ಗಂಗಾವತಿ: ಮಾಜಿ ಸಚಿವ ಬಳ್ಳಾರಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಹಾಗೂ ಗಂಗಾವತಿಯ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರ ಅನುಪಸ್ಥಿತಿಯಲ್ಲಿ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ರೆಡ್ಡಿ ಗಂಗಾವತಿಯ ಕನಕಗಿರಿ ರಸ್ತೆಯಲ್ಲಿರುವ ಕ್ರಿಯೇಟಿವ್ ಲೇಔಟ್ ನಲ್ಲಿ ಬುಧವಾರ (ಡಿ.14) ಮುಂಜಾನೆ ಬಳ್ಳಾರಿಯಿಂದ ಕರೆ ತಂದಿದ್ದ ಪುರೋಹಿತರು ಹಾಗೂ ಆಪ್ತರೊಂದಿಗೆ ನೂತನ ಗೃಹ ಪ್ರವೇಶ ಕಾರ್ಯಕ್ರಮ ನೆರವೇರಿಸಿದರು.
ಮೊದಲಿಗೆ ಗೋಮೂತ್ರ ಪ್ರೋಕ್ಷಣೆ ಮಾಡಿ ಗೋವನ್ನು ಕರೆ ತಂದು ಪೂಜೆ ನೆರವೇರಿಸಲಾಯಿತು. ನಂತರ ಬಳ್ಳಾರಿ ಹಾಗೂ ಗಂಗಾವತಿ ಪುರೋಹಿತರ ನೇತೃತ್ವದಲ್ಲಿ ಹೋಮ ಹವನ ಜರುಗಿದವು. ಅರುಣಾ ಲಕ್ಷ್ಮಿ ರೆಡ್ಡಿ ಅಡುಗೆ ಮನೆಯಲ್ಲಿ ಹಾಲು ಉಕ್ಕಿಸಿದರು.
ಹನುಮಮಾಲಾ ವಿಸರ್ಜನೆಗಾಗಿ ಗಂಗಾವತಿಗೆ ಆಗಮಿಸಿದ್ದ ಗಾಲಿ ಜನಾರ್ದನ ರೆಡ್ಡಿ, ಬಿಜೆಪಿ ಮುಖಂಡರು ಹಾಗೂ ನಗರಸಭೆಯ ಸದಸ್ಯರು ವಾಲ್ಮೀಕಿ, ಲಿಂಗಾಯತ ಸೇರಿ ಪ್ರಮುಖ ಸಮುದಾಯದ ಮುಖಂಡರು ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಿ ಗಂಗಾವತಿಯಲ್ಲಿ ಮನೆ ಮಾಡಿ ರಾಜಕೀಯ, ಸಾಮಾಜಿಕ ಸೇವೆ ಮಾಡಲು ನಿರ್ಧರಿಸಿದ್ದು, ಶೀಘ್ರದಲ್ಲೇ ಎಲ್ಲಾ ಅಭಿಮಾನಿಗಳು ಬಿಜೆಪಿ ಮುಖಂಡರು ಮಾಧ್ಯಮವರನ್ನು ಆಹ್ವಾನಿಸಿ ಗೃಹ ಪ್ರವೇಶ ಮಾಡುವುದಾಗಿ ತಿಳಿಸಿದ್ದರು. ಇದೀಗ ಏಕಾಏಕಿ ಅವರ ಪತ್ನಿ ಹಾಗೂ ಬಳ್ಳಾರಿ ಕೆಲ ಅವರ ಆಪ್ತರು ಬುಧವಾರ ಗಂಗಾವತಿ ಗೃಹ ಪ್ರವೇಶ ಮಾಡಿದ್ದಾರೆ.
ಗೃಹ ಪ್ರವೇಶದ ನಂತರ ಅರುಣಾ ಲಕ್ಷ್ಮಿ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಬುಧವಾರ ಒಳ್ಳೆಯ ದಿನವಿದ್ದ ಪ್ರಯುಕ್ತ ರೆಡ್ಡಿಯವರು ದೆಹಲಿ ಪ್ರವಾಸದಲ್ಲಿರುವುದರಿಂದ ಸರಳವಾಗಿ ಗೃಹ ಪ್ರವೇಶ ಮಾಡಲಾಗಿದೆ. ಗಂಗಾವತಿ ಸುತ್ತಮುತ್ತಲಿನ ಜನರ ರಾಜಕೀಯ ಮತ್ತು ಸಾಮಾಜಿಕ ಸೇವೆ ಮಾಡಲು ಮನೆ ಮಾಡಲಾಗಿದೆ. ಶೀಘ್ರ ರೆಡ್ಡಿ ಗಂಗಾವತಿಗೆ ಆಗಮಿಸಿ ಪತ್ರಕರ್ತರ ಜತೆ ಮಾತನಾಡಲಿದ್ದಾರೆಂದರು.
ಇತ್ತೀಚಿಗೆ ನಗರಕ್ಕೆ ಭೇಟಿ ನೀಡಿದ್ದ ಗಾಲಿ ಜನಾರ್ದನ ರೆಡ್ಡಿ ಜತೆಗಿದ್ದ ಬಿಜೆಪಿ ಹಿರಿಯರ ಮುಖಂಡರು ಕಾರ್ಯಕರ್ತರು ಹಾಗೂ ಸಂಘ-ಪರಿವಾರದ ಕಾರ್ಯಕರ್ತರು, ಮುಖಂಡರು ಗೃಹ ಪ್ರವೇಶದ ಸಂದರ್ಭದಲ್ಲಿ ಗೈರಾಗಿದ್ದು, ನಾನಾ ಚರ್ಚೆಗಳಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.