ನವದೆಹಲಿ: ಈ ವರ್ಷ ಏ.2 ಮುಗಿದಿದೆ. 2011, ಏಪ್ರಿಲ್ 2ರಲ್ಲಿ ಭಾರತ ಕ್ರಿಕೆಟ್ ತಂಡ ತನ್ನ ಎರಡನೇ ಏಕದಿನ ವಿಶ್ವಕಪ್ ಗೆದ್ದಿತ್ತು. ಆ ನೆನಪಿಗೆ ಈಗ 9 ವರ್ಷ ತುಂಬುತ್ತದೆ. ಆಗ ಭಾರತ 28 ವರ್ಷಗಳ ಬಳಿಕ ವಿಶ್ವಕಪ್ ಜಯಿಸಿತ್ತು. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಗೆದ್ದ ಬಳಿಕ, 2011ರಲ್ಲಿ ಶ್ರೀಲಂಕಾ ವಿರುದ್ಧ ಧೋನಿ ನಾಯಕತ್ವದಲ್ಲಿ ಭಾರತ ಜಯಿಸಿತು.
ಆ ಪಂದ್ಯದಲ್ಲಿ ಮರೆಯಲಾರದ ಆಟವಾಡಿದ್ದು ಗೌತಮ್ ಗಂಭೀರ್ ಹಾಗೂ ನಾಯಕ ಎಂ.ಎಸ್.ಧೋನಿ. ಗಂಭೀರ್ 97 ರನ್ ಬಾರಿಸಿ ಔಟಾದರು. ಧೋನಿ ಅಜೇಯರಾಗಿ ಉಳಿದರು ಮಾತ್ರವಲ್ಲ, ಸಿಕ್ಸರ್ ಹೊಡೆದು ಪಂದ್ಯವನ್ನು ಗೆಲ್ಲಿಸಿದರು.
2011ರ ವಿಶ್ವಕಪ್ ಎಂದ ಕೂಡಲೇ ನೆನಪಿಗೆ ಬರುವ ಹಲವು ಸಂಗತಿಗಳಲ್ಲಿ, ಧೋನಿ ಸಿಕ್ಸರ್ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ! ಆದರೆ ಅದರ ಬಗ್ಗೆಯೇ ಗಂಭೀರ್ ಸಿಟ್ಟಾಗಿದ್ದಾರೆ.
2011ರವಿಶ್ವಕಪ್ ಎಂದರೆ ಬರೀ ಆ ಒಂದು ಸಿಕ್ಸರ್ ಅಲ್ಲ, ಆ ವ್ಯಾಮೋಹದಿಂದ ಹೊರಬರಲು ಇದು ಸಕಾಲ. ಆಗ ಇಡೀ ತಂಡ ಕಪ್ ಗೆದ್ದಿತ್ತು… ಹೀಗೆಂದು ಗಂಭೀರ್ ಟ್ವೀಟ್ ಮಾಡಿದ್ದಾರೆ. ಕೆಲವು ವರ್ಷಗಳಿಂದ ಧೋನಿ-ಗಂಭೀರ್ ನಡುವೆ ಒಳಜಗಳವಿತ್ತು.
ಹಲವು ಸಂದರ್ಭದಲ್ಲಿ ಗಂಭೀರ್ ಅದನ್ನು ಪ್ರಕಟಿಸಿದ್ದಾರೆ. ಇದೀಗ ಇನ್ನೊಮ್ಮೆ ಗಂಭೀರ್ ನೇರವಾಗಿಯೇ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.