Advertisement

ಗಾಂಧೀಜಿಗೆ ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ನಂಬಿಕೆ ಇರಲಿಲ್ಲ

12:12 PM Jul 09, 2018 | Team Udayavani |

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಹೊಂದಿರಲಿಲ್ಲ ಎನಿಸುತ್ತದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌ ಅಭಿಪ್ರಾಯಪಟ್ಟರು. 

Advertisement

ವಿದ್ಯಾಶ್ರೀ ಪ್ರಕಾಶನದ ವತಿಯಿಂದ ನಗರದ ಗಾಯನ ಸಮಾಜದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮ.ಸು.ಮನ್ನಾರ್‌ ಕೃಷ್ಣರಾವ್‌ ಅವರ “ಸರ್ದಾರ್‌ ವಲ್ಲಭಭಾಯ್‌ ಪಟೇಲ್‌’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಕಾಂಗ್ರೆಸ್‌ನಲ್ಲಿ ಗಾಂಧೀಜಿ ಉನ್ನತ ನಾಯಕರಾಗಿದ್ದರಿಂದ ಯಾರೂ ಅವರಿಗೆ ಎದುರು ಹೇಳುತ್ತಿರಲಿಲ್ಲ. ಹೀಗಾಗಿ, ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆ ವೇಳೆ ತಮಗೆ ಇಷ್ಟವಿಲ್ಲದ ವ್ಯಕ್ತಿಯನ್ನು ಗಾಂಧೀಜಿ ಎಂದೂ ಸ್ಪರ್ಧಿಸಲು ಬಿಡುತ್ತಿರಲಿಲ್ಲ. ಅವರ ಬದಲಿಗೆ ಮತ್ತೂಬ್ಬರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡುತ್ತಿದ್ದರು ಎಂದು ಹೇಳಿದರು.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಸ್ಪರ್ಧಿಸಿದಾಗ ಗಾಂಧೀಜಿ ಅಡ್ಡಿಪಡಿಸಿದರು. ನೇತಾಜಿ ಸುಭಾಷ್‌ ಚಂದ್ರಬೋಸ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾದರೂ ಅವರಿಂದ ರಾಜೀನಾಮೆ ಕೊಡಿಸಿದ್ದರು. ಇನ್ನು ರಾಜಾಜಿ ಅವರಿಗೆ ನಾಮಪತ್ರ ಸಲ್ಲಿಸಲು ಕೂಡ ಅವಕಾಶ ನೀಡಿರಲಿಲ್ಲ ಎಂಬುದೂ ಇತಿಹಾಸದಿಂದ ತಿಳಿಯುತ್ತದೆ. ಹೀಗಾಗಿ, ಗಾಂಧೀಜಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಹೊಂದಿರಲಿಲ್ಲ ಅನಿಸುತ್ತದೆ ಎಂದು ಹೇಳಿದರು.

ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರು ಅಧ್ಯಕ್ಷರಾಗಬೇಕೆಂದು ಸಮಿತಿಯಲ್ಲಿದ್ದ 15 ಜನರ ಪೈಕಿ 12 ಜನ ಹೇಳಿದ್ದರು. ಆದರೆ, ನೆಹರೂ ಅವರ ಹೆಸರನ್ನು ಯಾರೂ ಹೇಳಿರಲಿಲ್ಲ. ಆದರೂ, ಗಾಂಧೀಜಿಯವರು ನೆಹರೂ ಅವರನ್ನೇ ಆಯ್ಕೆ ಮಾಡಿದ್ದರು. ನಂತರದಲ್ಲಿ ಎಲ್ಲರೂ ಅವರ ಮಾತಿಗೆ ಬೆಲೆ ಕೊಟ್ಟು ನೆಹರೂ ಅವರನ್ನು ಆಯ್ಕೆ ಮಾಡುತ್ತಾರೆ. ಕೃಷ್ಣರಾವ್‌ ಅವರ ಪುಸ್ತಕ ಓದಿದ ನಂತರ ಗಾಂಧೀಜಿಯವರ ಮೇಲಿದ್ದ ನಂಬಿಕೆ ಕಡಿಮೆಯಾಗಿದೆ ಎಂದು ಹೇಳಿದರು.

Advertisement

ಸರ್ದಾರ್‌ ಪಟೇಲ್‌ ಅವರ ಜೀವನದ ಕುರಿತು ಪುಸ್ತಕ ಓದಿದರೆ ಹಲವಾರು ವ್ಯಕ್ತಿಗಳ ಜೀವನ ಚರಿತ್ರೆಯ ಚಿತ್ರಣ ದೊರೆಯುತ್ತದೆ.  ತ್ಯಾಗ್ಯ ಎಂದರೆ ಅದು ಪಟೇಲರು ಎಂಬುದು ಸ್ಪಷ್ಟವಾಗುತ್ತದೆ. ತಮಗೆ ಸ್ಥಾನ ತಪ್ಪಿದರೂ ಎಂದೂ ಅವರು ನೆಹರೂ ಅವರಿಗೆ ಅಸಹಕಾರ ನೀಡಲಿಲ್ಲ. ಬದಲಿಗೆ ಅವರಿಗೆ ಬೆಂಬಲವಾಗಿ ನಿಂತು ಸಹಾಯ ಮಾಡಿದ್ದಾರೆ ಎಂದರು.

ಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಮಾತನಾಡಿ, ಯುವಕರಿಗೆ ಸ್ಫೂರ್ತಿಯಾಗುವಂತಹ ಮಾದರಿ ವ್ಯಕ್ತಿಗಳು ಪ್ರಸ್ತುತ ಸಂದರ್ಭದಲ್ಲಿ ಯಾರು ಇಲ್ಲ. ಜಾತಿ, ಮತ, ಧರ್ಮಗಳನ್ನು ಮೀರಿ ಮನುಷ್ಯನನ್ನು ಮನುಷ್ಯನಾಗಿ ಕಾಣುವ ವಾತಾವರಣ ನಿರ್ಮಾಣವಾಗಬೇಕಾದರೆ, ಸರ್ದಾರ್‌ ಪಟೇಲ್‌ರಂತಹವರು ಇಂದಿಗೂ ಪ್ರಸ್ತುತ ಎನಿಸುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಲೇಖಕ ಮ.ಸು.ಮನ್ನಾರ್‌ ಕೃಷ್ಣ ರಾವ್‌, ಅಕಾಡೆಮಿ ಫಾರ್‌ ಕ್ರಿಯೇಟಿವ್‌ ಟೀಚಿಂಗ್‌ನ ಮುಖ್ಯಸ್ಥ ಡಾ.ಗುರುರಾಜ ಕರಜಗಿ ಸೇರಿದಂತೆ ಪ್ರಮುಖರು ಹಾಜರಿದ್ದರು. 

ಭಾರತ ರತ್ನ ನೀಡಲು 41 ವರ್ಷ ಬೇಕಾಯಿತು: ಪ್ರಧಾನಮಂತ್ರಿ ಸ್ಥಾನ ಬಿಟ್ಟುಕೊಟ್ಟ ಸರ್ದಾರ್‌ ಪಟೇಲರಿಗೆ ನೆಹರೂ ಅವರು ಪ್ರಧಾನಿಯಾಗಿದ್ದ 17 ವರ್ಷಗಳು, ಅವರ ಮಗಳು ಪ್ರಧಾನಿಯಾಗಿದ್ದ 16 ವರ್ಷ ಹಾಗೂ ಮೊಮ್ಮಗ ಪ್ರಧಾನಿಯಾಗಿದ್ದ 5 ವರ್ಷಗಳಲ್ಲಿ ಭಾರತ ರತ್ನ ಪ್ರಶಸ್ತಿ ದೊರೆಯಲಿಲ್ಲ.

41 ವರ್ಷಗಳ ಕಾಲ ಅವರಿಗೆ ಪ್ರಶಸ್ತಿ ನೀಡಲು ಸಮಸ್ಯೆ ಉಂಟು ಮಾಡಿದರು. ಕೊನೆಗೆ ರಾಜೀವ್‌ ಗಾಂಧಿ, ಮುರಾರ್ಜಿ ದೇಸಾಯಿ ಅವರೊಂದಿಗೆ ಪ್ರಶಸ್ತಿ ನೀಡಲಾಯಿತು. ಇದು ನಮ್ಮ ಭಾರತ ದೇಶದ ದೌಭಾಗ್ಯ ಎಂದು ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌ ಅವರು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next