Advertisement

ಇದು…ಕರ್ನಾಟಕದ ಹೆಮ್ಮೆಯ ಲಾಂಛನ ಗಂಡಭೇರುಂಡದ ರೋಚಕ ಇತಿಹಾಸ!

02:54 PM Oct 09, 2022 | ದಿನೇಶ ಎಂ |

ದೇಶ – ರಾಜ್ಯ ಅಥವಾ ಕೆಲವು ಜನಾಂಗಗಳನ್ನು ಕೂಡ ಗುರುತಿಸಲು ಮಾತ್ರವಲ್ಲದೆ, ಅವರ ಪ್ರತಿಷ್ಠೆ – ಪರಾಕ್ರಮ ಮತ್ತು ನಂಬಿಕೆಗಳ ಆಧಾರದ ಮೇಲೆ ಕೆಲವು ಸಂಕೇತಗಳು ಹುಟ್ಟಿಕೊಂಡಿವೆ. ಅವುಗಳು ರಾಜ್ಯದ ಬಾವುಟ, ಲಾಂಛನ, ನಾಣ್ಯಗಳ ಶೈಲಿ ಮುಂತಾದ ರೀತಿಯಲ್ಲಿ ತಮ್ಮದೇ ಹಿರಿಮೆ – ಇತಿಹಾಸಗಳನ್ನು ಹೊಂದಿವೆ.

Advertisement

ಇನ್ನು ನಮ್ಮ ರಾಜ್ಯದ ಲಾಂಛನ ನಿಜಕ್ಕೂ ವಿಭಿನ್ನವಾಗಿದೆ. ಗಂಡಭೇರುಂಡ ಪಕ್ಷಿಯು ಎರಡು ತಲೆ, ಚೂಪಾದ ಕೊಕ್ಕು, ಎರಡು ತಲೆಯು ಎರಡು ದಿಕ್ಕಿಗೆ ಪರಸ್ಪರ ವಿರುದ್ದವಾಗಿ ನಿಂತಿದ್ದು ಒಂದೇ ಶರೀರವನ್ನು ಹೊಂದಿದೆ. ಶಿವವೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿರುವ ಗಂಡಭೇರುಂಡ ಪಕ್ಷಿಯ ಪ್ರತಿಮೆ ಕರ್ನಾಟಕದ ಗಂಡಭೇರುಂಡ ಶಿಲ್ಪಗಳಲ್ಲಿ ಅತ್ಯಂತ ಪ್ರಾಚೀನವಾದುದು. ಎತ್ತರವಾದ ಸ್ತಂಭದ ಮೇಲೆ ನಿಂತಿರುವ ಈ ಶಿಲ್ಪದ ಶರೀರ ಮಾನವಾಕಾರವನ್ನು ಹೊಂದಿದ್ದು, ಕಂಠದ ಮೇಲೆ ಮಾತ್ರ ಗಿಡುಗ ಪಕ್ಷಿಯ ರೀತಿಯ ಎರಡು ತಲೆಗಳಿವೆ. ಈ ಪಕ್ಷಿ ರಾಕ್ಷಸರನ್ನು, ಆನೆಗಳನ್ನು ನುಂಗುತ್ತಿರುವಂತೆ ಚಿತ್ರಿಸಲಾಗಿದೆ. ಈ ಸ್ತಂಭದ ಅಡಿಯಲ್ಲಿರುವ ಶಾಸನದಲ್ಲಿ ಇದನ್ನು ಬೇರುಂಡೇಶ್ವರ ಎಂದು ಮುದ್ರಿಸಲಾಗಿದೆ. ಇದನ್ನು ಕಲ್ಯಾಣ ಚಾಳುಕ್ಯರ ಮಹಾಮಂಡಲೇಶ್ವರನಾಗಿದ್ದ ಚಾವುಂಡರಾಯರಸ ಕ್ರಿ.ಶ 969ರಲ್ಲಿ ಇದನ್ನು ಸ್ಥಾಪಿಸಿದನೆಂದು ಶಾಸನದಿಂದ ತಿಳಿದು ಬಂದಿದೆ..

ಮೈಸೂರು ಒಡೆಯರ ರಾಜ್ಯ ನಿರ್ಮಾಣದೊಂದಿಗೆ ಗಂಡಬೇರುಂಡ ಲಾಂಛನವು ಜೊತೆಯಾಗಿ ಬಂದು, ಇಂದಿನ ಕರ್ನಾಟಕ ಸರ್ಕಾರದ ಹಾಗೂ ಸಾರಿಗೆ ಸಂಸ್ಥೆಯ ಲಾಂಛನವಾಗಿ ಮನ್ನಣೆ ಗಳಿಸಿದೆ.ಇದು ಭೌಗೋಳಿಕವಾಗಿ ಬೇರೆ ದೇಶಗಳಲ್ಲೂ ಈ ಗಂಡಬೇರುಂಡ ಸ್ಥಾನ ಪಡೆದುಕೊಂಡಿದೆ. ಕ್ರಿ.ಪೂ.1000 ವರ್ಷಗಳಿಗಿಂತಲೂ ಹಿಂದಿನ ಕೆಲವು ಹಿಟ್ನೆಟ್ ಕಲಾಕೇಂದ್ರಗಳಲ್ಲಿ ಗಂಡಭೇರುಂಡ ಪಕ್ಷಿಯ ಶಿಲಾ ವಿನ್ಯಾಸಗಳು ಇವೆ. ಈಜಿಪ್ಟ್, ಅಸ್ಸೀರಿಯಾ ವೊದಲಾದ ದೇಶಗಳಲ್ಲಿ ಇದು ಫಲವಂತಿಕೆಯ ಆರಾಧನೆಗೆ ಸಂಬಂಧ ಪಟ್ಟ ಚಿಹ್ನೆಯಾಗಿತ್ತು ಎನ್ನಲಾಗಿದೆ.

ಸಿಥಿಯನ್ನರಿಂದ ಇದು ರಷ್ಯಾ,ಜರ್ಮನಿ ಮೊದಲಾದ ದೇಶಗಳಿಗೆ ಹರಡಿತೆಂದು ಹೇಳಲಾಗಿದೆ. ತಕ್ಷಶಿಲೆಯಲ್ಲಿ ದೊರಕಿರುವ ಒಂದು ಶಿಲ್ಪ ಅತ್ಯಂತ ಪ್ರಾಚೀನವಾದುದೆಂದು ನಂಬಲಾಗಿದೆ. ಇದು ನಿಜವಾದ ಪಕ್ಷಿಯೋ, ಕಾಲ್ಪನಿಕ ಪಕ್ಷಿಯೋ ಎಂಬ ಬಗ್ಗೆ ವಿದ್ವಾಂಸರಲ್ಲಿ ಇನ್ನೂ ಚರ್ಚೆಯ ವಿಷಯವಾಗಿದೆ.

ಗಂಡಬೇರುಂಡದ ಪೌರಾಣಿಕ ಹಿನ್ನೆಲೆ ಗಮನಿಸುವುದಾದರೆ, ಋಗ್ವೇದದಲ್ಲಿ ಬರುವ ಈ ಎರಡು ಹಕ್ಕಿಗಳು, ವಿಷ್ಣು ನರಸಿಂಹಾವತಾರವನ್ನೆತ್ತಿ ಹಿರಣ್ಯಕಶಪುವನ್ನು ಸಂಹಾರ ಮಾಡಿದ ಮೇಲೂ ನರಸಿಂಹನ ಕೋಪ ತಣ್ಣಗಾಗಲಿಲ್ಲ ಮತ್ತು ವಿಷ್ಣು ತನ್ನ ವೈಕುಂಠವನ್ನೂ ಮರೆತು ಪಾತಾಳದಲ್ಲಿ ಕಾಲ ಕಳೆಯುತ್ತಾರೆ. ಅವನಿಂದ ಇಡೀ ವಿಶ್ವವೇ ನಾಶವಾದಿತೆಂದು ಮತ್ತು ವಿಶ್ವದ ಪಾಲನೆಯೇ ನಿಂತು ಅಸಮತೋಲನ ಏರ್ಪಟ್ಟಾಗ ದೇವತೆಗಳು ಶಿವನನ್ನು ಪ್ರಾರ್ಥಿಸಿಕೊಳ್ಳುತ್ತಾರೆ. ವಿಷ್ಟುವನ್ನು ಶಾಂತಗೊಳಿಸಿ ಮೂಲ ರೂಪಕ್ಕೆ ತರಲು ಶಿವ ಶರಭಾವತಾರ ಎತ್ತಿ ನರಸಿಂಹನನ್ನು ಎದುರಿಸಿದ,ಆಗ ವಿಷ್ಣು ಶರಭನನ್ನು ಎದುರಿಸಲು ಗಂಡಭೇರುಂಡ ಪಕ್ಷಿಯಾದನು ಎಂಬುವುದು ಪುರಾಣ ಕಥೆ.

Advertisement

ಇನ್ನು ಇತಿಹಾಸವನ್ನು ಅವಲೋಕಿಸಿದರೆ ಕರ್ನಾಟಕದಲ್ಲಿ ಗಂಡಭೇರುಂಡವನ್ನು ಲಾಂಛನವಾಗಿ ಬಳಸಲು ಆರಂಭವಾದ್ದು 12ನೇ ಶತಮಾನದಲ್ಲಿ. ಹೊಯ್ಸಳ ಅರಸ 3ನೇ ನರಸಿಂಹ, ಮತ್ತು 3ನೇ ಬಲ್ಲಾಳ ಇವರ ಕಾಲದಲ್ಲಿ ಕೆಲವು ಶಿಲಾಶಾಸನಗಳ ಮೇಲೆ ಗಂಡಭೇರುಂಡ ಚಿತ್ರವಿರುವುದು ಕಂಡುಬಂದಿದೆ. ವಿಜಯನಗರದ ಸಾಮ್ರಾಟನಾಗಿದ್ದ ಅಚ್ಯುತರಾಯನ ಚಿನ್ನ ಮತ್ತು ತಾಮ್ರದ ನಾಣ್ಯಗಳ ಮೇಲೆ ಗಂಡಭೇರುಂಡದ ಮುದ್ರೆಯಿದೆ. ಇದರಲ್ಲಿ ಸೊಂಡಿಲು ಬಾಲವನ್ನೆತ್ತಿಕೊಂಡಿರುವ ಭಯಗ್ರಸ್ತವಾದ ಆನೆಗಳನ್ನು ಆ ಪಕ್ಷಿ ತನ್ನೆರಡು ಕಾಲುಗಳಲ್ಲಿ ಸಿಕ್ಕಿಸಿ ಕೊಂಡಿದೆ. ಇದು ಸಾಂಕೇತಿಕವಾಗಿ ಆತನ ಸುತ್ತಲೂ ಇದ್ದ ಶತ್ರು ರಾಜರನ್ನು ಆನೆಗಳಿಗೆ ಹೋಲಿಸಿ ಗಂಡಬೇರುಂಡ ಅದನ್ನು ಕುಕ್ಕಿ ತಿನ್ನುವಂತೆ ಚಿತ್ರಿಸಿದ್ದ ಎನ್ನಲಾಗಿದೆ.

ನಂತರ ಮಧುರೆಯ ನಾಯಕರು, ಕೆಳದಿಯ ಅರಸರು ಗಂಡಭೇರುಂಡವನ್ನು ಲಾಂಛನವಾಗಿ ಬಳಸಿದ್ದರು. ಮೈಸೂರು ಒಡೆಯರು ವಿಜಯನಗರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಾಗ ತಮ್ಮ ಧ್ವಜದ ಮೇಲೆ ಗಂಡಭೇರುಂಡವನ್ನು ಪ್ರತಿಷ್ಠಾಪಿಸಿಕೊಂಡರು. ಅಂದಿನಿಂದ ಇಂದಿನವರೆವಿಗೂ ಇದು ಮೈಸೂರು ಒಡೆಯರ ಲಾಂಛನವಾಗಿ ಬೆಳೆದು ಬಂದಿದೆ.

ಹೊಯ್ಸಳರ ಕಾಲದ ‘ನಾಶದ ಸರಪಣಿ’ಯ ಶಿಲ್ಪದಲ್ಲಿ ಗಂಡಭೇರುಂಡಕ್ಕೆ ಉಚ್ಚ ಸ್ಥಾನವನ್ನು ನೀಡಲಾಗಿದೆ. ಬೇಲೂರಿನ ಚನ್ನಕೇಶವ ದೇಗುಲ ಮತ್ತು ಕೋರಮಂಗಲದ ಬೂಜೇಶ್ವರ ದೇವಾಲಯಗಳಲ್ಲಿ ಇದನ್ನು ನೋಡಬಹುದು. ಇದೆಲ್ಲ ನಮ್ಮ ಕರುನಾಡಿನ ಗತ ಪರಂಪರೆ ಮತ್ತು ಇತಿಹಾಸವನ್ನು ಸಾರುವ ಸಂಕೇಂತ ಎಂದರೆ ತಪ್ಪಲ್ಲ.

– ಬರಹ: ದಿನೇಶ ಎಂ

Advertisement

Udayavani is now on Telegram. Click here to join our channel and stay updated with the latest news.

Next