Advertisement

500, 2000ದ ಹೊಸ ನೋಟು ತಂದ ಗಣಪ 

12:30 PM Aug 23, 2017 | |

ಮೈಸೂರು: ಭಾರತ-ಚೀನಾ ಗಡಿಯಲ್ಲಿ ಯುದ್ಧ ಭೀತಿ, ಗಡಿಯಲ್ಲಿ ಸೇನೆ ಜಮಾವಣೆ.. 500 ಹಾಗೂ 2000 ರೂ. ಹೊಸ ನೋಟು. ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ  ಪ್ರಧಾನಿ ನರೇಂದ್ರಮೋದಿ ಅವರ ಯೋಗ ಮಾಡುತ್ತಿರುವ ಭಂಗಿ.. ಕಸ್ತೂರಿ ನಿವಾಸದ ರಾಜಕುಮಾರ್‌ ಹೆಗಲ ಮೇಲೆ ಪಾರಿವಾಳ ಕುಳಿತ ಶೈಲಿಯ ಗಣೇಶ ಮೂರ್ತಿಗಳು ಈ ವರ್ಷದ ವಿಶೇಷ.

Advertisement

ಪ್ರತಿವರ್ಷ ಪ್ರಚಲಿತ ವಿದ್ಯಮಾನಗಳನ್ನು ಆಧರಿಸಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾ ಬಂದಿರುವ ಮೈಸೂರಿನ ಕುಂಬಾರಗೇರಿಯ ರೇವಣ್ಣ, ಈ ವರ್ಷ ಐದು ಹೊಸ ಶೈಲಿಯ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ. 

ರೇವಣ್ಣ ಅವರ ಕುಟುಂಬ ತಾತ-ಮುತ್ತಾತನ ಕಾಲದಿಂದಲೂ ಗಣೇಶ ಮೂರ್ತಿಗಳನ್ನು ತಯಾರು ಮಾಡುವ ಕಾಯಕದಲ್ಲಿ ತೊಡಗಿದ್ದು, ಹಿರಿಯರು ಮನೆಯಲ್ಲಿ ಗಣೇಶ ಮೂರ್ತಿಗಳನ್ನು ತಯಾರುಮಾಡುವುದನ್ನು ನೋಡುತ್ತಾ ಬೆಳೆದ ರೇವಣ್ಣ, ಮೈಸೂರಿನ ಶ್ರೀ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ)ದಲ್ಲಿ ಪೇಂಟಿಂಗ್‌ ಮತ್ತು ಕಲ್ಚರ್‌ ವಿಷಯದಲ್ಲಿ ಪದವಿ ಪಡೆದ ನಂತರ ವರ್ಷದಿಂದ ವರ್ಷಕ್ಕೆ ಸಾಂಪ್ರದಾಯಿಕತೆ ಜತೆಗೆ ಪ್ರಯೋಗಶೀಲತೆಗೆ ಹೆಚ್ಚು ಒತ್ತು ಕೊಡುತ್ತಾ ಬಂದಿದ್ದಾರೆ.

ವರನಟ ಡಾ.ರಾಜಕುಮಾರ್‌ ಅವರನ್ನು ನರಹಂತಕ ವೀರಪ್ಪನ್‌ ಅಪಹರಿಸಿದ್ದ ದೃಶ್ಯಾವಳಿ, ಕಾರ್ಗಿಲ್‌ ಯುದ್ಧ ನಡೆದ ವರ್ಷ ತಯಾರಿಸಿದ ಕಾರ್ಗಿಲ್‌ ಗಣಪತಿ ಹೆಚ್ಚು ಜನಮನ್ನಣೆ ಗಳಿಸಿತ್ತು. ಆಗಿನಿಂದ ಪ್ರಚಲಿತ ವಿದ್ಯಮಾನಗಳಿಗೆ ಹೆಚ್ಚು ಒತ್ತು ನೀಡುತ್ತಾ ಬಂದಿದ್ದೇನೆ ಎನ್ನುತ್ತಾರೆ ರೇವಣ್ಣ.

ಈ ಬಾರಿಯ ಭಂಗಿ:
ಕಳೆದ ವರ್ಷ ಯಮನೂರಿನಲ್ಲಿ ರೈತರ ಮೇಲೆ ನಡೆದ ಲಾಠಿಚಾರ್ಜ್‌, ಮೈಸೂರು ರಾಜಮನೆತನದ ನವದಂಪತಿ ಯದುವೀರ್‌-ತ್ರಿಷಿಕಾ ಜೋಡಿ, ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರಾದ ಸಿಂಧು, ಸಾಕ್ಷಿ ಮಲ್ಲಿಕ್‌ ಅವರ ಭಂಗಿಯಲ್ಲಿ ಗಣೇಶ ಮೂರ್ತಿ ತಯಾರಿಸಿದ್ದೆ.

Advertisement

ಈ ವರ್ಷ ಆರ್‌ಬಿಐ ಹೊಸದಾಗಿ ಚಲಾವಣೆಗೆ ತಂದ 500 ರೂ. ಹಾಗೂ 2000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಹೊತ್ತ ಗಣೇಶ, ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ, ವಿಶ್ವ ಯೋಗ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಯೋಗ ಪ್ರದರ್ಶನದ ಭಂಗಿ,

ಭಾರತ-ಚೀನಾ ಗಡಿಯಲ್ಲಿ ಯುದ್ಧ ಭೀತಿಯಿಂದ ಸೇನೆ ಜಮಾವಣೆ, ಕಸ್ತೂರಿ ನಿವಾಸ ಚಿತ್ರದಲ್ಲಿ ರಾಜಕುಮಾರ್‌ ಅವರ ಹೆಗಲ ಮೇಲೆ ಕುಳಿತ ಪಾರಿವಾಳದ ಭಂಗಿಯನ್ನು ಈ ವರ್ಷ ಪುನೀತ್‌ ರಾಜಕುಮಾರ್‌ ಅವರ ರಾಜಕುಮಾರ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ರೂಪಿಸಿದ್ದೇನೆ. ಈ ಮೂರ್ತಿಗಳನ್ನು ಮಾರಾಟ ಮಾಡುವುದಿಲ್ಲ. ದಸರಾ ಸಂದರ್ಭದಲ್ಲಿ ಬೊಂಬೆ ಕೂರಿಸುವ ಸ್ನೇಹಿತರಿಗೆ ಕೊಟ್ಟುಬಿಡುತ್ತೇನೆ ಎನ್ನುತ್ತಾರೆ ರೇವಣ್ಣ.

ಜೇಡಿಮಣ್ಣು ಶ್ರೇಷ್ಠ: ಮಾರುಕಟ್ಟೆಯಲ್ಲಿ ಆಕರ್ಷಕವಾದ ಗಣೇಶಮೂರ್ತಿಗಳು ದೊರೆತರೂ ಸಾಂಪ್ರದಾಯಿಕವಾಗಿ ಜೇಡಿಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಗಳೇ ಶ್ರೇಷ್ಠ. ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಜಾಗೃತಿ ಮೂಡಿದ್ದು, ಬಣ್ಣ ರಹಿತ ಮೂರ್ತಿಗಳನ್ನೇ ಹೆಚ್ಚು ಕೊಂಡೊಯ್ಯುತ್ತಾರೆ. ರೇವಣ್ಣನ ಕೆಲಸಕ್ಕೆ ಅವರ ತಾಯಿ, ಪತ್ನಿ ಹಾಗೂ ತಂಗಿಯರು ಕೈಜೋಡಿಸುತ್ತಾರೆ.

ಆರು ತಿಂಗಳ ಮುಂಚಿತವಾಗಿಯೇ ಕೂರ್ಗಳ್ಳಿ, ಉದೂºರು ಗ್ರಾಮಗಳಿಂದ ಕೆರೆಯ ಮಣ್ಣನ್ನು ಟ್ರಾಕ್ಟರ್‌ಗೆ 4 ಸಾವಿರ ರೂ.ಗಳಂತೆ ಖರೀದಿಸಿ, ಹುಡಿಯಾಗಿರುವ ಆ ಮಣ್ಣನ್ನು ಹದಗೊಳಿಸಲು ಮತ್ತೆ 3 ರಿಂದ 4 ಸಾವಿರ ರೂ. ಖರ್ಚಾಗುತ್ತದೆ. ಶೇ.60 ರಿಂದ 70ರಷ್ಟು ಬಣ್ಣ ರಹಿತ ವಿಗ್ರಹಗಳನ್ನೇ ಮಾಡಲಾಗುತ್ತಿದ್ದು, ಇನ್ನುಳಿದ ಮೂರ್ತಿಗಳಿಗೆ ಕೂಲ್‌ ಕಲರ್ ಬಳಸುವುದಾಗಿ ಹೇಳುವ ರೇವಣ್ಣ, ನೋಟು ರದ್ಧತಿ ಹಾಗೂ ಜಿಎಸ್‌ಟಿ ಪರಿಣಾಮ ನಮ್ಮ ಉದ್ಯಮದ ಮೇಲೂ ಬಿದ್ದಿದೆ ಎನ್ನುತ್ತಾರೆ.

ಅಪಾಯಕಾರಿ ಗಣಪ: ಜಿಲ್ಲಾಡಳಿತ ಮಹಾರಾಷ್ಟ್ರದಿಂದ ಬರುವ ಪ್ಲಾಸ್ಟರ್‌ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟ ಹಾಗೂ ಪ್ರತಿಷ್ಠಾಪನೆಯನ್ನು ನಿಷೇಧಿಸಿದೆ. ಆದರೆ, ಪಿಒಪಿಗಿಂತಲೂ ವಿಷಕಾರಿಯಾದ ಪೇಪರ್‌ ಪಲ್ಪಿಂಗ್‌ ಗಣೇಶ ಮೂರ್ತಿಗಳ ಬಗ್ಗೆ ಜಿಲ್ಲಾಡಳಿತ ಗಮನಹರಿಸಿಲ್ಲ.

ಪೇಪರ್‌ ಪಲ್ಪಿಂಗ್‌ ಗಣೇಶ ಮೂರ್ತಿಗೆ ಪ್ಲಾಸ್ಟರ್‌ ಆಫ್ ಪ್ಯಾರೀಸ್‌, ಚಾಕ್‌ ಪೌಡರ್‌, ಮೈಲುತುತ್ತದ ಪೇಸ್ಟ್‌ಗಳಂತಹ ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಪಿಒಪಿಗಿಂತಲೂ ಅಪಾಯಕಾರಿಯಾಗಿದೆ. ತಮಿಳುನಾಡಿನ ಕೃಷ್ಣಗಿರಿ, ಹೊಸೂರು ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಪೇಪರ್‌ ಪಲ್ಪಿಂಗ್‌ ಗಣೇಶ ಮೂರ್ತಿಗಳನ್ನು ತಯಾರು ಮಾಡಿ ಬೆಂಗಳೂರು ಮೂಲಕ ರಾಜ್ಯದ ಬೇರೆ ಬೇರೆ ನಗರಗಳಿಗೆ ಕಳುಹಿಸಲಾಗುತ್ತಿದೆ.

ಸೌಮ್ಯ ರೂಪಿಯಾದ ಗಣೇಶನನ್ನು ಪೇಪರ್‌ ಪಲ್ಪಿಂಗ್‌ ವಿಗ್ರಹಗಳಲ್ಲಿ ರಾಕ್ಷಸಿ ರೂಪ ಕೊಡಲಾಗಿರುತ್ತೆ. ಆದರೆ, ಹೆಚ್ಚು ಲಾಭ ಸಿಗುತ್ತದೆ ಎಂಬ ಕಾರಣಕ್ಕೆ ವ್ಯಾಪಾರಿಗಳೂ ಇದನ್ನೇ ಹೆಚ್ಚು ಮಾರುತ್ತಿದ್ದಾರೆ. ಪರಿಸರಕ್ಕೆ ಭಾರೀ ಅಪಾಯ ತಂದೊಡ್ಡುವ ಈ ಪೇಪರ್‌ ಪಲ್ಪಿಂಗ್‌ ಗಣೇಶ ಮೂರ್ತಿಗಳ ಬಗ್ಗೆಯೂ ಜಿಲ್ಲಾಡಳಿತ ಗಮನಹರಿಸಬೇಕಿದೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next