ಕ್ರೈಮ್ ಥ್ರಿಲ್ಲರ್ ಜಾನರ್ ಕನ್ನಡಕ್ಕೆ ಹೊಸತಲ್ಲ. ಈಗಾಗಲೇ ಸಾಕಷ್ಟು ಚಿತ್ರಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ರೈಮ್ಸ್’ ಎಂಬ ಹೊಸಬರ ಚಿತ್ರ ಕೂಡ ಸೆಟ್ಟೇರಲು ಅಣಿಯಾಗುತ್ತಿದೆ. ಬಹುತೇಕ ಹೊಸಬರೇ ಸೇರಿ ಮಾಡುತ್ತಿರುವ ಈ ಚಿತ್ರಕ್ಕೆ ಅಜಿತ್ ಕುಮಾರ್ ಜೆ. ನಿರ್ದೇಶಕರು. ಅವರಿಗೆ ಇದು ಮೊದಲ ಸಿನಿಮಾ. ಇವರ ಕಥೆ ನಂಬಿ ಜ್ಞಾನಶೇಖರ್ ಹಾಗೂ ರಮೇಶ್ ಆರ್ಯ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇನ್ನು, ಅಜಿತ್ ಜಯರಾಜ್ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಅವರಿಗೆ ಸುಷ್ಮಾ ನಾಯರ್ ನಾಯಕಿ. ತಮ್ಮ ಚಿತ್ರದ ಸಣ್ಣ ತುಣುಕು ತೋರಿಸುವ ಮೂಲಕ ಚಿತ್ರದ ಮಾಹಿತಿ ಹಂಚಿಕೊಂಡಿತು ಚಿತ್ರತಂಡ.
ಮೊದಲು ಮೈಕ್ ಹಿಡಿದ ನಿರ್ದೇಶಕರ ಅಜಿತ್ ಕುಮಾರ್ ಹೇಳಿದ್ದಿಷ್ಟು.”ಇದಕ್ಕೂ ಮುನ್ನ ನಾನು ಹಲವು ಕಿರುಚಿತ್ರ ನಿರ್ದೇಶಿಸಿದ್ದೆ. ಸುಮಾರು 13 ಪ್ರಶಸ್ತಿಗಳನ್ನೂ ಪಡೆದಿದ್ದೇನೆ. ಪದವಿ ಮುಗಿದ ಬಳಿಕ ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಸಿನಿಮಾ ಆಸೆ, ಆ ಕೆಲಸದಲ್ಲಿ ಮುಂದುವರೆಯಲು ಆಗಲಿಲ್ಲ. ಆಮೇಲೆ, ಕೆಲಸ ಬಿಟ್ಟು, ಚೆನ್ನೈಗೆ ಹೋಗಿ, ಅಲ್ಲಿ ಒಂದಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದೆ. ಆಮೇಲೆ ನಿರ್ದೇಶನ ಮಾಡಬೇಕೆಂಬ ಕಾರಣಕ್ಕೆ, ಈ ಕಥೆ ರೆಡಿ ಮಾಡಿದೆ. ನಿರ್ಮಾಪಕರ ಬಳಿ ಹೇಳಿದಾಗ, ಚಿಕ್ಕ ಹುಡುಗ ನಿರ್ದೇಶನ ಮಾಡಬಲ್ಲನ ಎಂಬ ಪ್ರಶ್ನೆ ಅವರಲ್ಲಿತ್ತು. ಕೊನೆಗೆ ಅವಕಾಶ ಕೊಟ್ಟಿದ್ದಾರೆ. ಒಂದು ಕೊಲೆಯ ತನಿಖೆ ಸುತ್ತ ನಡೆಯುವ ಕಥೆ ಇದು. ಇಲ್ಲಿ ಸಾಂಗ್ಸ್ ಇಲ್ಲ, ಫೈಟ್ಸ್ ಕೂಡ ಇಲ್ಲ. ಹಾಗಂತ, ಕಲಾತ್ಮಕ ಸಿನಿಮಾ ಅಲ್ಲ, ನೋಡುಗರಿಗೆ ಕುತೂಹಲ ಕೆರಳಿಸುವ ಅಂಶಗಳು ಇಲ್ಲಿವೆ. “ರೈಮ್ಸ್’ ಶೀರ್ಷಿಕೆ ಯಾಕೆ ಎಂಬುದಕ್ಕೆ ಸಿನಿಮಾ ನೋಡಿದಾಗ ಗೊತ್ತಾಗುತ್ತೆ’ ಎಂದು ವಿವರ ಕೊಟ್ಟರು ನಿರ್ದೇಶಕ ಅಜಿತ್.
ಈಗಾಗಲೇ ನಾಯಕ ಅಜಿತ್ ಜಯರಾಜ್ ಅವರಿಗೆ ಇಲ್ಲಿ ತನಿಖಾಧಿಕಾರಿ ಪಾತ್ರ ಸಿಕ್ಕಿದೆಯಂತೆ. “ಇದೊಂದು ಕ್ರೈಮ್ ಥ್ರಿಲ್ಲರ್ ಚಿತ್ರ. ನಾನು ಸಾಕಷ್ಟು ಕಥೆ ಕೇಳಿದ್ದೆ. ಆದರೆ, “ರೈಮ್ಸ್’ ಕಥೆಯಲ್ಲಿ ಸಾಕಷ್ಟು ವಿಶೇಷತೆ ಇತ್ತು. ಹಾಗಾಗಿ ಒಪ್ಪಿಕೊಂಡೆ’ ಎಂದರು ಅಜಿತ್ ಜಯರಾಜ್.
ನಾಯಕಿ ಸುಷ್ಮಾ ನಾಯರ್ ಅವರಿಗೆ ಇದು ಕನ್ನಡದ ಮೊದಲ ಚಿತ್ರ. ಹಿಂದೆ ತಮಿಳಿನ ಧಾರಾವಾಹಿಗಳಲ್ಲಿ ನೆಗೆಟಿವ್ ಪಾತ್ರ ಮಾಡಿದ್ದಾರೆ. ಅವರಿಗೆ ಇಲ್ಲಿ ನಾಯಕನ ಪತ್ನಿ ಪಾತ್ರವಂತೆ. “ಸದ್ಯಕ್ಕೆ ನನ್ನ ಪಾತ್ರವಷ್ಟೇ ನನಗೆ ಗೊತ್ತು. ಕಥೆ ಬಗ್ಗೆ ಏನೂ ಗೊತ್ತಿಲ್ಲ’ ಎಂದರು ಸುಷ್ಮಾ.
ಜ್ಞಾನಶೇಖರ್ ಹಾಗೂ ರಮೇಶ್ ಆರ್ಯ ನಿರ್ಮಾಪಕರು. ಅವರಿಗೆ ಕಥೆ ಇಷ್ಟವಾಗಿದ್ದರಿಂದ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿಕೊಂಡರು. ಶಕ್ತಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಹಿನ್ನೆಲೆ ಸಂಗೀತಕ್ಕೆ ಇಲ್ಲಿ ಹೆಚ್ಚು ಆದ್ಯತೆ ಇದೆ ಎಂದರು.