Advertisement

ಮಕ್ಕಳ ಬಳಿ ಬಂದ ಗಾಂಧಿ ಬಾಪು 

06:00 AM Dec 07, 2018 | |

ಮಹಾತ್ಮಾ ಗಾಂಧಿ ಅವರು ಜನಿಸಿ 150 ವರ್ಷಗಳಾದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಗಾಂಧಿ 150 ಒಂದು ರಂಗಪಯಣ ಎಂಬ ಅಭಿಯಾನದಲ್ಲಿ ಬೊಳುವಾರು ಮಹಮದ್‌ ಕುಂಞಿ ಅವರ “ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ಆಧರಿಸಿ ಪಾಪು ಬಾಪು ನಾಟಕ ಪ್ರದರ್ಶನ ವಾರ್ತಾ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಪರಿಕಲ್ಪನೆಯಲ್ಲಿ ಶಿರಸಿಯ ರಂಗನಿರ್ದೇಶಕ ಡಾ| ಶ್ರೀಪಾದ ಭಟ್‌ ನಿರ್ದೇಶನದಲ್ಲಿ ರಾಜ್ಯದೆಲ್ಲೆಡೆ ನಡೆಯುತ್ತಿದೆ. 

Advertisement

ನೀನು ಎಲ್ಲವನ್ನೂ ಕಳೆದುಕೊಂಡಿರಬಹುದು, ಆದರೆ ದೇವರನ್ನು ಕಳೆದುಕೊಂಡಿಲ್ಲ. ಇಂತಹ ಪ್ರೇರಣಾದಾಯಿ ಆತ್ಮವಿಶ್ವಾಸದ ಮಾತು ಮೋಹನದಾಸ ಕರಮ್‌ಚಂದ್‌ ಗಾಂಧಿಯನ್ನು ಮಹಾತ್ಮಾ ಗಾಂಧಿಯಾಗಿಸಿತು. ಹಾಗೆಯೇ ನಾವು ಗಾಂಧಿಯನ್ನು ಕಳೆದುಕೊಂಡಿರಬಹುದು ಆದರೆ ಗಾಂಧಿ ತತ್ವವನ್ನಲ್ಲ, ಗಾಂಧಿ ಬಿಟ್ಟುಹೋದ ಮೌಲ್ಯಗಳನ್ನಲ್ಲ, ಗಾಂಧಿ ಕಲಿಸಿದ ಪಾಠಗಳನ್ನಲ್ಲ. ಇಂತದ್ದೊಂದು ಅದ್ಭುತ ಸಂದೇಶ ನೀಡುವಲ್ಲಿ ಯಶಸ್ವಿಯಾದದ್ದು ಪಾಪು-ಬಾಪು ಎನ್ನುವ ನಾಟಕ. 

ಕುಂದಾಪುರದ ಜೂನಿಯರ್‌ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನಡೆದ ನಾಟಕದ ಸಾರ ಇದು. ಸಮುದಾಯ ಕುಂದಾಪುರದ ಉದಯ್‌ ಗಾವ್ಕರ್‌ ಅವರ ಮುತುವರ್ಜಿಯಿಂದಾಗಿ ಶಿಕ್ಷಣ ಇಲಾಖೆ ಪ್ರೋತ್ಸಾಹದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಶಾಲೆ, ಕಾಲೇಜುಗಳಲ್ಲಿ ಈ ನಾಟಕ ಪ್ರದರ್ಶನ ಕಂಡಿತು. 

ತೆರೆದಿಟ್ಟ ಪುಸ್ತಕದಂತೆ ಇರುವ ಗಾಂಧಿಯ ಬದುಕಿನ ವಿವಿಧ ಮಜಲುಗಳನ್ನು ಪ್ರೇಕ್ಷಕರ ಎದುರು ಸಾದರಪಡಿಸಿದ ಬಗೆ ಅನನ್ಯ. ಗಾಂಧಿಯನ್ನು ಈಗಿನ ಜಮಾನಕ್ಕೆ ಪರಿಚಯಿಸುವುದು ಸುಲಭದ ಮಾತಲ್ಲ. ಚೂರೇ ಚೂರು ತಮಾಷೆ, ಮತ್ತಷ್ಟು ಗಂಭೀರ, ಒಂದಷ್ಟು ಮನಕಲುಕುವ ದೃಶ್ಯಗಳು, ಹಾಡು ಹೀಗೆ ಒಂದು ಸಿನಿಮಾದಂತೆ ನಾಟಕ ಸಾಗಿತು. ಮಕ್ಕಳಿಗೆ ಗಂಭೀರ ವಿಚಾರವನ್ನು ತಿಳಿಸಲು ಬಳಸಿಕೊಂಡ ಮಾಧ್ಯಮ ನಾಟಕವಾದರೂ ಅದರಲ್ಲಿ ಹೇಳಿದ ಸಂಗತಿಗಳು, ಸಂದೇಶಗಳು ಗಂಭೀರವಾಗಿದ್ದವು. ಎಳೆಯ ಮನಸ್ಸಿನಲ್ಲಿ ಗಾಂಧಿಯ ಕುರಿತಾಗಿ ಭಕ್ತಿ, ಪ್ರೀತಿ, ಗೌರವ, ಕಕ್ಕಲುತೆ, ಒಲವು, ಆಸಕ್ತಿ ಮೂಡುವಂತೆ ಮಾಡುವಂತೆ ಸಾಗಿತು ನಾಟಕ. 

ಆರಂಭದಲ್ಲಿ ಹಿನ್ನೆಲೆಯಲ್ಲಿ ಕೇಳುವ “ವೈಷ್ಣವ ಜನತೋ ತೇನೆ ಕಹಿಯೆ ಜೇ, ಪೀಡ್‌ ಪರಾ ಈ ಜಾನೇ ರೆ…’ ಎಂಬ ಸೊಗಸಾದ ಹಾಡಿಗೆ ಕಲಾವಿದರ ದೃಶ್ಯ ಚಿತ್ತಾರ ಬಿಡಿಸುತ್ತಿರುವುದನ್ನು ನೋಡುತ್ತಾ ನಾಟಕಕ್ಕೆ ತೆರೆದುಕೊಳ್ಳುವ ಪ್ರೇಕ್ಷಕರಿಗೆ, ಎಳವೆಯಲ್ಲಿ ಗಾಂಧಿ ಕಂಡ ಸನ್ನಿವೇಶಗಳನ್ನು ಮರುಸೃಷ್ಟಿಸುವ ಮೂಲಕ ಕಥೆ ಹೇಳತೊಡಗುತ್ತಾರೆ ನಿರ್ದೇಶಕರು. ಗಾಂಧಿಯಲ್ಲಿ ಸತ್ಯದ ಮಾತಿಗೆ ಪ್ರೇರಣೆಯಾದ ಸತ್ಯಹರಿಶ್ಚಂದ್ರ ನಾಟಕದ ಸನ್ನಿವೇಶವನ್ನು ಭಾವಪೂರ್ಣವಾಗಿ ಪ್ರದರ್ಶಿಸಲಾಯಿತು. ತಂದೆಯ ಚಿಕಿತ್ಸೆಗಾಗಿ ಚಿನ್ನ ಕದ್ದ ಗಾಂಧಿ ಅದನ್ನು ಪತ್ರದ ಮೂಲಕ ತಂದೆಗೆ ತಿಳಿಸಿ ಅವರಿಂದ ಹೃದಯಸ್ಪರ್ಶಿ ಅಪ್ಪುಗೆ ಮೂಲಕ ಪಾಠ ಕಲಿತದ್ದು, ಬ್ಯಾರಿಷ್ಟರ್‌ ಪದವಿಗಾಗಿ ವಿದೇಶಕ್ಕೆ ತೆರಳಿ ಅಲ್ಲಿ ಕಲಿಕೆಯ ಹಂತದಲ್ಲಿ ವಿದೇಶೀ ಶೈಲಿಯ ವ್ಯಾಮೋಹಕ್ಕೆ ಒಳಗಾದದ್ದು, ಕಾನೂನು ಪದವೀಧರನಾಗಿ ದಕ್ಷಿಣ ಅಮೆರಿಕಾದಲ್ಲಿ ಉದ್ಯೋಗಕ್ಕೆ ಸೇರಿ ರೈಲಿನಲ್ಲಿ ಭಾರತೀಯನೆಂದು ಹೊರತಳ್ಳಲ್ಪಟ್ಟದ್ದು , ಭಾರತಕ್ಕೆ ಬಂದಾಗ ತೃತೀಯ ದರ್ಜೆ ರೈಲಿನಲ್ಲಿ ಭಾರತ ದರ್ಶನ ಮಾಡಿದ್ದು, ಅಸ್ಪೃಶ್ಯತೆ ನಿವಾರಣೆಗೆ ಪಣ ತೊಟ್ಟದ್ದು, ಕೋಟು ಕಳಚಿ ಗಾಂಧಿಯಾದದ್ದು, ಉಪ್ಪಿನ ಸತ್ಯಾಗ್ರಹ ಕೈಗೊಂಡದ್ದು ಹೀಗೆ ಪ್ರತಿ ದೃಶ್ಯಗಳೂ ಒಂದೊಂದು ದೃಶ್ಯಕಾವ್ಯಗಳಾಗಿದ್ದವು. ಗಾಂಧಿಯ ಅನುಭವಗಳನ್ನು “ಹೊರಗೆ ಚಳಿ, ಒಳಗೆ ಜ್ವಾಲಾಗ್ನಿ’ ಎಂದು ಕಾವ್ಯಕಾವನ್ನು ಚೆನ್ನಾಗಿ ತೋರಿಸಿದ್ದರು. 

Advertisement

ಬೆನ್ನ ಹಿಂದೆ ಮಾತಾಡಿಕೊಳ್ಳುವವರ ಕುರಿತು ತಿಳಿದಿದೆಯೇ ಎಂದು ಕೇಳಿದ ದಕ್ಷಿಣ ಆಫ್ರಿಕಾದ ನ್ಯಾಯಾಧೀಶರಿಗೆ ಗಾಂಧಿ ಕೊಟ್ಟ ಉತ್ತರ ಕಾದ ಕಬ್ಬಿಣದ ಮೇಲೆ ಬಿದ್ದ ಹೊಡೆತದಂತಿದ್ದವು. ಪ್ರಹ್ಲಾದ ಹರಿಭಕ್ತಿಯ ಕುರಿತು ಹೇಳಿದಾಗ ಹಿರಣ್ಯಕಶ್ಯಪುವಿನ ಆಸ್ಥಾನದಲ್ಲಿ ಎಲ್ಲರೂ ನಕ್ಕರು, ಕೆಲವರು ನಗಲಿಲ್ಲ. ಏಸುವನ್ನು ಕಂಬಕ್ಕೆ ಏರಿಸಿದಾಗ ಎಲ್ಲರೂ ನಕ್ಕರು, ಕೆಲವರು ನಗಲಿಲ್ಲ. ಸಾಕ್ರಟೀಸ್‌ ಮಾತಾಡತೊಡಗಿದಾಗ ಎಲ್ಲರೂ ನಕ್ಕರು, ಕೆಲವರು ನಗಲಿಲ್ಲ. ಮೀರಾಬಾಯಿಯ ಭಕ್ತಿಯ ಪಾರಮ್ಯಕ್ಕೆ ಎಲ್ಲರೂ ನಕ್ಕರು, ಕೆಲವರು ನಗಲಿಲ್ಲ. ಹಾಗೆಯೇ ನನ್ನ ಸ್ಥಿತಿ ಕೂಡಾ ಎಂದು ಗಾಂಧಿ ಹೇಳಿದಾಗ ಪ್ರೇಕ್ಷಕ ಸಂದೋಹ ಸ್ತಬ್ಧವಾಗುತ್ತಿತ್ತು.

ಸೂರ್ಯನಾರಾಯಣ ಬೆಳಗಾವಿ, ಸತೀಶ್‌ ಪಂಚಗೌರಿ ತಿಪಟೂರು, ಮಹಂತೇಶ ಶಿ. ದೊಡಮನಿ ಧಾರವಾಡ, ರಂಜಿತಾ ಈ. ಜಾಧವ್‌ ಧಾರವಾಡ, ನಿತಿನ್‌ ಡಿ.ಆರ್‌. ಸುಳ್ಯ, ಲಕ್ಷ್ಮಣ ರೊಟ್ಟಿ ಹಾವೇರಿ, ರೂಪಾ ಹುಣಸೂರು, ಮಧ್ವರಾಜ್‌ ಉಡುಪಿ, ಸುಭಾಸ್‌ ಹುಣಸೂರು, ನಾಗರಾಜ್‌, ಬಸವರಾಜು ಬಿ.ಎಸ್‌., ಮಂಜುನಾಥ ಕಠಾರಿ ತರಿಕೆರೆ, ಅಣ್ಣಪ್ಪ, ರೇಣುಕಾ ಹೊಸಪೇಟೆ ಮೊದಲಾದವರ ತಂಡದಿಂದ ಉತ್ತಮ ಪ್ರದರ್ಶನ ನೀಡಲ್ಪಟ್ಟಿತು. ರಂಗಭೂಮಿಯ ತರಬೇತಿ ಪಡೆದ ಕಲಾವಿದರ ಈ ನಾಟಕಕ್ಕೆ ದೇಸೀ ಸಂಗೀತ ಬಳಸಿದ್ದರೆ ಇನ್ನಷ್ಟು ಮೆರುಗು ಹೆಚ್ಚುತ್ತಿತ್ತು.

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next