Advertisement

ಮೋದದ ಗಣಪಗೆ ವಿಧ ವಿಧ ಮೋದಕ

01:03 PM Aug 21, 2020 | |

ಮೋದಕವೆಂದರೆ ಗಣಪನಿಗೆ ಬಹಳ ಇಷ್ಟವಂತೆ. ಹೀಗೆ ಹೇಳಿದಾಗ ಹಲವರಿಗೆ- “ಮೂಷಿಕ ವಾಹನ ಮೋದಕ ಹಸ್ತಾ…’ ಎಂಬ ಭಕ್ತಿಗೀತೆ ನೆನಪಾಗಿರಲಿಕ್ಕೂ ಸಾಕು. ಅಕ್ಕಿ, ಶೇಂಗಾ ಹಾಗೂ ಖರ್ಜೂರದಿಂದ ಮಾಡಬಹುದಾದ ರುಚಿರುಚಿ ಮೋದಕದ ರೆಸಿಪಿ ಇಲ್ಲಿದೆ… 

Advertisement

1. ತೆಂಗಿನ ಮೋದಕ
ಬೇಕಾಗುವ ಸಾಮಗ್ರಿ: ಹೂರಣಕ್ಕೆ: ತೆಂಗಿನಕಾಯಿ ತುರಿ- 1 ಕಪ್‌, ತುರಿದ ಬೆಲ್ಲ- 1/2 ಕಪ್‌, ಏಲಕ್ಕಿ- 3 ರಿಂದ 4, ಗಸೆಗಸೆ- 1 ಚಮಚ, ಬಿಳಿ ಎಳ್ಳು- 1 ಚಮಚ, ತುಪ್ಪ- 2 ಚಮಚ ಕಣಕಕ್ಕೆ: ಅಕ್ಕಿ ಹಿಟ್ಟು- 1 ಕಪ್‌, ಉಪ್ಪು- ಸ್ವಲ್ಪ, ತುಪ್ಪ- 1 ಚಮಚ
ಮಾಡುವ ವಿಧಾನ: ಮೊದಲು ಕಣಕ ಮಾಡಲು ಬಾಣಲೆಗೆ ತೆಂಗಿನತುರಿ ಮತ್ತು ಬೆಲ್ಲ ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ. ತೆಂಗಿನಕಾಯಿಯಲ್ಲಿರುವ ನೀರಿನಂಶ ಬೆಲ್ಲ ಕರಗಿಸಲು ಸಾಕಾಗುವುದರಿಂದ ಬೇರೆ ನೀರು ಹಾಕುವುದು ಬೇಡ. ಬೆಲ್ಲ ಕರಗಿ ತೆಂಗಿನಕಾಯಿ ಜೊತೆ ಸೇರಿ ಗಟ್ಟಿಯಾಗುವವರೆಗೆ ಕಾಯಿಸಿ. ಏಲಕ್ಕಿ ಪುಡಿ, ಗಸಗಸೆ ಸೇರಿಸಿ ಕೆಳಗಿಳಿಸಿ.

ಈಗ ಒಂದು ಪಾತ್ರೆಯಲ್ಲಿ ಒಂದು ಕಪ್‌ ನೀರು, ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲಿಡಿ. ಕುದಿಯುತ್ತಿರುವಂತೆ ಅಕ್ಕಿ ಹಿಟ್ಟು ಸೇರಿಸಿ, ಕದಡಿ. ಉರಿ ಆರಿಸಿ. ಈಗ ಅದನ್ನು ಚೆನ್ನಾಗಿ ನಾದಿಕೊಂಡು, ಬಿರುಕುಗಳಿಲ್ಲದಂತೆ ಕಣಕ ತಯಾರಿಸಿ. ಈ ಕಣಕದಿಂದ ಚಿಕ್ಕ, ಚಿಕ್ಕ ಉಂಡೆ ಮಾಡಿಕೊಂಡು ಲಟ್ಟಿಸಿ, ಅದರೊಳಗೆ ಒಂದು ಚಮಚದಷ್ಟು ತಯಾರಿಸಿದ ಹೂರಣ ಇಟ್ಟು, ಮೋದಕದ ಆಕಾರ ಕೊಟ್ಟು ಹಬೆಯಲ್ಲಿ ಬೇಯಿಸಿ. ಈಗ, ಗಣಪನಿಗೆ ಪ್ರಿಯವಾದ, ಸಾಂಪ್ರದಾಯಿಕ ಮೋದಕ ತಯಾರು.

2. ನೆಲಗಡಲೆ(ಶೇಂಗಾ) ಮೋದಕ
ಬೇಕಾಗುವ ಸಾಮಗ್ರಿ: ಹೂರಣಕ್ಕೆ: ಶೇಂಗಾ – 1/2 ಕಪ್‌, ಬೆಲ್ಲ-1/3 ಕಪ್‌, ತೆಂಗಿನತುರಿ-1/4 ಕಪ್‌, ಏಲಕ್ಕಿ ಪುಡಿ- ಸ್ವಲ್ಪ
ಕಣಕಕ್ಕೆ: ಅಕ್ಕಿ ಟ್ಟು-1 ಕಪ್‌, ನೀರು- 3/4 ಕಪ್‌, ಉಪ್ಪು-ಚಿಟಿಕೆಯಷ್ಟು
ಮಾಡುವ ವಿಧಾನ: ಶೇಂಗಾವನ್ನು ಚೆನ್ನಾಗಿ ಹುರಿದು, ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಿ. ಬಾಣಲೆಗೆ ಬೆಲ್ಲ, 3 ಚಮಚದಷ್ಟು ನೀರು ಹಾಕಿ ಕುದಿಯಲಿಡಿ. ಬೆಲ್ಲ ಕರಗುತ್ತಿದ್ದಂತೆ ಪುಡಿ ಮಾಡಿದ ಶೇಂಗಾ, ತೆಂಗಿನತುರಿ, ಏಲಕ್ಕಿ ಪುಡಿ ಸೇರಿಸಿ ಗಟ್ಟಿಯಾಗುವವರಗೆ ಕಾಯಿಸಿ, ತಣಿಯಲು ಬಿಡಿ.
ಈಗ ಪಾತ್ರೆಗೆ ನೀರು, ಉಪ್ಪು ಹಾಕಿ ಕುದಿಸಿ, ಅದನ್ನು ಅಕ್ಕಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ನಾದಿ ಕಣಕ ತಯಾರಿಸಿ. ಕಣಕ ಮತ್ತು ಹೂರಣಗಳೆರಡನ್ನೂ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಕಣಕದ ಉಂಡೆಯನ್ನು ಸ್ವಲ್ಪ ಲಟ್ಟಿಸಿಕೊಂಡು, ಹೂರಣದ ಉಂಡೆ ಇಟ್ಟು ಮೋದಕದ ಆಕಾರ ಕೊಟ್ಟು ಹಬೆಯಲ್ಲಿ ಬೇಯಿಸಿ. ಇದು ನೆಲಗಡಲೆಯ ಪರಿಮಳದೊಂದಿಗೆ ತಿನ್ನಲು ರುಚಿಕರ.

3. ಖರ್ಜೂರದ ಮೋದಕ
ಬೇಕಾಗುವ ಸಾಮಗ್ರಿ: ಖರ್ಜೂರ- 20, ಒಣಹಣ್ಣುಗಳು(ಬಾದಾಮಿ, ಗೋಡಂಬಿ, ಪಿಸ್ತಾ)- 1/2 ಕಪ್‌, ತುಪ್ಪ-ಸ್ವಲ್ಪ, ಏಲಕ್ಕಿ ಪುಡಿ- 1/4 ಚಮಚ
ಮಾಡುವ ವಿಧಾನ: ಖರ್ಜೂರಗಳನ್ನು ಬಿಡಿಸಿ, ಬೀಜಗಳನ್ನು ಬೇರ್ಪಡಿಸಿಕೊಳ್ಳಿ. ನಂತರ ಎಲ್ಲ ಒಣಹಣ್ಣುಗಳನ್ನು ಬಾಣಲೆಯಲ್ಲಿ ಬಿಸಿಮಾಡಿಕೊಂಡು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಖರ್ಜೂರಗಳನ್ನು ಕೂಡ ಮಿಕ್ಸಿಯಲ್ಲಿ ರುಬ್ಬಿ. ಈಗ ಖರ್ಜೂರದ ಪೇಸ್ಟ್‌ ಮತ್ತು ಒಣಹಣ್ಣುಗಳ ಪುಡಿಯನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಂಡು ಮೋದಕದ ಅಚ್ಚಿನಲ್ಲಿ ಹಾಕಿ. ಮೋದಕದ ಆಕಾರ ನೀಡಿ. ಇದು ಅತ್ಯಂತ ಸರಳ ಹಾಗೂ ಅರೋಗ್ಯದಾಯಕ ಮೋದಕ.

Advertisement

ವಿ.ಸೂ: ಎಲ್ಲ ಮೋದಕಗಳನ್ನು ಮೋದಕದ ಅಚ್ಚು ಬಳಸಿ ಮಾಡಿದರೆ ಆಕರ್ಷಕ ಆಕಾರ ಸಿಗುವುದು.

– ಸುಮನ್‌ ದುಬೈ

Advertisement

Udayavani is now on Telegram. Click here to join our channel and stay updated with the latest news.

Next