ಪಣಜಿ : ಗೋವಾದಲ್ಲಿ ಕನ್ನಡಿಗರನ್ನು ಘಾಟಿ ಎಂದು ಅವಮಾನಿಸಲಾಗುತ್ತಿದೆ. ಇಲ್ಲಿ ಕನ್ನಡಿಗರನ್ನು ವಿರೋಧಿಸುವವರು ಒಂದು ಪಕ್ಷವನ್ನು ಕಟ್ಟಿಕೊಂಡಿದ್ದಾರೆ. ಮುಂದೆ ಈ ಪಕ್ಷ ಅಧಿಕಾರಕ್ಕೆ ಬಂದರೆ ಕನ್ನಡಿಗರಿಗೆ ಹೆಚ್ಚಿನ ತೊಂದರೆಯಾಗಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ್ ನಾಟಿಕರ್ ಹೇಳಿದರು.
ಗೋವಾದ ವಾಸ್ಕೋದಲ್ಲಿ ಪುನೀತ್ ರಾಜಕುಮಾರ್ ರವರ ಗಂಧದ ಗುಡಿ ಚಲನಚಿತ್ರ ಬಿಡುಗಡೆ ಸಮಾರಂಭ ಹಾಗೂ ಕೋಟಿಕಂಠ ಗಾಯನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಗೋವಾದಲ್ಲಿ ಪೋಗೋ ಕಾಯ್ದೆ ಜಾರಿಯಾದರೆ ಕನ್ನಡಿಗರಿಗೆ ಹೆಚ್ಚಿನ ತೊಂದರೆಯಾಗಲಿದೆ. ಈ ಕಾಯಿದೆಯ ಅಡಿಯಲ್ಲಿ ಈಗಿನಂತೆ ಗೋವಾದಲ್ಲಿ 15 ವರ್ಷಗಳ ಕಾಲ ವಾಸ್ತವ್ಯ ಹೂಡಿದವರಿಗೆ ಅಗತ್ಯ ಸರ್ಟಿಫಿಕೇಟ್ ಸಿಗಲು ಸಾಧ್ಯವಿಲ್ಲ. ಇದರಿಂದಾಗಿ ಇಂತಹ ಕಾಯ್ದೆಗಳನ್ನು ವಿರೋಧಿಸುವ ಅಗತ್ಯವಿದೆ ಎಂದು ಮಂಜುನಾಥ್ ನಾಟಿಕರ್ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಚಲನಚಿತ್ರದ ಹಾಡುಗಳನ್ನು ಹಾಡಿ ಶೃದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯ ಉಪಾಧ್ಯಕ್ಷ ಮಹಾಂತೇಶ್ ಕಾರಿಗೇರಿ, ಕಾರ್ಯದರ್ಶಿ ಶಿವಾನಂದ್ ಮಸೀಬಿನಲ್, ಖಜಾಂಚಿ ದ್ಯಾಮಣ್ಣ ಹರಿಜನ, ಯುವ ಮೋರ್ಚಾ ಅಧ್ಯಕ್ಷ ಯಶವಂತ್ ಕಿಂಗ್, ರಾಜ್ಯ ಸಂಚಾಲಕ ವೈ .ಬಿರಾದಾರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಾಲ್ಮೀಕಿ, ಯುವ ಮೋರ್ಚಾ ಉಪಾಧ್ಯಕ್ಷ ಬಸವರಾಜ್ ಚಲವಾದಿ ಮತ್ತಿತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಛತ್ ಪೂಜೆ ವೇಳೆ ಬೆಂಕಿ ಅವಘಡ : 25ಕ್ಕೂ ಹೆಚ್ಚು ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ