Advertisement

ಡಾ.ರಾಜ್‌ ಜನಿಸಿದ ಮನೆಗೆ ಕಾಯಕಲ್ಪ

12:51 PM Dec 12, 2021 | Team Udayavani |

ಚಾಮರಾಜನಗರ: ವರನಟ ಡಾ.ರಾಜಕುಮಾರ್‌ ಅವರು ಜನಿಸಿದ, ಸುಮಾರು 200 ವರ್ಷಕ್ಕಿಂತಲೂ ಹಳೆಯದಾದ ಗಾಜನೂರಿನ ಮನೆಯನ್ನು ಅನೇಕ ವರ್ಷಗಳ ನಂತರ ದುರಸ್ತಿ ಮಾಡಲಾಗುತ್ತಿದೆ. ಜಿಲ್ಲೆಯ ಗಡಿಯಲ್ಲಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಗಾಜನೂರಿನಲ್ಲಿ ಡಾ.ರಾಜ ಕುಮಾರ್‌ ಅವರು ಜನಿಸಿದ ಹಳೆಯ ಪುಟ್ಟ ಮನೆ ಯನ್ನು ರಾಜ್‌ ಅವರ ಆಶಯದಂತೆ ಹಾಗೇ ಉಳಿಸಿ ಕೊಳ್ಳಲಾಗಿದೆ.

Advertisement

ಆದರೆ ಕಳೆದ ತಿಂಗಳು ಸುರಿದ ಮಳೆಯ ಸಂದರ್ಭದಲ್ಲಿ ನೀರು ಸೋರಿ, ಗೋಡೆ ಗಳು ಶಿಥಿಲಗೊಂಡಿದ್ದರಿಂದ ಅದನ್ನು ದುರಸ್ತಿಗೊಳಿ ಸಲು ರಾಜ್‌ ಸೋದರಳಿಯ (ರಾಜ್‌ ತಂಗಿ ನಾಗಮ್ಮ ಅವರ ಪುತ್ರ) ಗೋಪಾಲ್‌ ಮುಂದಾಗಿದ್ದಾರೆ. ಗಾಜನೂರಿನಲ್ಲಿ ರಾಜಕುಮಾರ್‌ ಅವರು ಜನಿಸಿದ ಮನೆಯನ್ನು ಮೂಲಸ್ವರೂಪದಲ್ಲೇ ಉಳಿಸಿಕೊಳ್ಳಲಾಗಿದೆ.

ರಾಜಕುಮಾರ್‌ ಅವರು ಚಲನಚಿತ್ರ ರಂಗದಲ್ಲಿ ಯಶಸ್ವಿ ನಟರಾಗಿ ಪ್ರವರ್ಧಮಾನಕ್ಕೆ ಬಂದ ಬಳಿಕ, ಊರಾಚೆ ಜಮೀನಿನಲ್ಲಿ ಸಾಧಾರಣವಾದ ಇನ್ನೊಂದು ಮನೆ ನಿರ್ಮಿಸಿಕೊಂಡಿದ್ದರು. ವೀರಪ್ಪನ್‌ನಿಂದ ಅಪಹರಣಕ್ಕೊಳಗಾಗುವವರೆಗೂ, ಗಾಜನೂರಿಗೆ ಹೋದಾಗ ರಾಜ್‌ ಅಲ್ಲೇ ತಂಗುತ್ತಿದ್ದರು.

ರಾಜ್‌ ಸೋದರಿ ನಾಗಮ್ಮ ಅವರ ಪುತ್ರ ಗೋಪಾಲ್‌ ಮತ್ತು ಕುಟುಂಬದವರು ಆ ಮನೆಯಲ್ಲಿ ವಾಸಿಸುತ್ತಿದ್ದರು. ತಮ್ಮ ವಿಶ್ರಾಂತ ಜೀವನವನ್ನು ಗಾಜನೂರಿನಲ್ಲೇ ಕಳೆಯಲು ಅಣ್ಣಾವ್ರು ಇಚ್ಛಿಸಿದ್ದರಿಂದ, ಆಧುನಿಕ ಶೈಲಿಯಲ್ಲಿ ದೊಡ್ಡ ಮನೆಯನ್ನು ತೋಟದ ಮನೆಯ ಎದುರಿನಲ್ಲೇ ನಿರ್ಮಿಸಲಾಯಿತು.

ಅದಾದ ಕೆಲವೇ ದಿನಗಳಲ್ಲಿ ರಾಜಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್‌ ಅಪಹರಿಸಿದ್ದ. ಅನಂತರ ಗಾಜನೂರಿಗೆ ಒಮ್ಮೆ ಮಾತ್ರ ರಾಜ್‌ ಬಂದಿದ್ದರು. ಭದ್ರತಾ ಕಾರಣ ಗಳಿಗಾಗಿ ಪೊಲೀಸರು ಗಾಜನೂರಿನಲ್ಲಿ ತಂಗಲು ಆ ಸಂದರ್ಭದಲ್ಲಿ ಅವಕಾಶ ನೀಡಲಿಲ್ಲ. ಇಚ್ಛೆ ಪಟ್ಟು ನಿರ್ಮಿಸಿದ ದೊಡ್ಡ ಮನೆಯಲ್ಲಿ ರಾಜ್‌ಕುಮಾರ್‌ ಅವರು ಒಂದು ದಿನವೂ ವಾಸಿಸಲಾಗಲಿಲ್ಲ. ಗಾಜನೂರಿನೊಳಗೆ ಇದ್ದ ರಾಜಕುಮಾರ್‌ ಜನಿಸಿದ ಮನೆಗೆ ಬೀಗ ಹಾಕಲಾಗಿತ್ತು.

Advertisement

ಇದನ್ನೂ ಓದಿ;- ವಿಶ್ವಕ್ಕೆ ಸಿಹಿ ಉಣಿಸಲು ಸಜ್ಜಾದ ಗೋಧಿ ಹುಗ್ಗಿ 

ಗಾಜನೂರಿಗೆ ಭೇಟಿ ನೀಡುವ ಅಭಿಮಾನಿಗಳು ಅಣ್ಣಾವು ಜನಿಸಿದ ಮನೆಯನ್ನು ವೀಕ್ಷಿಸಲು ಹೋಗುತ್ತಿದ್ದರು. ಪುನೀತ್‌ ರಾಜ್‌ಕುಮಾರ್‌ ಸಹ ನಾಲ್ಕೈದು ತಿಂಗಳ ಹಿಂದೆ ಈ ಮನೆಗೆ ಭೇಟಿ ನೀಡಿ ಪಡಸಾಲೆಯಲ್ಲಿ ಕುಳಿತು ಆನಂದಿಸಿದ್ದರು. ಹಳೆಯ ಮನೆಯನ್ನು ಹಾಗೇ ಉಳಿಸಿಕೊಳ್ಳ ಬೇಕೆಂದು ರಾಜ್‌ಕುಮಾರ್‌ ಬಯಸಿದ್ದರು. ಹಾಗಾಗಿ ಅದರ ಯಾವುದೇ ದುರಸ್ತಿ ಕೆಲಸಕ್ಕೂ ಮನೆಯವರು ಕೈ ಹಾಕಿರಲಿಲ್ಲ.

ಕಳೆದ ತಿಂಗಳ ಸುರಿದ ಮಳೆಯಿಂದ ನಾಡ ಹೆಂಚಿನ ಮನೆಯೊಳಗೆ ನೀರು ತುಂಬಿಕೊಂಡಿತ್ತು. ಗೋಡೆಗಳು ಮುಕ್ಕಾಗಿ ದ್ದವು. ಹೀಗಾಗಿ ಈಗ ದುರಸ್ತಿ ಮಾಡಲಾಗುತ್ತಿದೆ ಎಂದು ರಾಜ್‌ ಸೋದರಳಿಯ ಗೋಪಾಲ್‌ ಉದಯವಾಣಿಗೆ ತಿಳಿಸಿದ್ದಾರೆ. ನಾಡಹೆಂಚನ್ನು ಹೊದಿಸಿದ್ದ ಬಿದಿರಿನ ಗಳಗಳು ಹಳೆಯದಾಗಿದ್ದವು. ಹೊಸದಾಗಿ ಗಳ ಹಾಕಲು ಬಿದಿರು ತರುವಂತಿಲ್ಲ. ಹಾಗಾಗಿ ಪಕ್ಕದಲ್ಲೇ ಇದ್ದ ಇನ್ನೊಂದು ಬೇರೆ ಮನೆಯ ಗಳಗಳನ್ನು ಇದರ ಜೊತೆ ಸೇರಿಸಿ ಗಳಗಳನ್ನು ಕಟ್ಟಲಾಯಿತು.

ಅದರ ಮೇಲೆ ನಾಡಹೆಂಚನ್ನು ಹೊದಿಸಲಾಗಿದೆ. ಮುಂದಿನ ಅಂಚಿಗೆ ಮಾತ್ರ ಮಂಗಳೂರು ಹೆಂಚು ಹಾಕಲಾ ಗಿದೆ. ಮಣ್ಣಿನ ಗೋಡೆಗಳನ್ನು ಮಣ್ಣಿನಿಂದಲೇ ಮುಕ್ಕು ಒರೆಸಿ ಸರಿಮಾಡಿಸಲಾಗುತ್ತಿದೆ. ಹೊರಾವರಣರಕ್ಕೆ ಕಾಂಪೌಂಡ್‌ ಮಾಡಲಾಗು ವುದು ಎಂದು ಗೋಪಾಲ್‌ ತಿಳಿಸಿದರು. ರಿಪೇರಿ ಆದ ಬಳಿಕ ಮನೆಯೊಳಗೆ ರಾಜ್‌ಕುಮಾರ್‌ ಮತ್ತು ಕುಟುಂದವರ ಕೆಲವು ಫೋಟೋಗಳನ್ನು ಹಾಕುವ ಉದ್ದೇಶವಿದೆ ಎಂದರು.

“ನಾನು ಇದೇ ಮನೆಯಲ್ಲಿ ಜನಿಸಿದ್ದು, ಈ ಮನೆ ನಮ್ಮ ಅಜ್ಜಿ (ರಾಜಕುಮಾರ್‌ ಅವರ ತಾಯಿ) ಅವರ ತಂದೆಯದು. ತಾತ (ಸಿಂಗಾನಲ್ಲೂರು ಪುಟ್ಯು) ನವರು ಸಿಂಗಾನಲ್ಲೂರಿನಿಂದ ಬಂದ ಬಳಿಕ ಇಲ್ಲೇ ಇದ್ದರು. ಅವರ ಮಕ್ಕಳು, ಮೊಮ್ಮಕ್ಕಳಾದ ನಾವೆಲ್ಲರೂ ಅದೇ ಮನೆಯಲ್ಲಿದ್ದೆವು. ಮನೆಯೊಳಗೆ ಜಾಗ ಸಾಲದ ಕಾರಣ, ಹೊರಗೆ ಜಗುಲಿಯ ಮೇಲೆ ಮಲಗುತ್ತಿದ್ದೆವು.” ಗೋಪಾಲ್‌, ಡಾ.ರಾಜಕುಮಾರ್‌ ಸೋದರಳಿಯ.

  •  – ಕೆ.ಎಸ್‌. ಬನಶಂಕರ ಆರಾಧ
Advertisement

Udayavani is now on Telegram. Click here to join our channel and stay updated with the latest news.

Next