ಪುತ್ತೂರು: ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ‘ಗಾಂಧಿ 150 -ಒಂದು ರಂಗಪಯಣ’ ತಂಡವು ಗುರುವಾರ ಪುತ್ತೂರು ತಾಲೂಕಿಗೆ ಆಗಮಿಸಿದ್ದು, ವಿವಿಧ ಕಡೆಗಳಲ್ಲಿ ಪ್ರದರ್ಶನ ನೀಡಿತು. ತಾಲೂಕಿನ ಹಲವೆಡೆಗಳಲ್ಲಿ ಬೊಳುವಾರು ಮಹಮ್ಮದ್ ಕುಂಞಿ ಅವರ ಕೃತಿ ಆಧಾರಿತ ‘ಪಾಪು-ಬಾಪು’ ನಾಟಕವನ್ನು ಡಾ| ಶ್ರೀಪಾದ ಭಟ್ ನಿರ್ದೇಶನದಲ್ಲಿ ಪ್ರದರ್ಶಿಸಲಿದ್ದು, ಬೆಳಗ್ಗೆ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಸಂಜೆ ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಾಟಕ ಪ್ರದರ್ಶನ ನಡೆಯಿತು.
ಇಂದು – ನಾಳೆ
ಡಿ. 21ರಂದು ರಾಮಕುಂಜದ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ, ಅಪರಾಹ್ನ ಕುಂಬ್ರ ಸರಕಾರಿ ಪ.ಪೂ.ಕಾಲೇಜಿನಲ್ಲಿ, ಡಿ. 22ರಂದು ಬೆಳಗ್ಗೆ ಪುತ್ತೂರು ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪರ್ಲಡ್ಕ ಬಾಲವನದಲ್ಲಿ ಹಾಗೂ ಸಂಜೆ ನೆಹರೂ ನಗರದ ಕಾಡು ಬಯಲು ರಂಗಮಂದಿರದಲ್ಲಿ ಸಾರ್ವಜನಿಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ‘ಗಾಂಧಿ ರಂಗಪಯಣ 150’ ರ ದ.ಕ. ಜಿಲ್ಲಾ ಸಂಚಾಲಕ ಮೌನೇಶ ವಿಶ್ವಕರ್ಮ ತಿಳಿಸಿದ್ದಾರೆ.