ವಿರಹ ಯಾತನೆ ಎಂಬುದು ಬದುಕಿನ ಎಲ್ಲ ನೋವುಗಳ ಮೊತ್ತ ಎಂಬುದನ್ನು ನೆನಪಿಡು. ಕಾಡಿ-ಬೇಡಿಯಾದರೂ ಕರೆಯ ರಿಂಗಣಿಸುತ್ತಿದ್ದ ನೀನು ಈಗ ನನ್ನ ಸಂತ್ರಸ್ತ ಹೃದಯದ ಕರೆಯನ್ನು ಕೇಳಿಸಿಕೊಳ್ಳದಷ್ಟು ನಿರ್ದಯಿಯಾದೆಯಾ?
ಪರೀಕ್ಷಾ ದಿನ ಹತ್ತಿರವಾಗಿ ನಮ್ಮ ಕಾಲೇಜು ಮುಗಿಯುವ ದಿನಗಳು ಸಮೀಪಿಸುತ್ತಿವೆ. ಮನದೊಳಗೆ ಏನೋ ಒಂದು ರೀತಿಯ ತಲ್ಲಣ, ಕಂಪನ, ಇನ್ನೂ ಏನೇನೋ. ನನ್ನೀ ಬದುಕಿನಲ್ಲಿ ಪ್ರೀತಿ-ಪ್ರೇಮಗಳ ಪಾತ್ರ, ಬಾಳ ಸಂಗಾತಿಯ ಆಯ್ಕೆಯ ಗೊಂದಲ, ವಿರಹ, ನೋವು, ಪರಿತಾಪ, ಮುನಿಸು, ಜಗಳ ಇವೆಲ್ಲವುಗಳನ್ನೂ ಉಣಬಡಿಸಿದವಳು ನೀನು. ನೋವು-ನಲಿವುಗಳ ಸಮ್ಮಿಶ್ರಣವೇ ಸುಂದರ ಬದುಕಿನ ಸಾರವೆಂಬುದನ್ನು ನನಗೆ ಕಲಿಸಿಕೊಟ್ಟವಳು ನೀನು. ಸೆಲ್ಫಿ ತೆಗೆದುಕೊಳ್ಳುವಾಗಲೂ ಪರದೆಯ ಮೇಲೆ ನಾನೇ ಮಾಯವಾಗಿ ನಿನ್ನದೇ ಚಿತ್ರ ಮಾತ್ರ ಕಾಣುತ್ತಿದ್ದ ದಿನಗಳೀಗ ಇತಿಹಾಸ ಪುಟದ ವಶವಾಗಬಹುದೆಂಬ ಭಯ ಆವರಿಸಿದೆ.
ಕಾರಣವ ಹೇಳದೇ ದೂರವಾಗಬಯಸಿದ ನೀನು ನನಗೆ ನೋವು ಕೊಡುವ ಇಚ್ಛೆಯಿದ್ದರೆ ಅದು ದಯವಿಟ್ಟು ಪ್ರೀತಿಯಲ್ಲಿ ಬೇಡ ಕಣೇ. ವಿರಹ ಯಾತನೆ ಎಂಬುದು ಬದುಕಿನ ಎಲ್ಲ ನೋವುಗಳ ಮೊತ್ತ ಎಂಬುದನ್ನು ನೆನಪಿಡು. ಕಾಡಿ-ಬೇಡಿಯಾದರೂ ಕರೆಯ ರಿಂಗಣಿಸುತ್ತಿದ್ದ ನೀನು ಈಗ ನನ್ನ ಸಂತ್ರಸ್ತ ಹೃದಯದ ಕರೆಯನ್ನು ಕೇಳಿಸಿಕೊಳ್ಳದಷ್ಟು ನಿರ್ದಯಿಯಾದೆಯಾ? ದಿನಚರಿಯ ಬಹು ಪಾಲು ಸಮಯವನ್ನೆಲ್ಲ ನಿನ್ನದೇ ಹೆಸರಿಗೆ ಮೀಸಲಿಡುತ್ತಿದ್ದವನು ನಾನು. ಇಂದೇಕೋ ಮೌನದ ವಶವಾಗಿದ್ದೇನೆ. ನಿನ್ನ ಹೆಸರೇ ಮಾಯವಾಗಿದೆ. ನೀ ಬರೆದ ಬಣ್ಣ ಬಣ್ಣದ ಪ್ರೇಮಪತ್ರಗಳೆಲ್ಲ ಬಣ್ಣ ಕಳೆದುಕೊಂಡು ನಮ್ಮಿಬ್ಬರ ಪ್ರೀತಿಗೆ ಮರಣ ಶಾಸನವಾಗುತ್ತವೆಯೇನೋ ಎಂಬ ಸಣ್ಣ ಸುಳಿವೊಂದು ತನ್ನ ಇರುವಿಕೆಯನ್ನು ಸೂಚಿಸುತ್ತಿದೆ.
ನೀನು ದೂರವಾದಷ್ಟೂ ನನ್ನ ಹೃದಯದ ಬಡಿತ ಶತಕ ಬಾರಿಸುವ ತವಕದಲ್ಲಿ ವೇಗ ಪಡೆದುಕೊಳ್ಳುತ್ತಿದೆ. ನಿರ್ಜನ ರಸ್ತೆಯಲ್ಲಿ ಏಕಾಂಗಿಯಾಗಿ ನಡೆಯುವಾಗ ಎಲ್ಲಿಂದಲೋ ಕೇಳಿ ಬರುವ ಆ ಗೆಜ್ಜೆನಾದ ನಿನ್ನ ನೆನಪನ್ನೇ ಕಣ್ಮುಂದೆ ತಂದು ನಿಲ್ಲಿಸುತ್ತಿದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ನನ್ನ ಮನದ ಬಾಗಿಲನ್ನು ನಿನಗಾಗಿ ತೆರೆದಿಡಲು ಸಿದ್ಧನಾಗಿದ್ದೇನೆ. ನೀನು ದೂರವಾದ ನೆನಪುಗಳೆಲ್ಲ ಕೇವಲ ಕನಸಿನ ಪುಟದ ವಶವಾಗುವಂತೆ ನೀ ಬಂದು ಸೇರು ಗೆಳತಿ. ನಮ್ಮಿಬ್ಬರ ಪ್ರೀತಿಯ ನೆನಪಿಗಾಗಿ ನೆಟ್ಟ ಈ ಸಸಿ ಬೆಳೆದು ದೊಡ್ಡದಾಗಿ ಇದೇ ರಸ್ತೆಯ ಮೇಲೆ ಚೆಲ್ಲುವ ನೆರಳಿನಲ್ಲಿ ಕುಳಿತು ನಾವಿಬ್ಬರೂ ತಮಾಷೆಯ ಗಳಿಗೆಗಳನ್ನು ಕಳೆಯಬೇಕೆಂಬ ಕನಸು ಕಮರಿ ಹೋಗದಿರಲಿ.
ನಮ್ಮಿಬ್ಬರ ಪ್ರೀತಿಯ ಜೀವವೇ ನಿನ್ನ ಸಮ್ಮತಿಯನ್ನವಲಂಬಿಸಿದೆ. ಅಸಮ್ಮತಿಯ ಅಸ್ತ್ರ ಬಳಸಿ ಮುಗ್ಧ ಪ್ರೀತಿಯ ಕೊಲ್ಲದೇ ಸಮ್ಮತಿಯ ಧಾರೆಯೆರೆದು ಪ್ರೀತಿಯನ್ನು ಪೋಷಿಸು. ಕೈ ಜಾರುವ ಪ್ರೀತಿಯನ್ನು ಮರಳಿ ಪಡೆದು ಜಗತ್ತನ್ನೇ ಗೆದ್ದಷ್ಟು ಸಂತಸ ನನ್ನದಾಗಲಿ.
ಇಂತಿ ನಿನ್ನ ಪ್ರೀತಿಯ ಆಕಾಂಕ್ಷಿ,
ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ