Advertisement

ಹೊರೆ ಭರಿಸಲು ಗೇಲ್‌ ಸಿದ್ಧ

01:47 AM Jul 08, 2019 | Lakshmi GovindaRaj |

ಬೆಂಗಳೂರು: ಚೆನ್ನೈ ರಾಷ್ಟ್ರೀಯ ಹಸಿರು ಪೀಠದ ಸೂಚನೆ ನಡುವೆಯೂ ಡೀಸೆಲ್‌ ಬಸ್‌ಗಳ ಖರೀದಿಗೆ ಬಿಎಂಟಿಸಿ ಆಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ನೈಸರ್ಗಿಕ ಅನಿಲ (ಸಿಎನ್‌ಜಿ) ಆಧಾರಿತ ಬಸ್‌ಗಳ ಖರೀದಿಯಿಂದ ಆಗಲಿರುವ ಹೆಚ್ಚುವರಿ ಆರ್ಥಿಕ ಹೊರೆಯನ್ನೂ ತಾನೇ ಭರಿಸಿಕೊಡಲು ಭಾರತೀಯ ಅನಿಲ ಪ್ರಾಧಿಕಾರ (ಗೇಲ್‌) ಮುಂದೆಬಂದಿದೆ.

Advertisement

ನೂರು ಸಿಎನ್‌ಜಿ ಬಸ್‌ಗಳನ್ನು ಖರೀದಿಸಿದರೆ, ಹೆಚ್ಚುವರಿ ಹಣವನ್ನು ಸಂಪೂರ್ಣವಾಗಿ ಭರಿಸಲಾಗುವುದು. ಒಂದು ವೇಳೆ 200 ಸಿಎನ್‌ಜಿ ಬಸ್‌ಗಳನ್ನು ಖರೀದಿಸಿದರೆ, ಹೆಚ್ಚುವರಿ ಹಣದಲ್ಲಿನ ಅರ್ಧದಷ್ಟು ತುಂಬಿಕೊಡುವುದಾಗಿ ಗೇಲ್‌ ಭರವಸೆ ನೀಡಿದೆ. ಡೀಸೆಲ್‌ ಬಸ್‌ಗಳಿಗೆ ಹೋಲಿಸಿದರೆ ಸಿಎನ್‌ಜಿ ಬಸ್‌ಗಳು ದುಬಾರಿ ಎಂಬ ವಾದವನ್ನು ಈ ಹಿಂದೆ ಬಿಎಂಟಿಸಿ ಮುಂದಿಟ್ಟಿತ್ತು. ಆದ್ದರಿಂದ ಗೇಲ್‌ ಈ ಆಫ‌ರ್‌ ನೀಡಿದೆ.

ಅಲ್ಲದೆ, ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌ ಸೇರಿದಂತೆ ಹಣಕಾಸು ಇಲಾಖೆ, ಬಿಎಂಟಿಸಿಗೆ ಪತ್ರ ಕೂಡ ಬರೆದಿದೆ. ಆಯ್ಕೆ ಈಗ ಬಿಎಂಟಿಸಿಗೆ ಬಿಟ್ಟಿದ್ದು. ಮಾರುಕಟ್ಟೆಯಲ್ಲಿ ಡೀಸೆಲ್‌ ಬಸ್‌ಗಳ ಬೆಲೆ ಅಂದಾಜು 35 ಲಕ್ಷ ರೂ. ಸಿಎನ್‌ಜಿ ಆಧಾರಿತ ಬಸ್‌ಗಳ ಬೆಲೆ 40 ಕೋಟಿ ರೂ. ಅಂದರೆ ಪ್ರತಿ ಬಸ್‌ಗೆ ಐದು ಲಕ್ಷ ರೂ. ಹೆಚ್ಚುವರಿ ಹೊರೆ ಆಗುತ್ತದೆ.

ನೂರು ಬಸ್‌ಗಳಿಗೆ ಸುಮಾರು ಐದು ಕೋಟಿ ರೂ. ಆಗುತ್ತದೆ. ಈ ಹಣವನ್ನು ನಾವೇ ಭರಿಸುತ್ತೇವೆ. ಇನ್ನು ಈಗಾಗಲೇ ಹೆಣ್ಣೂರು, ಪೀಣ್ಯ, ಸುಮನಹಳ್ಳಿಯಲ್ಲಿ ಸಿಎನ್‌ಜಿ ನಿಲ್ದಾಣಗಳೂ ಮೂರು ವರ್ಷಗಳ ಹಿಂದೆಯೇ ಸಜ್ಜಾಗಿವೆ. ಇವುಗಳಿಗೆ ಪರವಾನಗಿಯೂ ದೊರಕಿದೆ. ರಾಷ್ಟ್ರೀಯ ಹಸಿರು ಪೀಠ ಕೂಡ “ಪರಿಸರ ಸ್ನೇಹಿ’ ಬಸ್‌ಗಳನ್ನೇ ಖರೀದಿಸುವಂತೆ ಬಿಎಂಟಿಸಿಗೆ ಸೂಚನೆ ನೀಡಿದೆ.

ಈಗೇನಿದ್ದರೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಬಸ್‌ಗಳನ್ನು ರಸ್ತೆಗಿಳಿಸಲು ಮನಸ್ಸು ಮಾಡಬೇಕಿದೆ ಅಷ್ಟೇ ಎಂದು ಪ್ರಾಧಿಕಾರದ ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು. ಇದಲ್ಲದೆ, ನಿರ್ವಹಣಾ ವೆಚ್ಚ ದುಬಾರಿ ಆಗುತ್ತದೆ ಎಂದು ಬಿಎಂಟಿಸಿ ವಾದಿಸುತ್ತಿದೆ. ಆದರೆ ಸಿಎನ್‌ಜಿಗೆ ಹೋಲಿಸಿದರೆ, ಡೀಸೆಲ್‌ ದರ 10 ರೂ.ಗಳಷ್ಟು ಹೆಚ್ಚಾಗುತ್ತದೆ. ಹಾಗಾಗಿ, ಈ ಹೊರೆಯನ್ನು ಕೂಡ ಸರಿದೂಗಿಸಬಹುದು ಎಂದು ಗೇಲ್‌ ಅಧಿಕಾರಿಗಳು ಪ್ರತಿಪಾದಿಸುತ್ತಾರೆ.

Advertisement

ಖರೀದಿಗೆ ಸಲಹೆ – ಸಿಎಸ್‌: “ಸಿಎನ್‌ಜಿ ಬಸ್‌ಗಳ ಖರೀದಿಯಿಂದಾಗುವ ಹೆಚ್ಚುವರಿ ಹೊರೆಯನ್ನು ಭರಿಸಿಕೊಡುವುದಾಗಿ ಗೇಲ್‌ ಹೇಳಿದೆ. ಆದ್ದರಿಂದ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಖರೀದಿಸುವುದು ಸೂಕ್ತ ಎಂಬ ಸಲಹೆ ನೀಡಿದ್ದೇನೆ. ಆದರೆ, ಅಂತಿಮವಾಗಿ ಬಿಎಂಟಿಸಿ ನಿರ್ದೇಶಕರ ಮಂಡಳಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌ ಸ್ಪಷ್ಟಪಡಿಸಿದರು.

ಎಲ್ಲಾ ಲೆಕ್ಕಹಾಕಿದ್ರೂ ದುಬಾರಿ – ಬಿಎಂಟಿಸಿ: ಬಿಎಂಟಿಸಿ ಒಟ್ಟಾರೆ 1,300 ಡೀಸೆಲ್‌ ಬಸ್‌ಗಳ ಖರೀದಿಸಲು ಉದ್ದೇಶಿಸಿದೆ. ಇದರಲ್ಲಿ ಸಿಎನ್‌ಜಿ ಬಸ್‌ಗಳ ಪ್ರಸ್ತಾವನೆ ಇಲ್ಲ. ಯಾಕೆಂದರೆ ಡೀಸೆಲ್‌ಗೆ ಹೋಲಿಸಿದರೆ, ಸಿಎನ್‌ಜಿ ಬಸ್‌ಗಳ ನಿರ್ವಹಣಾ ವೆಚ್ಚ ತುಂಬಾ ದುಬಾರಿ.

ನಟ್ಟುಬೋಲ್ಟ್ನಿಂದ ಹಿಡಿದು ಸಿಎನ್‌ಜಿ ಬಸ್‌ನ ಪ್ರತಿಯೊಂದು ಬಿಡಿಭಾಗಗಳು ದುಬಾರಿಯಾಗಿವೆ. ಮೇಲ್ನೋಟಕ್ಕೆ ಇಂಧನ ಹೊರೆ ತಗ್ಗಿದಂತೆ ಕಂಡುಬಂದರೂ, ಒಟ್ಟಾರೆ ಲೆಕ್ಕಹಾಕಿದರೆ 10-12 ರೂ. ಹೆಚ್ಚಳ ಆಗುತ್ತದೆ. ಆದ್ದರಿಂದ ಸಿಎನ್‌ಜಿ ಬಸ್‌ಗಳಿಗೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಉನ್ನತ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಆದರೆ, ಮುಂಬೈನಲ್ಲಿ ಇದು ಲಾಭದಲ್ಲಿದೆ ಎಂದು ಸ್ವತಃ ಅಲ್ಲಿನ ಸಾರಿಗೆ ಸಂಸ್ಥೆಯು ಲಿಖೀತವಾಗಿ ತಮಗೆ ನೀಡಿದೆ. ಹೀಗಿರುವಾಗ, ಇಲ್ಲಿ ಮಾತ್ರ ನಷ್ಟ ಹೇಗೆ ಆಗುತ್ತದೆ. ಆದ್ದರಿಂದ ಮೊದಲು ಸಿಎನ್‌ಜಿ ಬಸ್‌ಗಳನ್ನು ರಸ್ತೆಗಿಳಿಸಿದರೆ, ವಾಸ್ತವ ಗೊತ್ತಾಗಲಿದೆ. ಈ ನಿಟ್ಟಿನಲ್ಲಿ ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಗೇಲ್‌ ಅಧಿಕಾರಿಗಳು ಪ್ರಶ್ನಿಸುತ್ತಾರೆ.

ಪ್ರಾಧಿಕಾರದ ಸ್ವಾರ್ಥವೂ ಇದೆ!: 2016ರಲ್ಲೇ 17 ಕೋಟಿ ರೂ. ವೆಚ್ಚದಲ್ಲಿ ನಗರದ ಹೆಣ್ಣೂರು, ಸುಮನಹಳ್ಳಿ ಮತ್ತು ಪೀಣ್ಯದಲ್ಲಿ ಬಿಎಂಟಿಸಿ ಡಿಪೋ ಜಾಗದಲ್ಲಿ ಸಿಎನ್‌ಜಿ ನಿಲ್ದಾಣಗಳನ್ನು ಗೇಲ್‌ ನಿರ್ಮಿಸಿದೆ. ಆದರೆ, ಅವು ನಿರುಪಯುಕ್ತವಾಗಿವೆ. ಇಷ್ಟೊಂದು ಹೂಡಿಕೆ ಮಾಡಿ ಬಳಕೆಯಾಗದಿರುವುದು ನುಂಗಲಾರದ ತುತ್ತಾಗಿದೆ. ಇದಕ್ಕಾಗಿ ಐದು ಕೋಟಿ ರೂ. ಹೊರೆಯಾದರೂ ಭರಿಸಲು ಮುಂದೆಬಂದಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರದ ಸ್ವಾರ್ಥವೂ ಇದೆ ಎಂದು ಮೂಲಗಳು ತಿಳಿಸಿವೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next