ಗಂಗಾವತಿ: ಬಳ್ಳಾರಿಯಿಂದ ನನ್ನನ್ನು ಹೊರಗೆ ಹಾಕಲು ಕಾರಣರಾದವರಿಗೆ ಗಂಗಾವತಿ ಜನತೆಯ ಆಶೀರ್ವಾದ ಪಡೆದು ಗೆದ್ದ ನಂತರ ಉತ್ತರ ನೀಡುವುದಾಗಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸಂಸ್ಥಾಪಕ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹೇಳಿದರು.
ಅವರು ಗಂಗಾವತಿಯಲ್ಲಿ ಅಭಿಮಾನಿಗಳಿಂದ ಸನ್ಮಾನಿಸಿ ಮಾತನಾಡಿದರು. ಮುಂದೆ ಸುಪ್ರೀಂಕೋರ್ಟ್ ತೀರ್ಪು ಏನೇ ಬರಲಿ ಇನ್ನು ನನ್ನ ಜನ್ಮ ಇರುವ ತನಕ ಗಂಗಾವತಿ ನನ್ನ ಕರ್ಮ ಭೂಮಿಯಾಗಿದೆ. ಬಳ್ಳಾರಿಯಿಂದ ಹೊರಗೆ ರೆಡ್ಡಿ ಹಾಗೂ ಆಪ್ತರನ್ನು ಹೊರಗೆ ಹಾಕಿದರೆ ಕಥೆ ಮುಗಿಯಿತು ಎಂದುಕೊಂಡಿದ್ದಾರೆ ಇದನ್ನು ಸುಳ್ಳು ಮಾಡಲು ನಾನು ಗಂಗಾವತಿ ಕ್ಷೇತ್ರದಿಂದ ಜನತೆಯ ಪ್ರೀತಿ-ವಿಶ್ವಾಸಗಳೊಂದಿಗೆ ಗೆದ್ದು ವಿರೋಧಿಗಳಿಗೆ ಉತ್ತರ ಕೊಡುತ್ತೇನೆ. ಕಿಷ್ಕಿಂಧಾ ಅಂಜನಾದ್ರಿ, ಕುಮಾರರಾಮ ಆಡಳಿತ ನಡೆಸಿದ ಪವಿತ್ರ ಭೂಮಿಯಾಗಿದೆ.
ಇಲ್ಲಿ ಪ್ರತಿಯೊಬ್ಬರೂ ಶ್ರೀರಾಮ,ಹನುಮಂತ ಹಾಗೂ ಗಂಡುಗಲಿ ಕುಮಾರರಾಮನ ಶಕ್ತಿ ಹೊಂದಿದ್ದಾರೆ. ನನಗೆ ಈ ಕ್ಷೇತ್ರದ ಜನರು ಹನುಮರಂತೆ ಕಾಣುತ್ತಿದ್ದಾರೆ ಇವರ ಆಶೀರ್ವಾದ ಪಡೆದು ಗೆದ್ದು ಗಂಗಾವತಿಯ ಸಮಗ್ರ ಅಭಿವೃದ್ಧಿಗೆ ಹಗಲು ಇರುಳು ಶ್ರಮಿಸುತ್ತೇನೆ.
ಗಂಗಾವತಿಯ ಪ್ರತಿಯೊಂದು ವಾರ್ಡ್ ಮತ್ತು ಗ್ರಾಮಗಳಲ್ಲಿ ಕುಡಿಯುವ ನೀರು, ಮೂಲಸೌಕರ್ಯ ಸೇರಿದಂತೆ ಯುವ ಜನಾಂಗಕ್ಕೆ ಉದ್ಯೋಗ ನೀಡುವ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ . 2023 ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಪಾರ್ಟಿಯಿಂದ ವಿವಿಧ ಕ್ಷೇತ್ರಗಳಲ್ಲಿ ನಿಲ್ಲುವ ಅಭ್ಯರ್ಥಿಗಳ ಪರವಾಗಿ ಗಂಗಾವತಿಯಿಂದಲೇ ಪ್ರತಿನಿತ್ಯವು ತೆರಳಿ ಪ್ರಚಾರ ನಡೆಸಿ ಮರಳಿ ಗಂಗಾವತಿಗೆ ಬರುತ್ತೇನೆ. ಕೆಲ ಪಕ್ಷಗಳ ಮುಖಂಡರು ತಮ್ಮ ವಿರುದ್ಧ ಷಡ್ಯಂತ್ರ ನಡೆಸಿದ್ದು ಇದಕ್ಕೆ ಗಂಗಾವತಿ ಜನರೇ ಉತ್ತರ ನೀಡಲಿದ್ದಾರೆ. ಬಿಜೆಪಿ ಮತ್ತು ಸಂಘಟನೆಗಾಗಿ ನಾನು ಈ ಹಿಂದೆ ಹಗಲಿರುಳು ದುಡಿದಿದ್ದು ಈಗ ಅದನ್ನು ಬಿಜೆಪಿ ಮುಖಂಡರು ಮರೆತ್ತಿದ್ದಾರೆ. ನನ್ನ ಕಷ್ಟಗಳಿಗೆ ಜನತೆ ಚುನಾವಣೆಯಲ್ಲಿ ಪರಿಹಾರ ನೀಡಲಿದ್ದಾರೆ.
ಗಂಗಾವತಿಯಲ್ಲಿ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ, ಗೌರವಕ್ಕೆ ಎಂದಿಗೂ ಮರೆಯುವುದಿಲ್ಲ .ಜೀವನ ಇರೋವರೆಗೂ ಗಂಗಾವತಿಯಲ್ಲಿ ಕಾಲ ಕಳೆಯುತ್ತೇನೆ ಇಲ್ಲಿಯ ಜನರು ಜಾತಿ ಪಕ್ಷ ರಹಿತವಾಗಿ ನನಗೆ ಗೌರವ ನೀಡುತ್ತಿದ್ದಾರೆ. ಅವರ ಋಣವನ್ನು ತೀರಿಸಲು ನಾನು ಗಂಗಾವತಿಯಲ್ಲಿಯೇ ನೆಲೆಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಜನಾರ್ದನರಡ್ಡಿ ಅಭಿಮಾನಿಗಳಿದ್ದರು.
ಇದನ್ನೂ ಓದಿ: ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್