ಹೊಸದಿಲ್ಲಿ: ‘ಗಾಂಧಿ ಕುಟುಂಬದ ಜಾತಿಯೇ ‘ಹುತಾತ್ಮ’ ಆದರೆ ಬಿಜೆಪಿ-ಆರ್‌ಎಸ್‌ಎಸ್ ಅದನ್ನು ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ’ ಎಂದು ಕಾಂಗ್ರೆಸ್ ಮಂಗಳವಾರ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರಿಗೆ ತಿರುಗೇಟು ನೀಡಿ ವ್ಯಾಪಕ ಆಕ್ರೋಶ ಹೊರ ಹಾಕಿದೆ.
ಅನುರಾಗ್ ಠಾಕೂರ್ ಅವರು ಸಂಸತ್ ನಲ್ಲಿ ಜಾತಿ ಆಧಾರಿತ ಗಣತಿಯ ಕುರಿತು ಚರ್ಚೆ ನಡೆಯುವ ವೇಳೆ ರಾಹುಲ್ ಗಾಂಧಿಯವರ ಜಾತಿಯನ್ನು ಸ್ಪಷ್ಟವಾಗಿ ಪ್ರಶ್ನಿಸಿದ್ದಕ್ಕಾಗಿ ಕಾಂಗ್ರೆಸ್ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದು ‘ಜಾತಿ ನಿಂದನೆ ಎದುರಿಸಲು ನಮ್ಮ ಪಕ್ಷ ಸಿದ್ಧವಿದೆ, ಆದರೆ ಜಾತಿ ಗಣತಿ ಮಾಡಲು ಸ್ಪಷ್ಟವಾಗಿ ತೀರ್ಮಾನಿಸಿದ್ದೇವೆ. ಬಿಜೆಪಿ-ಆರ್‌ಎಸ್‌ಎಸ್‌ಗೆ ಮನುಸ್ಮೃತಿಯಲ್ಲಿ ನಂಬಿಕೆಯಿದೆ, ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಒಂದು ಚೂರೂ ಇಲ್ಲ. ಬಿಜೆಪಿ ದೇಶದಲ್ಲಿ 5,000 ವರ್ಷಗಳ ಹಿಂದಿನ ಸಾಮಾಜಿಕ ಶೋಷಣೆಯನ್ನು ಮುಂದುವರಿಸಲು ಬಯಸುತ್ತಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ ಹೊರ ಹಾಕಿದ್ದು “ಸಾಮಾಜಿಕ-ಆರ್ಥಿಕ ಜಾತಿ ಗಣತಿಯು ಈ ದೇಶದ 80 ಪ್ರತಿಶತ ಜನರ ಬೇಡಿಕೆಯಾಗಿದೆ. ಇಂದು ಸಂಸತ್ತಿನಲ್ಲಿ ಜಾತಿ ಗೊತ್ತಿಲ್ಲದವರು ಜಾತಿ ಗಣತಿಯ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಭಾರತದ ಜನಸಂಖ್ಯೆಯ ಶೇಕಡಾ 80 ರಷ್ಟು ಜನರು ಈಗ ಸಂಸತ್ತಿನಲ್ಲಿ ನಿಂದನೆಗೊಳಗಾಗುತ್ತಾರೆಯೇ?. ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದ ಮೇರೆಗೆ ಈ ಮಾತನ್ನು ಹೇಳಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.