ಭಾರತ ಮತ್ತು ಚೀನ ನಡುವಣ ಗಡಿಭಾಗದ ಪರ್ವತ ಶ್ರೇಣಿಯಲ್ಲಿರುವ ಗಾಲ್ವಾನ್ ಕಣಿವೆಯಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ತನ್ನ ಸರಹದ್ದನ್ನು ಮೀರಿ ಅಕ್ರಮವಾಗಿ ಪ್ರವೇಶಿಸಿದ್ದ ಚೀನದ ಪೀಪಲ್ಸ್ ಲಿಬ ರೇಶನ್ ಆರ್ಮಿಯ ತುಕಡಿಗಳನ್ನು ಭಾರತ ಯಶಸ್ವಿಯಾಗಿ ಹಿಮ್ಮೆ ಟ್ಟಿಸಿ ವರ್ಷ ಸಂದಿದೆ. ಕಳೆದ ವರ್ಷದ ಜೂನ್ 15 ಮತ್ತು 16ರ ನಡುವಿನ ರಾತ್ರಿ ನಡೆದ ಭಾರತ ಮತ್ತು ಚೀನ ಸೇನೆಯ ಈ ಸಂಘರ್ಷದಲ್ಲಿ ಭಾರ ತೀಯ ಸೇನೆಯ ಓರ್ವ ಕರ್ನಲ್ ಸಹಿತ 20 ಮಂದಿ ಯೋಧರು ವೀರ ಮರಣವನ್ನಪ್ಪಿದ್ದರು. ಇದೇ ವೇಳೆ ಭಾರತೀಯ ಯೋಧರು ಚೀನದ 43 ಯೋಧರನ್ನು ಹತ್ಯೆಗೈದಿದ್ದರಾದರೂ ಚೀನ ಸೇನೆ ಈ ಅಂಕಿಅಂಶವನ್ನು ಇಂದಿಗೂ ಮುಚ್ಚಿಟ್ಟಿದ್ದು ಗಾಲ್ವಾನ್ ಸಂಘರ್ಷದಲ್ಲಿ ತನ್ನ ನಾಲ್ವರು ಯೋಧರು ಮಾತ್ರವೇ ಮೃತಪಟ್ಟಿದ್ದರು ಎಂದು ಹೇಳುತ್ತಲೇ ಬಂದಿದೆ.
ಗಾಲ್ವಾನ್ ಸಂಘರ್ಷಕ್ಕೂ ಮುನ್ನ ಎಲ್‌ಎಸಿ ಯಲ್ಲಿನ ತನ್ನ ವ್ಯಾಪ್ತಿಯಿಂದ ಹೊರತಾದ ಪ್ರದೇಶದಲ್ಲಿ ಚೀನಿ ಯೋಧರು ನಿರ್ಮಿಸಿದ್ದ ಟೆಂಟ್‌ಗಳನ್ನು ಭಾರತೀಯ ಯೋಧರು ಧ್ವಂಸಗೈದಿದ್ದರು. ಆ ಬಳಿಕ ಚೀನಿ ಯೋಧರು ಎಲ್‌ಎಸಿ ಪ್ರದೇಶದಲ್ಲಿ ಕಾವಲಿಗಾಗಿ ನಿಯೋಜಿಸಲಾಗಿದ್ದ ಭಾರತೀಯ ಯೋ ಧರ ಮೇಲೆ ಕಲ್ಲುಗಳ ತೂರಾಟ ನಡೆಸಿದ್ದೇ ಅಲ್ಲದೆ ಕಬ್ಬಿಣದ ರಾಡ್, ಮೊಳೆಗಳನ್ನು ಪೋಣಿಸಿದ್ದ ಸರಳುಗಳಿಂದ ಹಲ್ಲೆ ನಡೆಸಿದ್ದರು. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದ ನಮ್ಮ ಯೋಧರು ಚೀನದ ಸೈನಿಕರನ್ನು ಹಿಮ್ಮೆಟ್ಟಿಸಿದ್ದರು. ಈ ಸಂಘರ್ಷದ ಬಳಿಕ ಗಾಲ್ವಾನ್ ಸಹಿತ ಎಲ್‌ಎಸಿಯಲ್ಲಿ ಚೀನ ಪಡೆಗಳ ಉಪಟಳ ತಿಂಗಳುಗಳ ಕಾಲ ಮುಂದುವರಿದೇ ಇತ್ತು. ಈ ಸಂಘರ್ಷ ಎರಡೂ ರಾಷ್ಟ್ರಗಳ ನಡುವೆ ಯುದ್ಧ ಭೀತಿಯನ್ನು ಸೃಷ್ಟಿಸಿತ್ತು. ಅನಂತರ ಎರಡೂ ಸೇನೆಗಳ ನಡುವೆ 11 ಸುತ್ತಿನ ಮಾತುಕತೆಗಳು ನಡೆದು ಕೊನೆಯಲ್ಲಿ ಚೀನ ಎಲ್‌ಎಸಿಯಲ್ಲಿನ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲು ಸಮ್ಮತಿ ಸೂಚಿಸಿತು. ಅದರಂತೆ ಉಭಯ ರಾಷ್ಟ್ರಗಳೂ ಎಲ್‌ಎಸಿಯಿಂದ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಂಡಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಭಾರತ, ಸೇನಾ ಮತ್ತು ರಾಜತಾಂತ್ರಿಕ ಸಂಧಾನ ಮಾರ್ಗಗಳ ಜತೆಜತೆಯಲ್ಲಿ ಚೀನದ ವಿರುದ್ಧ ಪರೋಕ್ಷವಾಗಿ ಆರ್ಥಿಕ, ವಾಣಿಜ್ಯ ಸಮರವನ್ನೇ ಸಾರಿತು. ಭಾರತದಲ್ಲಿ ಸಾರ್ವತ್ರಿಕವಾಗಿ ಬಳಕೆಯಲ್ಲಿದ್ದ ಚೀನದ ಹಲವಾರು ಆ್ಯಪ್, ವೆಬ್‌ಸೈಟ್‌ಗಳಿಗೆ ನಿಷೇಧ ಹೇರಿದ್ದೇ ಅಲ್ಲದೆ ಆಯಾತ-ನಿರ್ಯಾತ ವಿಚಾರದಲ್ಲೂ ಹಲವು ನಿರ್ಬಂಧ ಗಳನ್ನು ಹೇರುವ ಮೂಲಕ ಚೀನಕ್ಕೆ ಆರ್ಥಿಕವಾಗಿ ಬಲವಾದ ಹೊಡೆತ ನೀಡಿತು.
ಇಷ್ಟು ಮಾತ್ರವಲ್ಲದೆ ಗಾಲ್ವಾನ್ ಘರ್ಷಣೆಯ ಫಲವಾಗಿ ಭಾರತ ತನ್ನ ರಕ್ಷಣ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಅತ್ಯಾಧುನಿಕ ಯುದ್ಧ ವಿಮಾ ನಗಳು, ಕ್ಷಿಪಣಿಗಳು ಸೇರ್ಪಡೆಗೊಂಡು ಭಾರತೀಯ ಸೇನೆ ಇನ್ನಷ್ಟು ಪ್ರಬಲ ವಾಗಿದ್ದು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ವಸನ್ನದ್ಧ ವಾಗಿದೆ. ರಕ್ಷಣ ಬೇಹುಗಾರಿಕೆಯನ್ನು ಬಲಪಡಿಸಲಾಗಿದ್ದು ಎಲ್‌ಎಸಿ ಪ್ರದೇಶದಲ್ಲಿ ಹೆಚ್ಚುವರಿ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಲಾಗಿದ್ದರೆ ರಕ್ಷಣ ವಿಚಾರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲಾಗಿದ್ದು ಈ ಮೂಲಕ ಚೀನ ಸೇನೆಯ ಚಲನವಲನಗಳ ಮೇಲೆ ಹದ್ದುಗಣ್ಣಿರಿ ಸಲಾಗಿದೆ. ಎಲ್‌ಎಸಿಯಲ್ಲಿ ರಸ್ತೆಯಾದಿ ಯಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಯಾವು ದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ಗಾಲ್ವಾನ್ ಸಂಘರ್ಷದ ಪರಿಣಾಮ ಭಾರತ ಚೀನಕ್ಕೆ ತಕ್ಕ ಪಾಠ ಕಲಿಸಿದ್ದೇ ಅಲ್ಲದೆ ತನ್ನ ಸೇನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿತು.