಯರ ಶ್ರಮದ ಜತೆಗೆ ಗ್ರಾಪಂ ಕಾರ್ಯ ಶ್ಲಾಘನಿಯವಾಗಿದೆ.

200ಕ್ಕೆ 190 ಅಂಕಗಳು: ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಸರಕಾರವು ನಿಗದಿಪಡಿಸಿದ್ದ 100 ಪ್ರಶ್ನೆಗಳ 200 ಅಂಕಗಳಲ್ಲಿ ಢವಳೇಶ್ವರ ಗ್ರಾಮಪಂಚಾಯತ್‌ 200ಕ್ಕೆ 190 (95)ಅಂಕ ಪಡೆದು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಸಮರ್ಪಕ ಅನುದಾನ ಬಳಕೆ-ಅನುಷ್ಟಾನ: ಢವಳೇಶ್ವರ ಗ್ರಾಮ ಪಂಚಾಯತಿಯು ತೆರಿಗೆ ವಸೂಲಿ (ಶೇ. 80), ಎಸ್‌ಸಿ ಮತ್ತು ಎಸ್‌ಟಿ, ಅಂಗವಿಕಲರ ಅನುದಾನ ಬಳಕೆ(ಶೇ. 100), 14ನೇ ಹಣಕಾಸಿನ ಅನುದಾನ ಬಳಕೆ(ಶೇ. 80), ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಶೇ. 100), ಗ್ರಾಮಸಭೆ, ಮಹಿಳಾ ಗ್ರಾಮಸಭೆ, ಮಕ್ಕಳ ಗ್ರಾಮಸಭೆ, ಜನಪ್ರತಿನಿ ಧಿಗಳ ಸಾಮಾನ್ಯ ಸಭೆ (ಶೇ. 100), ರೈತರ ತೋಟದ ರಸ್ತೆಗಳ ಅಭಿವೃದ್ಧಿಯ ಸರ್ವಋತು ಯೋಜನೆ ಮತ್ತು ದನಗಳ ಶೆಡ್‌ ನಿರ್ಮಾಣ ಯೋಜನೆ (ಶೇ. 80) ಸೇರಿದಂತೆ ಸರಕಾರದಿಂದ ಬಂದ ಅನುದಾನವನ್ನು ಸಮರ್ಪಕವಾಗಿ ಬಳಸಿ, ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

Advertisement

ಬೆರಳೆಣಿಕೆಯ ನ್ಯೂನ್ಯತೆಗಳು: ಗ್ರಾಮದ ಸುತ್ತಮುತ್ತಲಿನ ರಸ್ತೆಗಳ ಪಕ್ಕದಲ್ಲಿನ ತಿಪ್ಪೆಗುಂಡಿಗಳ ಸ್ಥಳಾಂತರ ಮತ್ತು ಸ್ವತ್ಛತೆಗೆ ಆದ್ಯತೆ ಹಾಗೂ ಗ್ರಾಮಕ್ಕೆ ವ್ಯವಸ್ಥಿತವಾದ ಬಸ್‌ ನಿಲ್ದಾಣ ನಿರ್ಮಾಣ, ಗ್ರಾಮದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ ಸಂಚಾರದ ವ್ಯವಸ್ಥೆ ಮಾಡುವು‌ದು, 2008ರ ಆಸರೆ ಯೋಜನೆಯ ಫಲಾನುಭವಿಗಳಿಗೆ ಮನೆ ಹಂಚಿಕೆ ಸಮಸ್ಯೆ ಬಗೆಹರಿಸುವುದು ಸೇರಿದಂತೆ ಕೆಲವು ಬೆರಳೆಣಿಕೆಯ ನ್ಯೂನ್ಯತೆಗಳನ್ನು ಗ್ರಾಪಂನಿಂದ ಸರಿಪಡಿಸಬೇಕಾಗಿದೆ.

ಗ್ರಾಮಸ್ಥರು ಮತ್ತು ಗ್ರಾಪಂನ ಜನಪ್ರತಿನಿ ಧಿಗಳ ಸಹಕಾರದಿಂದ ಸರಕಾರದಿಂದ ಬಂದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಗ್ರಾಪಂನಿಂದ ಎಲ್ಲ ಯೋಜನೆಗಳನ್ನು ಜಾರಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ. ಪ್ರಶಸ್ತಿ ಬಂದಿದ್ದು ಮತ್ತಷ್ಟು ಅಭಿವೃದ್ಧಿ ಮಾಡಲು ಪ್ರೇರಣೆ ನೀಡಿದೆ. ಜಿ.ಜಿ. ಕುಲಗೋಡ. ಪಿಡಿಒ, ಢವಳೇಶ್ವರ ಗ್ರಾಪಂ

 

-ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next