ಗಜೇಂದ್ರಗಡ: ಯುವಕರಲ್ಲಿ ರಾಷ್ಟ್ರಾಭಿಮಾನ, ಸೇನೆಯ ಮಹತ್ವ ಸಾರುವ ನಿಟ್ಟಿನಲ್ಲಿ ದೆಹಲಿ ಇಂಡಿಯಾ ಗೇಟ್‌ನಲ್ಲಿರುವ “ಅಮರ್ ಜವಾನ್’ ಸ್ಮಾರಕ ಮಾದರಿಯಲ್ಲಿಯೇ ಮಾಜಿ ಸೈನಿಕರ ಪರಿಶ್ರಮದಿಂದ ಪಟ್ಟಣದ ಸೈನಿಕ ನಗರದಲ್ಲಿ “ಅಮರ್ ಜವಾನ್’ ಸ್ಮಾರಕ ತಲೆ ಎತ್ತಿದೆ.
ಪಟ್ಟಣ ದೇಶಕ್ಕಾಗಿ ಹೋರಾಡಿದ ಹಲವಾರು ಸೈನಿಕರ ತವರೂರಾಗಿದೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಲ್ಲಿಯ ಹೋರಾಟಗಾರರ ಕೊಡುಗೆ ಅನನ್ಯವಾಗಿದೆ. ಇಂತಹ ಪವಿತ್ರ-ಪುಣ್ಯ ನೆಲದಲ್ಲಿ ಸೈನಿಕರ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಪಟ್ಟಣದ ಸೈನಿಕ ನಗರದ 21 ಗುಂಟೆ ಜಮೀನಿನಲ್ಲಿ ಉದ್ಯಾನವನ ನಿರ್ಮಿಸಲಾಗಿದ್ದು, ಇಲ್ಲಿ “ಅಮರ್ ಜವಾನ್’ ಸ್ಮಾರಕ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಸರ್ಕಾರದಿಂದ ನಯಾಪೈಸೆ ಇಲ್ಲ: ಯುವಕರಿಗೆ ರಾಷ್ಟ್ರಾಭಿಮಾನ ತುಂಬುವ ನಿಟ್ಟಿನಲ್ಲಿ ಗಜೇಂದ್ರಗಡದ ಮಾಜಿ ಸೈನಿಕರು ಸರ್ಕಾರದಿಂದ ನಯಾಪೈಸೆ ಅನುದಾನ ಪಡೆಯದೇ ಸ್ವಂತ ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ಅಮರ್ ಜವಾನ್ ಸ್ಮಾರಕ ನಿರ್ಮಿಸಿದ್ದಾರೆ.
ಯುವಕರಿಗೆ ಸ್ಫೂರ್ತಿ: ಮಾಜಿ ಸೈನಿಕರು ಸೇರಿ ಸಂಘ ಸ್ಥಾಪಿಸುವುದರೊಂದಿಗೆ “ಅಮರ್ ಜವಾನ್’ ಸ್ಮಾರಕವನ್ನೂ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು, ಯುವಕರಲ್ಲಿ ಸೈನಿಕರ ಬಗ್ಗೆ ಗೌರವ ಹೆಚ್ಚಿಸಲು, ಸೈನ್ಯಕ್ಕೆ ಸೇರುವಂತೆ ಸ್ಫೂರ್ತಿ ನೀಡುವ ಸಲುವಾಗಿ “ಅಮರ್ ಜವಾನ್; ನಿರ್ಮಿಸಲಾಗಿದೆ ಎನ್ನುತ್ತಾರೆ ಮಾಜಿ ಸೈನಿಕರು.
ಆಕರ್ಷಕ ಉದ್ಯಾನವನ: ಉದ್ಯಾನದ ಪ್ರವೇಶದ್ವಾರದ ಎಡಭಾಗದ ಬಳಿ ಸ್ಮಾರಕ ಕೆಲಸ ಈಗಾಗಲೇ ಪೂರ್ಣಗೊಂಡಿದ್ದು, ದೆಹಲಿ ಇಂಡಿಯಾ ಗೇಟ್‌ನಲ್ಲಿರುವ ಮಾದರಿಯಲ್ಲಿದೆ. ಗ್ರಾನೈಟ್ ಬಳಸಿ ವಿಜಯಸ್ತಂಭ ನಿರ್ಮಿಸಲಾಗಿದೆ. ಸುತ್ತಲೂ ಹುಲ್ಲಿನ ಹಾಸಿಗೆ ಇದ್ದು, ವಿವಿಧ ತಳಿಯ ಹೂ ಬಳ್ಳಿಗಳು ಆಕರ್ಷಿಸುತ್ತಿವೆ.
ವೀರ ಯೋಧರಿಗೆ ಗೌರವ ಸಮರ್ಪಿಸುವ ಸ್ಮಾರಕ ನಗರದಲ್ಲಿ ಇರಲಿಲ್ಲ. ವಿಶೇಷ ಸಂದರ್ಭಗಳಲ್ಲಿ ಗೌರವ ಸಮರ್ಪಿಸಲು ಸ್ಮಾರಕ ಲೋಕಾರ್ಪಣೆ ಮಾಡುತ್ತಿರುವುದು ಸಂತಸವಾಗಿದೆ ಎನ್ನುತ್ತಾರೆ ನಿವೃತ್ತ ಸೈನಿಕರು.
ಯುವಕರಲ್ಲಿ ವೀರಯೋಧರ ಶೌರ್ಯ, ಸಾಹಸ, ದೇಶಾಭಿಮಾನ ಮೂಡಿಸುವ ಕಾರ್ಯವಾಗಬೇಕು ಎನ್ನುವ ಉದ್ದೇಶದಿಂದ ಮಾಜಿ ಸೈನಿಕರೆಲ್ಲರ ಆರ್ಥಿಕ ಸಹಕಾರದಿಂದ “ಅಮರ್ ಜವಾನ್’ ನಿರ್ಮಿಸಲಾಗಿದೆ.
-ಕುಮಾರೇಶ ಗಡಾದ, ಮಾಜಿ ಸೈನಿಕರ ಸಂಘ ಅಧ್ಯಕ್ಷ