ರಾಯಚೂರು: ಷರತ್ತಿನ ಮೇರೆಗೆ ತವರು ಜಿಲ್ಲೆ ಬಳ್ಳಾರಿಗೆ ಆಗಮಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇಂದು (ಆ.24) ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.
ಮಂತ್ರಾಲಯದಲ್ಲಿ ನಡೆಯುತ್ತಿರು ರಾಯರ 350ನೇ ಆರಾಧನೆ ನಿಮಿತ್ತ ಮಂಗಳವಾರ ಸಂಜೆ ಪತ್ನಿ ಅರುಣಾ ಲಕ್ಷ್ಮಿ ಸಮೇತರಾಗಿ ಆಗಮಿಸಿದರು . ಮಂಚಾಲಮ್ಮ ದೇವಿ ಹಾಗೂ ರಾಯರ ಮೂಲ ಬೃಂದಾವನ ದರ್ಶನ ಪಡೆದರು.
ಇತ್ತೀಚಿಗಷ್ಟೆ ಗಾಲಿ ಜನಾರ್ದನ ರೆಡ್ಡಿಗೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಜಿಲ್ಲೆಗಳಲ್ಲಿ ಎಂಟು ವಾರಗಳ ಕಾಲ ಉಳಿಯಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
ಹಿಂದಿನ ಸಂದರ್ಭದಲ್ಲಿ ಬಳ್ಳಾರಿಗೆ ಭೇಟಿ ನೀಡಿದಾಗ ರೆಡ್ಡಿ ಅವರು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂಬುದನ್ನು ಪರಿಗಣಿಸಿದ ನ್ಯಾಯಪೀಠ, ರೆಡ್ಡಿ ಅವರ ಉತ್ತಮ ನಡತೆಯ ಆಧಾರದ ಮೇಲೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಈ ಪ್ರಕರಣದ ವಿಚಾರಣೆ ಇನ್ನೂ ಆರಂಭಗೊಂಡಿಲ್ಲ. ಅರ್ಜಿದಾರರು ಬಳ್ಳಾರಿಗೆ ಭೇಟಿ ನೀಡಿದಾಗ ಯಾವುದೇ ಜಾಮೀನು ಷರತ್ತನ್ನು ಉಲ್ಲಂಘಿಸಿಲ್ಲ. ಪ್ರಕರಣದ ಈ ಸಂಗತಿಗಳು ಮತ್ತು ಸನ್ನಿವೇಶಗಳನ್ನು ನೋಡಿದರೆ, ಜಾಮೀನು ಆದೇಶವನ್ನು ಮಾರ್ಪಡಿಸುವಂತೆ ನಿರ್ದೇಶಿಸಿದೆ ಎಂದು ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ದಿನೇಶ್ ಮಹೇಶ್ವರಿ ಹೇಳಿದ್ದಾರೆ.
ಇದರೊಂದಿಗೆ, ಬಳ್ಳಾರಿ (ಕರ್ನಾಟಕ), ಕಡಪ ಮತ್ತು ಅನಂತಪುರ (ಆಂಧ್ರ ಪ್ರದೇಶ) ಜಿಲ್ಲೆಗಳಿಗೆ ಭೇಟಿ ನೀಡಲು ಮತ್ತು ಉಳಿದುಕೊಳ್ಳಲು ರೆಡ್ಡಿಗೆ ಅನುಮತಿ ನೀಡಲಾಗಿದೆ. 2015ರ ಜ. 20ರಂದು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು, ಆದರೆ ಈ ಜಿಲ್ಲೆಗಳಿಗೆ ಭೇಟಿ ನೀಡದಂತೆ ಷರತ್ತು ವಿಧಿಸಿತ್ತು.