ಮುಂಬೈ: 2019ರ ವಿಶ್ವಕಪ್ ತಂಡದಲ್ಲಿ ಅಂಬಟಿ ರಾಯುಡುಗೆ ಸ್ಥಾನ ನೀಡದೇ ಇರುವ ವಿಚಾರದಲ್ಲಿ ಗೌತಮ್ ಗಂಭೀರ್ ಮತ್ತು ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ನಡುವೆ ಜಟಾಪಟಿ ನಡೆದಿದೆ.
ಖಾಸಗಿ ಚಾನೆಲ್ ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಗೌತಮ್ ಗಂಭೀರ್, ಎಂಎಸ್ ಕೆ ಪ್ರಸಾದ್ ಮತ್ತು ಕೃಷ್ಣಮಚಾರಿ ಶ್ರೀಕಾಂತ್ ಪಾಲ್ಗೊಂಡಿದ್ದರು. ಈ ವೇಳೆ 2019ರ ವಿಶ್ವಕಪ್ ತಂಡದ ಆಯ್ಕೆ ಕುರಿತು ಚರ್ಚೆ ನಡೆದಿದೆ.
ಆಟಗಾರರನ್ನು ತಂಡದಿಂದ ಯಾಕೆ ಕೈಬಿಡಲಾಗುತ್ತದೆ ಎಂದು ಆಯ್ಕೆಗಾರರು ಹೇಳುವುದೇ ಇಲ್ಲ. ನನಗೂ ಹೀಗೆ ಆಗಿತ್ತು ಎಂದು ಗಂಭೀರ್ ಹೇಳಿಕೊಂಡರು. 2016ರಲ್ಲಿ ಇಂಗ್ಲೆಂಡ್ ಸರಣಿಯ ಮೊದಲ ಟೆಸ್ಟ್ ಪಂದ್ಯದಿಂದ ನನ್ನನ್ನು ಕೈಬಿಟ್ಟಾಗ ನನಗೆ ಕಾರಣವನ್ನೇ ತಿಳಿಸಲಿಲ್ಲ. ನೀವು ಬೇಕಾದರೆ ಕರುಣ್ ನಾಯರ್, ಯುವರಾಜ್ ಸಿಂಗ್, ಸುರೇಶ್ ರೈನಾರನ್ನೇ ನೋಡಿ ಎಂದರು.
ರಾಯುಡು ವಿಚಾರದಲ್ಲಿ ಮಾತನಾಡಿದ ಗೌತಿ, ವಿಶ್ವಕಪ್ ಗಿಂತ ಮೊದಲು ಎರಡು ವರ್ಷದ ನಾಲ್ಕನೇ ಕ್ರಮಾಂಕದಲ್ಲಿ ರಾಯುಡುವನ್ನು ಆಡಿಸಿದಿರಿ, ಆದರೆ ವಿಶ್ವಕಪ್ ಗೆ ವಿಜಯ್ ಶಂಕರ್ ರನ್ನು ಆಯ್ಕೆ ಮಾಡಿದ್ರಿ ಎಂದು ಎಂಎಸ್ ಕೆ ಪ್ರಸಾದ್ ಗೆ ಸವಾಲೆಸೆದರು.
ಇದಕ್ಕೆ ಉತ್ತರಿಸಿದ ಪ್ರಸಾದ್, ಧವನ್, ರೋಹಿತ್ , ಕೊಹ್ಲಿ ಯಾರೂ ಬೌಲಿಂಗ್ ಮಾಡುವುದಿಲ್ಲ. ಅದಕ್ಕಾಗಿ ಫಾಸ್ಟ್ ಬೌಲಿಂಗ್ ಆಲ್ ರೌಂಡರ್ ಅನ್ನು ಆಯ್ಕೆ ಮಾಡಿದೆ ಎಂದರು. ಈ ಚರ್ಚೆ ತಾರಕಕ್ಕೇರುವುದನ್ನು ಕಂಡ ಶ್ರೀಕಾಂತ್ ಮಧ್ಯ ಪ್ರವೇಶಿಸಿದರು.