ಮುದ್ದೇಬಿಹಾಳ: ಪಂಚಾಯತ್ ರಾಜ್ ಇಲಾಖೆಯು ಕೊಡಮಾಡುವ 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಪಂ ಆಯ್ಕೆ ಆಗಿದೆ. ತಾಲೂಕಿನಿಂದ 5 ಪಂಚಾಯಿತಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆಯಾ ಪಂಚಾಯಿತಿಗಳ ಸಾಧನೆಗೆ ನೀಡುವ ಅಂಕಗಳ ಆಧಾರದಲ್ಲಿ ಹೆಚ್ಚು ಅಂಕ ಗಳಿಸಿದ್ದರಿಂದ ಈ ಪಂಚಾಯಿತಿ ಆಯ್ಕೆ ಮಾಡಿ ವಿಜಯಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿಗಳು ಇಲಾಖೆಗೆ ಶಿಫಾರಸು
ಮಾಡಿದ್ದರು.
ಕೋವಿಡ್-19 ನಿಯಮಗಳ ಹಿನ್ನೆಲೆ ಪ್ರತಿ ವರ್ಷ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಡೆಯಬೇಕಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಳೆದ ವರ್ಷದಿಂದ ನಡೆಸಿಲ್ಲ. ಸದ್ಯ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿ ಪಂಚಾಯಿತಿ ಅಧ್ಯಕ್ಷ, ಪಿಡಿಒ ಅವರನ್ನು ಕರೆಸಿಕೊಂಡು ಪುರಸ್ಕಾರ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಂತಸ ತಂದಿದೆ: ತಮ್ಮ ಪಂಚಾಯಿತಿ ರಾಜ್ಯಮಟ್ಟದ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಅಧ್ಯಕ್ಷ ಸಿದ್ರಾಮಯ್ಯ ಗುರುವಿನ್ ಮತ್ತು ಪಿಡಿಒ ಪರಶುರಾಮ ಕಸನಕ್ಕಿ ಅವರು ಉದಯವಾಣಿಯೊಂದಿಗೆ ಮಾತನಾಡಿ ನಮ್ಮ ಕಾರ್ಯನಿಷ್ಠೆ, ಜನಪರ ಚಟುವಟಿಕೆಗಳು ಮತ್ತು ಸಾಧನೆ ಪರಿಗಣಿಸಿ ಹೆಚ್ಚಿನ ಅಂಕ ದೊರೆತಿದ್ದರಿಂದ ಪುರಸ್ಕಾರ ದೊರೆತು ನಮ್ಮ ಜವಾಬ್ದಾರಿ ಹೆಚ್ಚಿಸಿದಂತಾಗಿದೆ. ತೆರಿಗೆ ವಸೂಲಾತಿ, ಮೂಲಸೌಕರ್ಯ ಒದಗಿಸುವಿಕೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಪ್ರಗತಿ, ಬೀದಿ ದೀಪ ನಿರ್ವಹಣೆ, ವೈಯುಕ್ತಿಕ ಶೌಚಾಲಯ ನಿರ್ಮಾಣ ಹೀಗೆ ಹತ್ತು ಹಲವು ಅಭಿವೃದ್ಧಿಪರ ಚಟುವಟಿಕೆಗಳು ನಮಗೆ ಪ್ರಶಸ್ತಿ ದೊರಕಿಸಿಕೊಟ್ಟಿವೆ. ನಮಗೆ ಸಂದ ಪುರಸ್ಕಾರ ನಮ್ಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಜನರಿಗೆ ಸಲ್ಲುತ್ತದೆ ಎಂದರು.
ಹೇಗಿರುತ್ತದೆ ಆಯ್ಕೆ?: ಪುರಸ್ಕಾರಕ್ಕೆ ಪಂಚಾಯಿತಿ ಆಯ್ಕೆ ಮಾಡಲು ಹಲವು ಮಾನದಂಡ ರೂಪಿಸಲಾಗಿರುತ್ತದೆ. ಹಣಕಾಸಿನ ನಿರ್ವ ಹಣೆ, ಮೂಲ ಸೌಕರ್ಯ, ಆಡಳಿತ, ಜೀವನ ಗುಣಮಟ್ಟ ವಿಭಾಗಗಳನ್ನು ಮಾಡಿ 132 ಪ್ರಶ್ನೆಗಳಿಗೆ 250 ಅಂಕ ನಿಗದಿಪಡಿಸಲಾಗಿರುತ್ತದೆ. ಇದರಲ್ಲಿ ಸಾಧನೆ ತೋರುವ, ಅತಿ ಹೆಚ್ಚು ಅಂಕ ಪಡೆಯುವ ಪಂಚಾಯಿತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಅಭಿವೃದ್ದಿಗೆ ವಿಶೇಷ ವಿಧಾನ ಅಳವಡಿಸಿಕೊಂಡಿದ್ದರ ಮಾಹಿತಿ ಅಪೇಕ್ಷಿತವಾಗಿರುತ್ತದೆ. ಮಾನದಂಡಗಳಿಗೆ ಉತ್ತರಿಸಲು ಆನ್‌ಲೈನ್‌ನಲ್ಲೇ ಅವಕಾಶ ಮಾಡಿಕೊಡಲಾಗಿರುತ್ತದೆ. ನೈಜ ಮಾಹಿತಿಯನ್ನು ನೀಡುವ ಮೂಲಕ ಪುರಸ್ಕಾರಕ್ಕೆ ಸ್ಪರ್ಧಿಸಿ ಅರ್ಹತೆ ಗಳಿಸಬಹುದಾಗಿದೆ.