Advertisement

ಗಾಳಿಪಟ ಹಾರಾಟಕ್ಕೆನಿಬಂಧನೆಗಳೇ ಅಡ್ಡಿ!

08:14 PM Aug 21, 2020 | Suhan S |

“ಈ “ಗಾಳಿಪಟ-2′ ಶೂಟಿಂಗ್‌ ಶೇಕಡಾ 55ರಷ್ಟು ಕಂಪ್ಲೀಟ್‌ ಆಗಿದೆ. ಎಲ್ಲ ಅಂದುಕೊಂಡಂಗೆ ಆಗಿದ್ರೆ ಇಷ್ಟೊತ್ತಿಗಾಗಲೇ ಶೂಟಿಂಗ್‌ ಮುಗಿದಿರಬೇಕಾಗಿತ್ತು. ಆದ್ರೆ ಇದ್ದಕ್ಕಿದ್ದಂತೆ ಬಂದ ಕೊರೊನಾ ಸದ್ಯಕ್ಕೆ ಎಲ್ಲರನ್ನೂ ಸೈಲೆಂಟ್‌ ಆಗಿರುವಂತೆ ಮಾಡಿದೆ. ಜಗತ್ತಿನಲ್ಲಿ ಕೋವಿಡ್ ಬಗ್ಗೆ ದಿನಕ್ಕೊಂದು ಸುದ್ದಿ ಬರ್ತಾ ಇದೆ.

Advertisement

ಹೀಗಿರುವಾಗ ಮತ್ತೆ ಯಾವಾಗ ಶೂಟಿಂಗ್‌ ಶುರು ಮಾಡೋದು, ಯಾವಾಗ ಮುಗಿಸೋದು ಅಂಥ ಏನೂ ಹೇಳ್ಳೋಕಾಗೊಲ್ಲ. ಸದ್ಯದ ಮಟ್ಟಿಗೆ ಏನಾಗ್ತಿದೆ ಅಂಥ ನೋಡ್ಕೊಂಡು ಸುಮ್ನೆ ಕೂರೂದು ಬಿಟ್ಟು ಬೇರೆ ಏನೂ ಮಾಡೋಕಾಗೊಲ್ಲ…’ – ಹೀಗೆ ಹೇಳುತ್ತ ಒಂದು ಕ್ಷಣ ಮೌನವಾದರು ನಿರ್ದೇಶಕ ಯೋಗರಾಜ್‌ ಭಟ್‌. ಹೌದು, ಯೋಗರಾಜ್‌ ಭಟ್‌ ಮತ್ತು ಗೋಲ್ಡನ್‌ ಸ್ಟಾರ್‌ ಗಣೇಶ್‌ ಕಾಂಬಿನೇಶನ್‌ನ “ಗಾಳಿಪಟ-2′ ಚಿತ್ರ ಅದ್ಧೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡು, ಶೂಟಿಂಗ್‌ ಆರಂಭಿಸಿತ್ತು. ಚಿತ್ರದ ಅರ್ಧ ಭಾಗ ಶೂಟಿಂಗ್‌ ಮುಗಿಯುತ್ತಿರುವಾಗಲೇ ಕೋವಿಡ್ ಅಬ್ಬರ ಶುರುವಾಗಿದ್ದರಿಂದ ಯೋಗರಾಜ್‌ ಭಟ್‌ ಆ್ಯಂಡ್‌ ಟೀಮ್‌ ಕೆಲಕಾಲ ಗಾಳಿಪಟ ಹಾರಿಸುವ ಕೆಲಸಕ್ಕೆ ಬ್ರೇಕ್‌ ಹಾಕಿತ್ತು. ಆದರೆ ಆ ಬ್ರೇಕ್‌ ಎಷ್ಟು ದಿನಗಳ ಮಟ್ಟಿಗೆ ಮುಂದುವರೆಯುತ್ತದೆ ಅನ್ನೋದಕ್ಕೆ ಸದ್ಯದ ಮಟ್ಟಿಗಂತೂ ಭಟ್ಟರ ಬಳಿಯೂ ಉತ್ತರವಿಲ್ಲ. ಈಗಾಗಲೇ ನಿಧಾನವಾಗಿ ಚಿತ್ರರಂಗದ ಚಟುವಟಿಕೆಗಳು ರೀ-ಸ್ಟಾರ್ಟ್‌ ಆಗುತ್ತಿದ್ದರೂ, ಎಲ್ಲವೂ ಕೋವಿಡ್  ಭಯ ಮತ್ತು ಆತಂಕದ ನಡುವೆಯೇ ನಡೆಯುತ್ತಿದೆ.

ಸರ್ಕಾರದ ಕೆಲ ಮಾರ್ಗದರ್ಶಿ ಸೂತ್ರಗಳು ಶೂಟಿಂಗ್‌ ವೇಳೆ ಕೆಲವೊಮ್ಮೆ ಕಿರಿಕಿರಿಯೆನಿಸಿದರೂ, ಶೂಟಿಂಗ್‌ ಮಾಡಲೇಬೇಕು ಎಂದಾದರೆ, ಅನಿವಾರ್ಯವಾಗಿ ಅದೆಲ್ಲವನ್ನೂ ಫಾಲೋ ಮಾಡಲೇಬೇಕು. ಹೀಗಿರುವಾಗ ಇಂಥ ವಾತಾವರಣದಲ್ಲಿ ಈಗಲೇ ಶೂಟಿಂಗ್‌ ಮಾಡಬೇಕೆ? ಬೇಡವೇ ಎಂಬ ಗೊಂದಲ ಯೋಗರಾಜ್‌ ಭಟ್ಟರನ್ನೂ ಕಾಡುತ್ತಿದೆ.

ಈ ಬಗ್ಗೆ ಭಟ್ಟರು ಬೇರೆಯ ವಾದವನ್ನೇ ಮುಂದಿಡುತ್ತಾರೆ. “ಸರ್ಕಾರ ಏನೋ ಒಂದಷ್ಟು ಗೈಡ್‌ಲೈನ್‌ ಕೊಟ್ಟು ಶೂಟಿಂಗ್‌ ಮಾಡೋದಕ್ಕೆ ಅನುಮತಿ ಕೊಟ್ಟರೂ, ಇಂಥ ಪರಿಸ್ಥಿತಿಯಲ್ಲಿ ರಿಸ್ಕ್ ತೆಗೆದುಕೊಂಡು ಶೂಟಿಂಗ್‌ ಮಾಡೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ನಮ್ಮ ಮುಂದಿರುವ ಪ್ರಶ್ನೆ. ಸಿನಿಮಾ ಶೂಟಿಂಗ್‌ ಅಂದ್ರೆ, ಅಲ್ಲಿ ನೂರಾರು ಜನ ಇರ್ತಾರೆ. ಒಬ್ಬೊಬ್ಬರು ಒಂದೊಂದು ಕೆಲಸ ಮಾಡ್ತಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕುಟುಂಬ ಇರುತ್ತೆ. ಜೀವನ ಇರುತ್ತೆ. ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಶೂಟಿಂಗ್‌ ಮಾಡಬೇಕಾಗುತ್ತೆ. ಸ್ವಲ್ಪ ಹೆಚ್ಚು-ಕಮ್ಮಿಯಾದ್ರೂ ಅದಕ್ಕೆ ಎಲ್ರೂ ಹೊಣೆಗಾರರಾಗಬೇಕಾಗುತ್ತೆ. ಹೀಗಿರುವಾಗ, ಇಷ್ಟೇ ಸಮಯ ಕಳೆದಿದೆ.

ಇವೆಲ್ಲವೂ ಬಗೆಹರಿಯಲಿದೆ ಅನ್ನೋ ಭರವಸೆಯಿದೆ. ಇನ್ನೂ ಸ್ವಲ್ಪ ಸಮಯ ಸುಮ್ಮನಿದ್ದು ಎಲ್ಲವನ್ನೂ ನೋಡೋಣ’ ಎನ್ನುತ್ತಾರೆ ಭಟ್ಟರು. ಇನ್ನು ಯೋಗರಾಜ್‌ ಭಟ್‌ ನೀಡುವ ಮಾಹಿತಿಯಂತೆ, “ಗಾಳಿಪಟ-2′ ಚಿತ್ರದ ಅರ್ಧಕ್ಕಿಂತ ಹೆಚ್ಚು ಭಾಗ ಕರ್ನಾಟಕದಲ್ಲಿ ನಡೆಯುವ ಚಿತ್ರೀಕರಣ ಪೂರ್ಣವಾಗಿದೆ. ಪ್ಲಾನ್‌ ಪ್ರಕಾರ ವಿದೇಶದಲ್ಲಿ ಮಾಡಬೇಕಾಗಿರುವ ಚಿತ್ರೀಕರಣ ಮಾತ್ರ ಬಾಕಿಯಿದೆ. ಆದರೆ, ಸದ್ಯದ ಮಟ್ಟಿಗೆ ವಿದೇಶ ಹಾರಾಟಕ್ಕೆ ನಿಬಂಧನೆಗಳಿರುವುದರಿಂದ, ಅದೆಲ್ಲವೂ ತೆರವಾಗುವವರೆಗೆ ಗಾಳಿಪಟ ಹಾರಿ ಸುವಂ ತಿಲ್ಲ ಎಂದು ಸೂಚ್ಯವಾಗಿ ಹೇಳುತ್ತಾರೆ ಭಟ್ಟರು.

Advertisement

“ಎಲ್ಲದಕ್ಕೂ ಒಂದು ಫ‌ುಲ್‌ಸ್ಟಾಪ್‌ ಅಂತಿರುತ್ತದೆ. ಹಾಗೇ ಕೊರೊನಾಕ್ಕೂ ಒಂದು ಫ‌ುಲ್‌ಸ್ಟಾಪ್‌ ಇದ್ದೇ ಇದೆ. ವ್ಯಾಕ್ಸಿನೇಶನ್‌ ಬರುತ್ತಿದ್ದಂತೆ, ಕೊರೊನಾಕ್ಕೆ ತೆರೆ ಬೀಳಲಿದೆ. ಕೋವಿಡ್ ಅಬ್ಬರ, ಆತಂಕ ಕಡಿಮೆಯಾಗ್ತಿದೆ. ಹೇಗೂ, ಇಷ್ಟು ದಿನ ಶಾಂತಿಯಿಂದ ಇದ್ದೀವಿ. ಇನ್ನೂ ಸ್ವಲ್ಪ ದಿನ ಹೀಗೆ ಇರೋಣ. ಜೀವನ – ಜಗತ್ತು ಯಾವತ್ತೂ ಹೀಗೆ ಇರಲ್ಲ, ನಿಂತಲ್ಲೇ ನಿಲ್ಲೋದಿಲ್ಲ. ಅದು ಏನೂ ಮಾಡ್ಬೇಕೋ ಹಾಗೇ ಮಾಡುತ್ತದೆ. ಅಲ್ಲಿವರೆಗಾದ್ರೂ ನಾವು ಸ್ವಲ್ಪ ಶಾಂತಿಯಿಂದ ಇರೋಣ’ ಎಂದು ಶಾಂತಿ ಮಂತ್ರ ಜಪಿಸುತ್ತಾರೆ ಭಟ್ಟರು.­

ರಮೇಶ್‌ ರೆಡ್ಡಿ ನಿರ್ಮಾಣ : “ಗಾಳಿಪಟ-2′ ಚಿತ್ರವನ್ನು ರಮೇಶ್‌ ರೆಡ್ಡಿ ತಮ್ಮ ಸೂರಜ್‌ ಪ್ರೊಡಕ್ಷನ್ಸ್‌ನಡಿ ನಿರ್ಮಿಸುತ್ತಿದ್ದಾರೆ. ಈಗಾಗಲೇ ರಮೇಶ್‌ ರೆಡ್ಡಿ ತಮ್ಮ ಪ್ರೊಡಕ್ಷನ್ಸ್‌ನಡಿ “ಉಪ್ಪು ಹುಳಿ ಖಾರ’, “ಪಡ್ಡೆಹುಲಿ’, “100′ ಸಿನಿಮಾಗಳನ್ನು
ನಿರ್ಮಿಸಿದ್ದಾರೆ. ಅವರ ನಿರ್ಮಾಣದ “100′ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ಗಳನ್ನು ಮಾಡಬೇಕು ಎಂಬ ಉದ್ದೇಶದಿಂದ ರಮೇಶ್‌ ರೆಡ್ಡಿಯವರು ನಿರ್ಮಾಪಕ ರಾಗಿ ಬಂದಿದ್ದಾರೆ.

 

– ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next