Advertisement

ನಕ್ಕುಂದಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

02:38 PM Oct 01, 2018 | Team Udayavani |

ಮಾನ್ವಿ: ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ನಂಬಿದ್ದ ರಾಷ್ಟ್ರದ ಪಿತಾಮಹ ಮಹಾತ್ಮ ಗಾಂಧಿ ಹೆಸರಿನಲ್ಲಿ ಗ್ರಾಮಗಳಲ್ಲಿನ ಅಭಿವೃದ್ಧಿ ಕಾಮಗಾರಿ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆ ಪರಿಗಣಿಸಿ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ನಕ್ಕುಂದಿ ಗ್ರಾಮ ಪಂಚಾಯತಿ ಆಯ್ಕೆಯಾಗಿದೆ.

Advertisement

ರಾಯಚೂರು ಜಿಲ್ಲೆಯ ಐದು ಗ್ರಾಮ ಪಂಚಾಯತಿಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಇದರಲ್ಲಿ ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಪಂ ಕೂಡ ಸೇರಿದೆ. ತಾಲೂಕಿನ ಇತರೆ ಗ್ರಾಮ ಪಂಚಾಯತಿಗಳಿಗೆ ಹೋಲಿಕೆ ಮಾಡಿದರೆ ಇದು ಸಣ್ಣ ಗ್ರಾಮ ಪಂಚಾಯತಿ ಆಗಿದೆ. ಅಭಿವೃದ್ಧಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳಿಗಿಂತ ಮುಂದಿದೆ. 11 ಜನ ಸದಸ್ಯರಿರುವ ನಕ್ಕುಂದಿ ಗ್ರಾಪಂ ನಕ್ಕುಂದಿ, ಕರೆಗುಡ್ಡ, ಪಾರ್ವತಮ್ಮ ಕ್ಯಾಂಪ್‌ ಮತ್ತು ನಕ್ಕುಂದಿ ಕ್ಯಾಂಪ್‌ಗ್ಳನ್ನು ಒಳಗೊಂಡಿದೆ. ಉದ್ಯೋಗ ಖಾತ್ರಿ, ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ರಸ್ತೆಗಳ ಸುಧಾರಣೆ, ಚರಂಡಿ ನಿರ್ಮಾಣವಾದರೆ ನಕ್ಕುಂದಿ ಗ್ರಾಮ ಪಂಚಾಯತಿ ಒಂದು ಮಾದರಿ ಗ್ರಾಪಂ ಆಗುತ್ತದೆ.

ಆಡಳಿತದಲ್ಲಿ ಪಾರದರ್ಶಕತೆ: ನಕ್ಕುಂದಿ ಗ್ರಾಮ ಪಂಚಾಯತಿಯಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗಿದೆ. ಯೋಜನೆಗಳ ಬಗ್ಗೆ ಗೋಡೆಗಳ ಮೇಲೆ ಮಾಹಿತಿ ಬರೆಸಲಾಗಿದೆ. ನೋಟಿಸ್‌ ಬೋರ್ಡ್ ನಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲಾಗುತ್ತಿದೆ. ತೆರಿಗೆ ವಸೂಲಿ ಖಾತೆ, ನಂ.1 ಅಕೌಂಟ್‌, 14ನೇ ಹಣಕಾಸು ಯೊಜನೆಯ ಹಣವನ್ನು ನಿಯಮಾನುಸಾರ ಬಳಕೆ ಮಾಡಲಾಗುತ್ತಿದೆ. ದಾಖಲೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ. ಈ ಕುರಿತು ಯೋಜನೆಗಳ ಪ್ರಗತಿಯ ಬಗ್ಗೆ ಪಂಚತಂತ್ರದ ಗಾಂಧಿ ಸಾಕ್ಷಿ ಕಾಯಕ ಮತ್ತು ಎಸ್‌ಬಿಎಂ ಆ್ಯಪ್‌ಗ್ಳಲ್ಲಿ ಡಾಟಾ ಎಂಟ್ರಿ ಮಾಡಲಾಗುತ್ತಿದೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪಾರದರ್ಶಕ ಆಡಳಿತ ನಡೆಸಲಾಗುತ್ತಿದೆ ಎನ್ನುತ್ತಾರೆ ಪಿಡಿಒ ಶಿವಪುತ್ರಪ್ಪ.

ಒಟ್ಟಾರೆಯಾಗಿ ತಾಲೂಕಿನ 38 ಗ್ರಾಮ ಪಂಚಾಯತಿಗಳ ಪೈಕಿ ನಕ್ಕುಂದಿ ಗ್ರಾಮ ಪಂಚಾಯತಿ ಅಭಿವೃದ್ಧಿ ಹಾಗೂ ಪಾರದರ್ಶಕತೆ ವಿಚಾರದಲ್ಲಿ ಮುಂದಿದೆ. ಇದೇ ವೇಳೆ ಗ್ರಾಮದ ರಸ್ತೆಗಳ ಸುಧಾರಣೆ, ಚರಂಡಿ ನಿರ್ಮಾಣ, ಆಶ್ರಯ ಮನೆಗಳ ಹಂಚಿಕೆ ಸಮಸ್ಯೆ ಸರಿಡಿಸಿದರೆ ಮಾದರಿ ಗ್ರಾಮ ಪಂಚಾಯತಿ ಆಗುವುದರಲ್ಲಿ ಅನುಮಾನವಿಲ್ಲ.

ಶೇ.100 ಸಾಧನೆ
ನಕ್ಕುಂದಿ ಗ್ರಾಮದಲ್ಲಿ 4,829 ಜನರಿದ್ದಾರೆ. 789 ಕುಟುಂಬಗಳ ಪೈಕಿ 2,481 ಜನರು ನರೇಗಾ ಜಾಬ್‌ಕಾರ್ಡ್‌ ಹೊಂದಿದ್ದಾರೆ. ಕಳೆದ 5 ವರ್ಷಗಳಿಂದ ಎಲ್ಲ ಜಾಬ್‌ ಕಾರ್ಡ್‌ದರರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೂರು ದಿನಗಳ ಕೆಲಸ ನೀಡುವ ಮೂಲಕ ಶೇ.100 ಗುರಿ ಸಾಧಿಸಲಾಗಿದೆ. ಶೌಚಾಲಯ ನಿರ್ಮಾಣದಲ್ಲಿ ಶೇ.100 ಗುರಿ
ತಲುಪಿದ್ದು, ಈಗಾಗಲೇ ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. 4 ಎಕರೆ ಭೂಮಿಯಲ್ಲಿ ಕೆರೆ ನಿರ್ಮಾಣ ಮಾಡಿ ಪ್ರತಿ ಮನೆಗೆ ಪೈಪ್‌ ಲೈನ್‌, ನಳ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ

Advertisement

ರಸ್ತೆ-ಚರಂಡಿ ದುರವಸ್ಥೆ 
ನಕ್ಕುಂದಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ರಸ್ತೆಗಳು ತೀವ್ರ ಹದಗೆಟ್ಟಿವೆ. ಮಳೆ ಬಂದರೆ ನಡು ರಸ್ತೆಯಲ್ಲೆ ನೀರು ನಿಲ್ಲುತ್ತದೆ. ನಕ್ಕುಂದಿ ಮತ್ತು ಕರೆಗುಡ್ಡ ಗ್ರಾಮದಲ್ಲಿನ ರಸ್ತೆಯಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಗ್ರಾಮದ ರಸ್ತೆಗೆ ಸಿಸಿ ಹಾಕಿಲ್ಲ. ಚರಂಡಿ ನಿರ್ಮಾಣವಿಲ್ಲ. ಹಾಗೂ ಆಶ್ರಯ ಮನೆಗಳ ಹಂಚಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಅಪಸ್ವರ ಕೇಳಿಬರುತ್ತಿದೆ. ಆದರೂ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ !

ಗ್ರಾಮ ಪಂಚಾಯತಿ ಕಾರ್ಯದಲ್ಲಿ ಅಭಿವೃದ್ಧಿ ಮತ್ತು ಪಾದರ್ಶಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ಗಾಂಧಿ  ಗ್ರಾಮ ಪ್ರಶಸ್ತಿ ಆಯ್ಕೆಗೆ ಮುನ್ನ ಸಂಬಂಧಿಸಿದ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಈಗ ನಕ್ಕುಂದಿ ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಆಗಿರುವುದು ಖುಷಿ ತಂದಿದೆ. ಅಧ್ಯಕ್ಷರ, ಸದಸ್ಯರ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದೇವೆ. ಮುಂದಿನ ದಿನಗಳಲ್ಲಿ ಸಿಸಿ ರಸ್ತೆಗಳ ನಿರ್ಮಾಣ ಹಾಗೂ ಚರಂಡಿ ವ್ಯವಸ್ಥೆ ಸರಿಪಡಿಸಲಾಗುವುದು. 
 ಶಿವಪುತ್ರಪ್ಪ, ಪಿಡಿಒ, ನಕ್ಕುಂದಿ ಗ್ರಾಪಂ

„ರವಿ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next