ನಮ್ಮ ಪೂರ್ವಜರ ಪ್ರತಿಯೊಂದು ನಂಬಿಕೆ, ಆಚರಣೆಯ ಹಿಂದೆ ವಾಸ್ತವ ಸತ್ಯದ ಜತೆಗೆ ವೈಜ್ಞಾನಿಕ ಕಾರಣವಿದೆ ಎಂದು ನಂಬಲಾಗಿದೆ. ಆದರೆ ಬೇಸರದ ಸಂಗತಿ ಎಂದರೆ ನಾವು ಅದನ್ನು ಸರಿಯಾಗಿ ಗ್ರಹಿಸದೆ ಇರುವುದು. ಅಂತಹ ವಿಷಯಗಳಲ್ಲಿ ಒಂದು ಗೆಜ್ಜೆಕತ್ತಿ. ಗೆಜ್ಜೆಕತ್ತಿ ಸುಮಾರು ಮೂರೂವರೆ ಇಂಚು ಉದ್ದವಿರುವ ಸಣ್ಣಗಾತ್ರದ ಕತ್ತಿಯಾಗಿದ್ದು, ಅರ್ಧಚಂದ್ರಾಕೃತಿಯಲ್ಲಿದೆ. ಅದರ ಹಿಡಿಯಲ್ಲಿ ಗೆಜ್ಜೆಗಳು ಇರುವ ಕಾರಣ ಗೆಜ್ಜೆಕತ್ತಿ ಎಂಬ ಹೆಸರು ಬಂದಿದೆ. ಪರಂಪರಾನುಸಾರವಾಗಿ ನಡೆಯುವ ಕೆಲವು ಮದುವೆಯಲ್ಲಿ ಮದುಮಗಳ ಕೈಯಲ್ಲಿ, ಗರ್ಭಿಣಿ ಮಹಿಳೆಯರ, ಬಾಣಂತಿಯರ ಕೈಯಲ್ಲಿ, ಮಗು ಮಲಗಿಸುವ ತೊಟ್ಟಿಲಿನಲ್ಲಿ ಬಟ್ಟೆಯ ಕೆಳಗಡೆ ಒಂದು ಸಣ್ಣಗಾತ್ರದ ಕತ್ತಿಯನ್ನು ಗಮನಿಸಬಹುದು ಅದುವೇ ಗೆಜ್ಜೆಕತ್ತಿ. ಈ ಕತ್ತಿಗೆ ಆಡುಬಾಷೆಯಲ್ಲಿ ಗೆಜ್ಜೆತ್ತಿ ಎಂದು ಹೇಳುವರು.
ಪರಂಪರೆಯಲ್ಲಿ ಗೆಜ್ಜೆತ್ತಿ :
ಪರಂಪರೆಯಲ್ಲಿ ಗೆಜ್ಜೆಕತ್ತಿಯು ಪ್ರಮುಖ ಪ್ರಾಧಾನ್ಯತೆಯನ್ನು ಪಡೆದಿದ್ದು, ಆರಾಧನ ಕ್ಷೇತ್ರದಲ್ಲೂ ಗೆಜ್ಜೆಕತ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕರ್ನಾಟಕದ ಕರಾವಳಿ ಭಾಗದ (ತುಳುನಾಡಿನ) ದೈವಾರಾಧನೆಯಲ್ಲಿ ಗೆಜ್ಜೆಕತ್ತಿಯ ಮಹತ್ವವನ್ನು ಕಾಣಬಹುದು. ತುಳುನಾಡಿನ ಜನತೆ ನಂಬಿಕೊಂಡು ಬಂದಿರುವ ಶಕ್ತಿಗಳ ಇತಿಹಾಸದಲ್ಲಿ ಈ ಕತ್ತಿಯ ಉಲ್ಲೇಖವಿದೆ. ಉದಾಹರಣೆಗೆ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ, ಮಾಯಂದಲೆ, ತನ್ನಿಮಾನಿಗ ಇವರೆಲ್ಲರ ಕತೆ ಗೆಜ್ಜೆಕತ್ತಿಯ ಮಹತ್ವವನ್ನು ಸಾರುತ್ತದೆ. ತುಂಬಿದ ಗರ್ಭಿಣಿ ದೇಯಿ ಬೈದೆತಿ ಊರಿನ (ಪೆರುಮಲೆ) ಬಲ್ಲಾಳರ ಕಾಲಿಗೆ ಆಗಿದ್ದ ಗಾಯಕ್ಕೆ ಔಷಧ ಕೊಡಲೆಂದು ಹೊರಟಾಗ ಆಕೆಯ ರಕ್ಷಣೆಗಾಗಿ ಅವಳ ಅತ್ತಿಗೆ ಗೆಜ್ಜೆತ್ತಿ ನೀಡಿ ಕಳುಹಿಸುವ ಸಂಗತಿಯನ್ನು ಕಥೆಯಲ್ಲಿ ಕಾಣಬಹುದು. ತನ್ನಿಮಾನಿಗನ ಕಥೆಯಲ್ಲಿ ಬಬ್ಬುಸ್ವಾಮಿ ಬಾವಿಯಲ್ಲಿ ಬಂಧಿಯಾಗಿದ್ದ ಸಂದರ್ಭದಲ್ಲಿ ತನ್ನಿಮಾನಿಗ ತನ್ನ ಕೈಯಲ್ಲಿದ್ದ ಗೆಜ್ಜೆಕತ್ತಿಯಿಂದ ಬಾವಿಗೆ ಮುಚ್ಚಿದ್ದ ಕಲ್ಲನ್ನು ಗೀರಿ ಬಬ್ಬುವನ್ನು ಬಾವಿಯಿಂದ ಹೊರಗೆ ಬರುವಂತೆ ಮಾಡಿದರು. ಇಲ್ಲಿ ಗೆಜ್ಜೆತ್ತಿಗಿದ್ದ ದೈವಿಕ ಶಕ್ತಿಯನ್ನು ಗಮನಿಸಬಹುದು. ಆದ್ದರಿಂದ ಇವತ್ತಿಗೂ ಈ ದೈವ ಶಕ್ತಿಗಳಿಗೆ ನಡೆಯುವ ನೇಮದ (ಕೋಲ, ಜಾತ್ರೆ) ಸಂದರ್ಭದಲ್ಲಿ ಗೆಜ್ಜೆಕತ್ತಿಯನ್ನು ಹಿಡಿಯುವ ಸಂಪ್ರದಾಯವಿದೆ.
ಹೆಣ್ಣಿನ ರಕ್ಷಣ ಸಾಧನವಾಗಿ ಗೆಜ್ಜೆತ್ತಿ :
ಹಿಂದಿನ ಕಾಲದಲ್ಲಿ ಗೆಜ್ಜೆಕತ್ತಿ ಹೆಣ್ಣಿನ ರಕ್ಷಣೆಯ ಸಂಕೇತವಾಗಿತ್ತು. ಇವತ್ತಿನ ದಿನಗಳಲ್ಲಿ ಹೆಣ್ಣು ತನ್ನ ರಕ್ಷಣೆಗಾಗಿ ಕರಾಟೆ ಕಲಿಯಬೇಕು, ಪೆಪ್ಪರ್ ಸ್ಪ್ರೇ ಹಿಡಿದುಕೊಳ್ಳಬೇಕು ಎಂದೆಲ್ಲ ಯೋಚನೆ ಮಾಡುತ್ತಿದ್ದಾರೆ. ಆದರೆ ಹೆಣ್ಣಿನ ರಕ್ಷಣೆಯ ಬಗ್ಗೆ ಬಹಳ ಹಿಂದೆಯೇ ನಮ್ಮ ಹಿರಿಯರು ಯೋಚನೆ ಮಾಡಿದ್ದರು ಎಂಬುದಕ್ಕೆ ಒಂದು ಸಾಕ್ಷಿಯಂತಿರುವುದು ಗೆಜ್ಜೆಕತ್ತಿ. ಆ ಕಾಲದಲ್ಲಿ ಹೆಣ್ಣಿನ ರಕ್ಷಣೆಯ ಬಗ್ಗೆ ನಮ್ಮ ಹಿರಿಯರು ಕಾಳಜಿ ವಹಿಸಿದ್ದರು ಎಂಬುದನ್ನು ಈ ಮೂಲಕ ತಿಳಿಯಬಹುದಾಗಿದೆ. ಹುಡುಗಿ ಋತುಮತಿಯಾದ ಅನಂತರ ಆಕೆಗೆ ತನ್ನ ಮಾನ ಪ್ರಾಣ ರಕ್ಷಣೆಯ ಸಲುವಾಗಿ ತಾಯಿ ಗೆಜ್ಜೆಕತ್ತಿ ನೀಡುವ ಸಂಪ್ರದಾಯವಿತ್ತು. ಹಾಗಾಗಿ ಅಂದಿನ ಕಾಲದಲ್ಲಿ ಪ್ರತಿಯೊಂದು ಹೆಣ್ಣಿನ ಕೈಯಲ್ಲಿ ಗೆಜ್ಜೆಕತ್ತಿಯಿತ್ತು. ಈ ಕತ್ತಿಯನ್ನು ಅವರು ತಮ್ಮ ರಕ್ಷಣೆಗಾಗಿ ಬಳಸುತ್ತಿದ್ದರು.
ಅಧಿಕಾರ ಹಸ್ತಾಂತರ ಸಂಕೇತವಾಗಿ ಗೆಜ್ಜೆತ್ತಿ :
ಒಂದೆಡೆ ಗೆಜ್ಜೆಕತ್ತಿಯು ಹೆಣ್ಣಿನ ಮಾನ, ಪ್ರಾಣ ರಕ್ಷಣೆಯ ವಿಚಾರದಲ್ಲಿ ಕಂಡುಬಂದರೆ ಇದರ ಜತೆಗೆ ಈ ಕತ್ತಿಯನ್ನು ಆಸ್ತಿ-ಅಧಿಕಾರ ಹಸ್ತಾಂತರದ ಸಂಕೇತವಾಗಿಯೂ ಕಾಣಬಹುದು. ತುಳುನಾಡಿನ ಮಾತೃಪ್ರಧಾನ (ಅಳಿಯಕಟ್ಟು) ಸಂಪ್ರದಾಯದಲ್ಲಿ ಹೆಣ್ಣಿಗೆ ಅಧಿಕಾರ ಹೆಚ್ಚು. ಹೀಗೆ ಇಲ್ಲಿ ಹಿಂದಿನ ಕಾಲದಲ್ಲಿ ತಾಯಿ ತನ್ನ ಮಗಳ ಮದುವೆಯ ಅನಂತರ ಆಕೆಗೆ ಗೆಜ್ಜೆಕತ್ತಿ ನೀಡುವ ಮೂಲಕ ತನ್ನ ಆಸ್ತಿ, ಅಧಿಕಾರವನ್ನು ಹಸ್ತಾಂತರಿಸುತ್ತಿದ್ದರು. ಅಂದಿನ ಕಾಲದಲ್ಲಿ ಹೆಣ್ಣಿಗೆ ಆಸ್ತಿಯ, ಅಧಿಕಾರದ ಅಥವಾ ಮನೆಯ ಆಡಳಿತದಲ್ಲಿ ಅವಕಾಶ ಇತ್ತು ಎನ್ನುವ ವಿಚಾರವನ್ನೂ ಇಲ್ಲಿ ಗಮನಿಸಬಹುದು. ಹಿಂದಿನ ಕಾಲದಲ್ಲಿ ಕೈಯಲ್ಲಿರುತ್ತಿದ್ದ ಗೆಜ್ಜೆಕತ್ತಿ ಹೆಣ್ಣಿಗೆ ಮಾನಸಿಕವಾಗಿ ಧೈರ್ಯ ತುಂಬುವ ಜತೆಗೆ ಅದರಲ್ಲಿ ಬಳಕೆಯಾಗುತ್ತಿದ್ದ ಲೋಹಗಳಿಂದಾಗಿ ಕತ್ತಿಯನ್ನು ಕೈಯಲ್ಲಿ ಹಿಡಿದ ತತ್‌ಕ್ಷಣ ದೇಹದ ನರಗಳಿಗೆ ಸಂಪರ್ಕ ಕಲ್ಪಿಸಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತಿತ್ತು.
ಹೀಗೆ ಹೆಣ್ಣಿನ ಮಾನ, ಪ್ರಾಣ ರಕ್ಷಣೆಗಾಗಿ ಗರ್ಭಿಣಿ, ಬಾಣಂತಿ ತಾಯಿ ಹೊರಗೆ ತೆರಳುವಾಗ ಕೆಟ್ಟ ಗಾಳಿ ಸೋಕದಿರಲಿ ಎಂದು ಅವರ ಕೈಯಲ್ಲಿ ಹಾಗೂ ಹುಟ್ಟಿದ ಮಗುವಿನ ಆರೋಗ್ಯದ ದೃಷ್ಟಿಯಲ್ಲಿ ಹಾಗೂ ಆಸ್ತಿ, ಅಧಿಕಾರದ ಸಂಕೇತವಾಗಿ ಗೆಜ್ಜೆಕತ್ತಿ ಬಳಕೆಯಲ್ಲಿತ್ತು. ಇವತ್ತು ಗೆಜ್ಜೆಕತ್ತಿಯ ಸ್ಥಾನದಲ್ಲಿ ಹೆಣ್ಣಿನ ರಕ್ಷಣೆಗಾಗಿ ಹಲವಾರು ಇನ್ನಿತರ ವಸ್ತುಗಳು ಹಾಗೂ ಆಚಾರಗಳು ಅಸ್ತಿತ್ವಕ್ಕೆ ಬಂದಿದ್ದು, ಅದು ಇಂದಿನ ಸಮಾಜದಲ್ಲಿ ಹೆಣ್ಣಿನ ರಕ್ಷಣೆಯ ಕುರಿತಾದ ಒಳ್ಳೆಯ ವಿಚಾರಗಳಾಗಿವೆ. ಆದರೆ ನಮ್ಮ ಹಿರಿಯರು ಗೆಜ್ಜೆಕತ್ತಿಯ ಮೇಲೆ ಅಥವಾ ಇನ್ನಿತರ ಆಚರಣೆ, ಸಂಪ್ರದಾಯಗಳ ಮೇಲಿನ ಇಟ್ಟಿರುವ ಮೂಲನಂಬಿಕೆ ಮೂಢನಂಬಿಕೆಯಾಗದಿರಲಿ ಎಂಬುದೇ ಆಶಯ. ಈ ನಂಬಿಕೆಗಳೇ ಮುಂದಿನ ಪೀಳಿಗೆಗೆ ದಾರಿದೀಪವೂ, ಮಾರ್ಗದರ್ಶಿಯೂ ಆಗಿರುತ್ತದೆ ಹಾಗೂ ಹಿಂದಿನ ಆಚರಣೆಗಳಿಗೆ ಗೌರವ ನೀಡಿದಾಗ ಮಾತ್ರ ನಮ್ಮ ಸಂಸ್ಕೃತಿ, ಪರಂಪರೆಯ ಮೇಲೆ ಅಭಿಮಾನವನ್ನು ಬೆಳೆಸಲು ಸಾಧ್ಯ.
ನಳಿನಿ ಎಸ್. ಸುವರ್ಣ, ಮುಂಡ್ಲಿ
ಆಳ್ವಾಸ್ ಕಾಲೇಜು ಮೂಡುಬಿದಿರೆ