Advertisement
ಯಕ್ಷಗುರು ರಾಕೇಶ್ ರೈ ಅಡ್ಕರವರ ನೇತೃತ್ವದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇದರ ಯಕ್ಷಾಂಬುಧಿ ಉಡುಪಿ ಹವ್ಯಾಸಿ ತೆಂಕುತಿಟ್ಟು ಯಕ್ಷಗಾನ ಬಳಗದಿಂದ ದುಬಾಯಿಯಲ್ಲಿ ಗಜೇಂದ್ರ ಮೋಕ್ಷ ಎಂಬ ತೆಂಕುತಿಟ್ಟು ಯಕ್ಷಗಾನ ಕಥಾನಕವನ್ನು ಜ.24ರಂದು ಆಡಿ ತೋರಿಸಲಾಯಿತು.
Related Articles
Advertisement
ಗಂಧರ್ವನಾಗಿ ಪ್ರವೇಶಿಸಿದ ಕು| ವಿಂಧ್ಯಾ ಆಚಾರ್ಯ ಸೊಗಸಾಗಿ ಪಾತ್ರ ನಿರ್ವ ಹಿಸಿದರು. ಸುಂದರ ಮುಖವರ್ಣಿಕೆಗೆ ಪೂರಕವಾಗಿದ್ದ ಮುಖಾಭಿನಯ, ಏರಿಳಿತ ಸಹಿತವಾದ ಸ್ಪಷ್ಟ ಮಾತುಗಾರಿಕೆ, ವೈವಿಧ್ಯತೆಯಿಂದ ತುಂಬಿದ್ದ ಯಕ್ಷನೃತ್ಯ, ವನಸಂಚಾರ ಹಾಗೂ ಜಲಕ್ರೀಡೆ ನಯನ ಮನೋಹರವಾಗಿತ್ತು. ಪೂರಕವಾಗಿ ಸ್ಪಂದಿಸಿದ ಕು| ವನ್ಯಶ್ರೀಯವರ (ಗಂಧರ್ವ ಪತ್ನಿ) ನಾಟ್ಯ, ಒನಪು ವಯ್ನಾರ, ಬಳುಕುಗಳಿಂದ ತುಂಬಿತ್ತು. ಕ್ರೋಧದಿಂದ ಶಪಿಸುವ ಮುನಿಗಳಾಗಿ ರೌದ್ರ ರಸವನ್ನು ಸಮರ್ಥವಾಗಿ ನಿರ್ವಹಿಸಿದ ರವಿನಂದನ ಭಟ್(ಅಗಸ್ತ್ಯ ಮುನಿ) ಹಾಗೂ ಶರತ್ ಶೆಟ್ಟಿ (ದೇವಳ ಮುನಿ) ಪೋಷಕ ಪಾತ್ರಗಳಿಗೆ ಜೀವ ತುಂಬಿದರು.
ಗಜೇಂದ್ರನಾಗಿ ಡಾ| ಸುನೀಲ್ ಸಿ. ಮುಂಡ್ಕೂರ್‌ರವರು ಮದಗಜದ ಸ್ಪಷ್ಟ ಚಿತ್ರಣ ನೀಡುವಲ್ಲಿ ಸಫಲರಾದರು. ಗತ್ತಿನ ಲಯಬದ್ಧ ಹೆಜ್ಜೆಗಾರಿಕೆ, ಶ್ರುತಿಬದ್ಧವಾದ ಮಾತುಗಾರಿಕೆ, ಹಿತಮಿತವಾದ ಅಭಿನಯ, ಅಮೋಘ ಮುಖವರ್ಣಿಕೆ ಹಾಗೂ ಪಾತ್ರೋಚಿತವಾದ ಶರೀರ ಗಜೇಂದ್ರನ ಪಾತ್ರಕ್ಕೆ ಜೀವ ತುಂಬಿತು. ಅದಕ್ಕೆ ಪೂರಕವಾಗಿ ಮಕರನಾಗಿ ಸಂದೀಪ್ ಶೆಟ್ಟಿಗಾರ್ ಸುಂದರ ಮುಖವರ್ಣಿಕೆ, ಪರಿಣಾಮಕಾರಿ ಅಭಿನಯ, ನೇರವಾದ ನುಡಿಗಳು ಹಾಗೂ ಸಮರ್ಪಕ ರಂಗ ನಡೆಯಿಂದ ತಾನು ಯಾವುದೇ ವೃತ್ತಿ ಕಲಾವಿದನಿಗೆ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟರು. ಮಹಾವಿಷ್ಣು (ಮಿಲನ್) ತನ್ನ ಅಮೋಘ ಗಿರಕಿಗಳಿಂದ ರಂಜಿಸಿದರು.
ಒಟ್ಟಿನಲ್ಲಿ ಪರಂಪರೆಯ ಚೌಕಟ್ಟಿಗೆ ಮೀರದಂತೆ, ನವರಸಗಳನ್ನು ಪ್ರದರ್ಶಿಸಿ, ನೃತ್ಯ ವೈವಿಧ್ಯ, ಪಾತ್ರ ವೈವಿಧ್ಯ, ಅಭಿನಯ ಪ್ರಾವೀಣ್ಯ, ಮಾತುಗಾರಿಕೆ, ಹೆಜ್ಜೆಗಾರಿಕೆಯಿಂದ ಪ್ರೇಕ್ಷಕರನ್ನು ಮೂರು ತಾಸುಗಳ ಕಾಲ ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಯಿತು.