ಮಂಗಳೂರು: ದೇಶ ವಿದೇಶಗಳಿಂದ 21 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಜಗತ್ತಿನ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರಿದ ‘’ಗಂಧದ ಕುಡಿ’’ಚಲನಚಿತ್ರ ಮಾರ್ಚ್ 29ರಂದು ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಸಿನಿಮಾ ಹಿಂದಿಯಲ್ಲಿಯೂ “ಚಂದನವನ” ಹೆಸರಿನಲ್ಲಿ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ, ನಿರ್ದೇಶಕ ಕೆ.ಸತ್ಯೇಂದ್ರ ಪೈ ತಿಳಿಸಿದ್ದಾರೆ.
ಚಿತ್ರದ ಬಿಡುಗಡೆ ಕುರಿತಂತೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂತೋಷ್ ಶೆಟ್ಟಿ ಕಟೀಲು ಈ ಚಿತ್ರವನ್ನು ನಿರ್ದೇಶಿಸಿದ್ದು, ವಿಧಿ ವಿಪರ್ಯಾಸ ಗಂಧದ ಕುಡಿ ಸಿನಿಮಾ ತೆರೆಕಾಣುವ ಮೊದಲೇ ಅವರು ದುರಂತದಲ್ಲಿ ಸಾವನ್ನಪ್ಪಿರುವುದು ನಮಗೆ ತುಂಬಲಾರದ ನಷ್ಟ. ಈ ಚಿತ್ರದ ಸಮಗ್ರ ಯಶಸ್ಸು ಸಂತೋಷ್ ಶೆಟ್ಟಿಗೆ ಸಲ್ಲಬೇಕು ಎಂದು ಹೇಳಿದರು.
ಈ ಸಿನಿಮಾವನ್ನು ಕೆ.ಸತ್ಯೇಂದ್ರ ಪೈ ಮತ್ತು ಕೆ.ಕೃಷ್ಣ ಮೋಹನ್ ಪೈ ಅವರು ಇನ್ವೆಂಜರ್ ಟೆಕ್ನಾಲಜೀಸ್ ಬ್ಯಾನರ್ ನಡಿ ನಿರ್ಮಿಸಿದ್ದರು. ಗಂಧದ ಕುಡಿ ಪರಿಸರ ಕಾಳಜಿ ಹಾಗೂ ಜಾಗೃತಿ ಮೂಡಿಸುವ ಕಥಾ ಹಂದರ ಹೊಂದಿದ್ದು, ಚಿತ್ರ ಬಿಡುಗಡೆಗೂ ಮುನ್ನ 21 ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.
ಮುಂಬೈಯ ನಿಧಿ ಎಸ್.ಶೆಟ್ಟಿ, ಭಾರತೀಯ ಮೂಲದ ಅಮೆರಿಕದ ಕೀಷಾ, ಆಶ್ಲಿನ್, ಪ್ರಣತಿ, ವಿಘ್ನೇಶ್, ಶ್ರೀಶಾ, ಶ್ರೇಯಸ್ ಬಾಲ ನಟರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಶಿವಧ್ವಜ, ಪ್ರಸಿದ್ಧ ನಟ ರಮೇಶ್ ಭಟ್, ಜ್ಯೋತಿ ರೈ, ಅರವಿಂದ ಶೆಟ್ಟಿ ಕೊಜಕೊಳ್ಳಿ, ದೀಪಕ್ ಶೆಟ್ಟಿ, ಯೋಗೀಶ್ ಕೋಟ್ಯಾನ್, ಜಿಪಿ ಭಟ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಚಿತ್ರದ ಸಂಕಲನ ರವಿರಾಜ್ ಗಾಣಿಗ, ಪ್ರದೀಪ್ ರಾಯ್ ಕಲಾ ನಿರ್ದೇಶನ, ಸಚಿನ್ ಶೆಟ್ಟಿ ಮತ್ತು ಲಕ್ಷ್ಮೀಶ್ ಶೆಟ್ಟಿ ಛಾಯಾಗ್ರಹಣ, ಪ್ರೀತಾ ಮಿನೇಜಸ್ ಸಹ ನಿರ್ದೇಶನ, ರಜಾಕ್ ಪುತ್ತೂರು ಸಾಹಿತ್ಯ, ಸಂಭಾಷಣೆ ಚಿತ್ರಕ್ಕಿದೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ, ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ ಎಂದು ಹೇಳಿದರು.
ಅಲ್ಲದೇ ಗಂಧದ ಕುಡಿ ಸಿನಿಮಾದಲ್ಲಿ ಖ್ಯಾತ ಗಾಯಕ ವಿಜಯಪ್ರಕಾಶ್, ಶ್ರೇಯಾ ಜೈದೀಪ್, ಪ್ರಕಾಶ್ ಮಹದೇವ್, ರವಿ ಮಿಶ್ರಾ, ಸಾತ್ವಿ ಜೈನ್, ಲತೇಶ್ ಪೂಜಾರಿ ಹಾಡಿರುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಸಾದ್ ಕೆ ಶೆಟ್ಟಿ, ನಿಧಿ ಶೆಟ್ಟಿ, ನರಸಿಂಹ ಮಲ್ಯ, ಅರವಿಂದ ಶೆಟ್ಟಿ, ರಜಾಕ್ ಪುತ್ತೂರು,ಚೇತನ್, ರವಿರಾಜ್ ಗಾಣಿಗ ಉಪಸ್ಥಿತರಿದ್ದರು.