ರಾಯಚೂರು: ನಗರ ಸೇರಿ ಜಿಲ್ಲಾದ್ಯಂತ ಪ್ರತಿಷ್ಠಾಪಿಸಲಾದ ಬಹುತೇಕ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯ ಶುಕ್ರವಾರ (9ನೇ ದಿನ) ಸಂಭ್ರಮದಿಂದ ಜರುಗಿತು. ಜಿಲ್ಲೆಯಲ್ಲಿ ಸುಮಾರು 1760ಕ್ಕೂ ಅಧಿಕ ಗಣೇಶಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಅವುಗಳಲ್ಲಿ ಐದನೇ ದಿನ 500ಕ್ಕೂ ಅಧಿಕ ಗಣೇಶಗಳನ್ನು ವಿಸರ್ಜಿಸಲಾಗಿದೆ. ಉಳಿದಂತೆ 7ನೇ ದಿನ ಕೆಲ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರೆ, ಬಹುತೇಕ ಗಣಪತಿಗಳಿಗೆ ಒಂಭತ್ತನೇ ದಿನ ಸಂಭ್ರಮದಿಂದ ವಿದಾಯ ಹೇಳಲಾಯಿತು.
ನಗರವೊಂದರಲ್ಲೇ 160ಕ್ಕೂ ಅಧಿಕ ಗಣೇಶಗಳ ವಿಸರ್ಜನೆ ಮಾಡಲಾಯಿತು. ಇದಕ್ಕಾಗಿ ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ವೇದಿಕೆ ಸಿದ್ಧಪಡಿಸಲಾಗಿತ್ತು. ಎಲ್ಲ ಗಣೇಶಗಳು ಅಲ್ಲಿಯೇ ಜಮಾಯಿಸುವುದರಿಂದ ಅಲ್ಲಿ ಸೂಕ್ತ ವ್ಯವಸ್ಥೆ
ಕಲ್ಪಿಸಲಾಗಿತ್ತು.
ಸೂಕ್ತ ಬಂದೋಬಸ್ತ್: ಗಣೇಶ ವಿಸರ್ಜನೆ ಜತೆಗೆ ಮೊಹರಂ ಮೆರವಣಿಗೆಯೂ ಏಕಕಾಲಕ್ಕೆ ನಡೆಯುತ್ತಿದ್ದ ಕಾರಣ ಪೊಲೀಸರು ನಗರದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಅಗತ್ಯವಿರುವ ಕಡೆಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮೂರು ಕೆಎಸ್‌ಆರ್‌ಪಿ ತುಕಡಿಗಳು, 12 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಅಲ್ಲದೇ, ಬೆಳಗಿನ ಜಾವದವರೆಗೂ ಪೆಟ್ರೋಲಿಂಗ್ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ನಿಗಾ ವಹಿಸಿರುವುದಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಪಾಟೀಲ್ ತಿಳಿಸಿದರು.
ಐದು ಕ್ರೇನ್‌ಗಳ ಬಳಕೆ: ಗಣೇಶ ವಿಸರ್ಜನೆಗೆ ನಗರ ಮಾವಿನ ಕೆರೆ ಬಳಿಯ ಖಾಸಬಾವಿ ಬಳಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಗಣೇಶಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ನಗರಸಭೆ ಒಟ್ಟು ಐದು ಕ್ರೇನ್‌ಗಳ ವ್ಯವಸ್ಥೆ ಮಾಡಿದೆ. ಗಣೇಶಗಳ ಮೆರವಣಿಗೆ ಸಾಗುವ ಕಡೆಯೆಲ್ಲ ವಿದ್ಯುತ್ ದೀಪಗಳ ಅಳವಡಿಕೆ ಮಾಡಲಾಗಿದೆ. ಖಾಸ ಬಾವಿ ಬಳಿಯೂ ವಿಶೇಷ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಜತೆಗೆ ಎರಡು ಜನರೇಟ್‌ರ್‌ಗಳ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಗಣೇಶ ವಿಸರ್ಜನೆ ಮತ್ತು ಮೊಹರಂ ಮೆರವಣಿಗೆ ಏಕಕಾಲಕ್ಕೆ ನಡೆಯುವ ಕಾರಣ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ನಗರದಲ್ಲಿ 160ಕ್ಕೂ ಅಧಿಕ ಗಣೇಶಗಳ ವಿಸರ್ಜನೆ ನಡೆಯುವ ಸಾಧ್ಯತೆಗಳಿವೆ.
ಎಸ್.ಬಿ. ಪಾಟೀಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ