Advertisement

“ಗಾಂಧಿ, ಅಂಬೇಡ್ಕರ್‌ ಹೈಜಾಕ್‌ ಮಾಡಿದ ಮೋದಿ’

12:21 PM Jan 31, 2017 | Team Udayavani |

ಮೈಸೂರು: ಪ್ರಧಾನಿ ನರೇಂದ್ರಮೋದಿ ಅವರು ಗಾಂಧಿ, ಅಂಬೇಡ್ಕರ್‌, ಜೆಪಿ, ಲೋಹಿಯಾ ಅವರನ್ನೆಲ್ಲ ವೈಚಾರಿಕವಾಗಿ ಹೈಜಾಕ್‌ ಮಾಡಿದ್ದಾರೆ ಎಂದು ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಸುರೇಂದ್ರ ಕೌಲಗಿ ಟೀಕಿಸಿದರು.

Advertisement

ಹುತಾತ್ಮ ದಿನಾಚರಣೆ ಅಂಗವಾಗಿ ಸಮುದಾಯ ಮೈಸೂರು ಸೋಮವಾರ ನಗರದಲ್ಲಿ ಆಯೋಜಿ ಸಿದ್ದ “ಕಳೆದು ಹೋಗುತ್ತಿರುವ ಗಾಂಧಿ; ಆವರಿಸಿ ಕೊಳ್ಳುತ್ತಿರುವ ಗೋಡ್ಸೆ’ ಸಂವಾದದಲ್ಲಿ ಮಾತನಾಡಿದರು. ಜೆ.ಪಿ ಎಲ್ಲ ಕ್ಷೇತ್ರಗಳಲ್ಲಿ ಸಂಪೂರ್ಣ ಕ್ರಾಂತಿ ಯನ್ನು ಪ್ರತಿಪಾದಿಸಿದರೆ, ಮೋದಿ ಎಲ್ಲ ಕಡೆ ಏಕಸ್ವಾಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಖಾದಿ ಮಂಡಳಿಯ ಕ್ಯಾಲೆಂಡರ್‌ನಲ್ಲಿ ಗಾಂಧೀಜಿ ಚಿತ್ರ ಹೋಗಿ, ಪ್ರಧಾನಿಯ ಚಿತ್ರ ಬಂತು. ಕ್ಯಾಲೆಂಡರ್‌ನಲ್ಲಿ ತಮ್ಮ ಚಿತ್ರ ಹಾಕಿಕೊಂಡ ಮಾತ್ರಕ್ಕೆ ಗಾಂಧೀಜಿಯನ್ನು ಬದಲಿಸಲಾಗಲ್ಲ. ಖಾದಿ ಹಾಕಿದ ಮಾತ್ರಕ್ಕೆ ಗಾಂಧಿ ವಿಚಾರವನ್ನು ಒಪ್ಪಿದಂತಲ್ಲ ಎಂದು ಟೀಕಾ ಪ್ರಹಾರ ನಡೆಸಿದ ಅವರು, ಅಕ್ಟೋಬರ್‌ 2, ಜನವರಿ 30ರಂದು ಮಾತ್ರ ಗಾಂಧೀಜಿ ನೆನೆಯು ತ್ತಿದ್ದೇವೆ. ಈ ಎರಡು ದಿನಗಳಲ್ಲಿ ಪ್ರಧಾನಿ ರಾಜ್‌ಘಾಟ್‌ಗೆ ತೆರಳಿ ಪುಷ್ಪಗುತ್ಛ ಇರಿಸಿ ಬಂದರಾಯಿತೇ, ಅ.2ರಂದು ರಾಜ್‌ಘಾಟ್‌ನಲ್ಲಿ 2 ಗಂಟೆ ಕಾಲ ಕುಳಿತು ಪ್ರಧಾನಿ ಚರಕದಿಂದ ನೂಲಲಿ ಎಂದರು.

ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಖಾದಿಯಲ್ಲಿ ಶೇಕಡ 90ರಷ್ಟು ನಕಲಿ ಇದೆ. ಪಾಲಿಸ್ಟರ್‌ ಸೇರಿದಂತೆ ಕೃತಕ ವಸ್ತುಗಳನ್ನು ಬೆರೆಸಲಾಗುತ್ತಿದೆ. ಇದನ್ನು ತಪ್ಪಿಸಿ ಶುದ್ಧ ಖಾದಿ ತರುವ ಸಂಕಲ್ಪವನ್ನು ಪ್ರಧಾನಿ ಮೋದಿ ಮಾಡಬೇಕು. ದೇಶದಲ್ಲಿ ಗಾಂಧಿ ವಿಚಾರದ ವಿರುದ್ಧ ನಡೆಯುತ್ತಿರುವ ಹುನ್ನಾರವನ್ನು ತಿಳಿದುಕೊಂಡು ವಿರೋಧಿಸಬೇಕಿದೆ. ಸಮಾಜ ಪ್ರಶ್ನಿಸುವ ಧೈರ್ಯವನ್ನೇ ಕಳೆದುಕೊಂಡಿದೆ. ರಾಜ್ಯ ಸರ್ಕಾರದ ಭಾಗ್ಯಗಳಿಂದ ಯಾರಿಗೆ ಒಳ್ಳೆಯದಾಗುತ್ತದೆ ಎಂದು ಪ್ರಶ್ನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶ ಹೋಗುತ್ತಿರುವ ದಿಕ್ಕು ಸರಿಯಿಲ್ಲ. ಆದರ್ಶ ಸಮಾಜದ ಕಡೆಗೆ ಭಾರತವನ್ನು ತರಬೇಕಿದೆ. ಗಾಂಧೀಜಿ ಒಬ್ಬರೇ ದೇಶಕ್ಕೆ ಸ್ವಾತಂತ್ರÂ ತಂದು ಕೊಡಲಿಲ್ಲ. ಅವರ ಹಿಂದೆ ಕೋಟ್ಯಂತರ ಜನರಿದ್ದರು. ಹುತಾತ್ಮ ದಿನದಂದು ಅವರೆಲ್ಲರನ್ನೂ ಸ್ಮರಿಸುವ ಕೆಲಸವಾಗಬೇಕು. ಗಡಿಕಾಯುವಾಗ ಹುತಾತ್ಮರಾಗುವ ಯೋಧರನ್ನು ನೆನೆಯಬೇಕು. ಅವರಿಲ್ಲದಿದ್ದರೆ ನಾವಿಲ್ಲಿ ನಿಶ್ಚಿಂತೆಯಿಂದ ಬದುಕಲಾಗುತ್ತಿರಲಿಲ್ಲ ಎಂದರು.

Advertisement

ಆವರಿಸಿಕೊಳ್ಳುತ್ತಿರುವ ಗೋಡ್ಸೆ ವಿಚಾರಗಳೊಂದಿಗೆ ಗಾಂಧಿಯನ್ನು ಮುಖಾಮುಖೀಯಾಗಿಸಬೇಕಿದೆ. ದೇಶದಲ್ಲಿ ಕೋಮು ಭಾವನೆ ಬೆಳೆಯುತ್ತಿದ್ದು, ಗಾಂಧಿಯ ಬಗ್ಗೆ ಗೌರವ ಇದ್ದರೆ ಕೋಮು ಸೌಹಾರ್ದತೆಗೆ ಒತ್ತು ಕೊಡಬೇಕು. ಮಹಮ್ಮದ್‌ ಆಲಿ ಜಿನ್ನಾನ ಹಠಮಾರಿತನದಿಂದ ಅಂದು ದೇಶ ಇಬ್ಟಾಗವಾದರೆ, ಇಂದು ಹಿಂದೂ ರಾಷ್ಟ್ರ ಎಂಬ ವಾದದಿಂದ ಮತ್ತೂಮ್ಮೆ ದೇಶ ವಿಭಜನೆಯ ಆತಂಕ ಎದುರಾಗಿದೆ ಎಂದು ಹೇಳಿದರು.

ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಮುಜಾಫ‌ರ್‌ ಅಸಾದಿ ಮಾತನಾಡಿ, ಗಾಂಧಿ ಮತ್ತು ಗೋಡ್ಸೆ ಎರಡು ರೂಪಕಗಳು. ಗಾಂಧಿ ಮತ್ತು ಗೋಡ್ಸೆಯನ್ನು ಸಮನಾಗಿ ಕಾಣುವುದೇ ದೊಡ್ಡ ತಪ್ಪು. ಜಾತಿಗಳ ಮೂಲಕ ಗೋಡ್ಸೆ ರೂಪಕ ಕೆಳ, ಮಧ್ಯಮ ವರ್ಗಗಳನ್ನು ಆವರಿಸಿಕೊಳ್ಳುತ್ತಿದ್ದು, ತನ್ನ ಸಾಮಾಜಿಕ ತಳಹದಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಗಾಂಧಿಯನ್ನೂ ತನ್ನ ರಾಜಕೀಯದ ಭಾಗವಾಗಿ ನೋಡಲಾಗುತ್ತಿದೆ.

ಹೀಗಾಗಿ ಗೋಡ್ಸೆಯನ್ನು ಓಡಿಸುವ ಶಕ್ತಿಶಾಲಿ ಗಾಂಧಿ ನಮಗೆ ಬೇಕಿದೆ. ಅದಕ್ಕಾಗಿ ನಾವು ಹೊಸ ಗಾಂಧಿಯನ್ನು ಹುಡುಕಿಕೊಳ್ಳಬೇಕಿದೆ ಎಂದರು. ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಕೆ.ಬಸವರಾಜು ಅಧ್ಯಕ್ಷತೆವಹಿಸಿದ್ದರು. ಸಮುದಾಯ ಸಂಚಾಲಕ ವಜ್ರಮುನಿ ಹಾಜರಿದ್ದರು.

ಚರಕದ ಮುಂದೆ ನೂಲುತ್ತ ಕೂತ ಗಾಂಧಿಗೆ ನಮಿಸುವುದರ ಬದಲು, ಪ್ರಧಾನಿ ನರೇಂದ್ರ ಮೋದಿಯವರು ತಾವೇ ಚರಕದ ಮುಂದೆ ಫ್ಯಾನ್ಸಿಡ್ರೆಸ್‌ ಬಾಲಕನಂತೆ ಕೂತು ನೂಲಿಲ್ಲದೆ ನೂತಿದ್ದು! ಈ ಛದ್ಮವೇಷಕ್ಕೆ ಗಾಂಧಿಯನ್ನು ಬದಲಿಸಬಹುದಾದ ಶಕ್ತಿ ಇದೆಯೇ? ಅಸಲಿ ಅಸಲಿಯೇ; ನಕಲಿ ನಕಲಿಯೆ. ನಕಲಿಯ ಸ್ವಭಾವದಲ್ಲಿ ಥಳಕು ಹೆಚ್ಚಾಗಿರುತ್ತದೆ ಅಷ್ಟೆ.
-ದೇವನೂರ ಮಹಾದೇವ, ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next