Advertisement
ಹೌದು, ಶಿವಮೊಗ್ಗ ನಗರ ಸಮೀಪದ ಗಾಜನೂರಿನ ಅಗ್ರಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದು ನೋಡಿ. ಉಳಿದೆಲ್ಲ ಶಾಲೆಯಂತಲ್ಲ ಇದು. ಈ ಊರಿನವರು ಅನುಷ್ಠಾನಕ್ಕೆ ತಂದಿರುವ ಅನೇಕ ಯೋಜನೆಗಳು ಮಾದರಿಯಾಗಿವೆ.
Related Articles
Advertisement
ಶಾಲೆ ಸೇರಿದ ವಿದ್ಯಾರ್ಥಿಗಳಿಗೆ ಬಾಂಡ್ ಕೊಡುವ ಐಡಿಯಾ ಶುರುಮಾಡಿದ್ದು ಸೋಮಲಿಂಗಪ್ಪ ಎನ್ನುವ ಶಿಕ್ಷಕರು. ಇದು ಸರಕಾರದ ಅನುದಾನದಿಂದ ಶುರುವಾದ ಯೋಜನೆಯಲ್ಲ. ಬದಲಾಗಿ ದಾನಿಗಳ ನೆರವಿನಿಂದ ಶುರುವಾದದ್ದು.
ಈ ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ ಕಲಿಸಲು ಅವಕಾಶವಿದೆ. ಇದುವರೆಗೂ ಶೇ.70 ರಷ್ಟು ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಖಾಸಗಿ ಶಾಲೆಗಳ ಆಕರ್ಷಣೆಗೆ ಬಿದ್ದ ಪೋಷಕರು ಆ ಕಡೆ ಮುಖ ಮಾಡಿದ್ದರಿಂದ ದಾಖಲಾತಿ ಕಡೆಮೆಯಾಗುವ ಸ್ಥಿತಿ ತಲುಪಿತ್ತು. ಇದನ್ನು ಮನಗಂಡ ಶಿಕ್ಷಕರು ಇಂತಹದೊಂದು ಯೋಜನೆ ರೂಪಿಸಿದರು. ಪ್ರಸ್ತುತ ಈ ಶಾಲೆಯಲ್ಲಿ 84 ಮಕ್ಕಳು ಹಾಗೂ ಐವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಯೋಜನೆಯನ್ವಯ ಶಾಲೆಯ ಯಾವುದೇ ತರಗತಿಗೆ ಹೊಸದಾಗಿ ದಾಖಲಾಗುವ ಮಗುವಿಗೆ 500 ರೂ ಮೊತ್ತದ ಬಾಂಡ್ ನೀಡಲಾಗುತ್ತಿದೆ. ಈ ಮೊತ್ತವನ್ನು ಎರಡು ವರ್ಷದ ಅವಧಿಗೆ ಶಾಲೆಗೆ ಸಮೀಪದ ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ ಮಗುವಿನ ಹೆಸರಿನಲ್ಲಿಯೇ ಠೇವಣಿ ಇಡುತ್ತಾರೆ. ನಂತರ ಆ ಮೊತ್ತವನ್ನು ಬಡ್ಡಿ ಸಮೇತ ಮಗು ಪಡೆದುಕೊಳ್ಳಲಿದೆ.
ಹೊಸ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಶಾಲೆಯ ಮುಖ್ಯಸ್ಥೆé ಗಿರಿಜಮ್ಮ, ಇತರ ಮೂವರು ಶಿಕ್ಷಕರು ಹಾಗೂ ಶಾಲಾಭಿವೃದ್ದಿ ಸಮಿತಿ ಜೊತೆ ಶಿಕ್ಷಕ ಸೋಮಲಿಂಗಪ್ಪ ಚರ್ಚಿಸಿದ್ದರು. ಇದಕ್ಕೆ ಎಸ್.ಡಿ.ಎಂ. ಸಿ ಪೂರಕವಾಗಿ ಸ್ಪಂದಿಸಿತು. ನಂತರ ದಾನಿಗಳ ನೆರವು ಪಡೆಯಲು ಗ್ರಾಮದಲ್ಲಿ ಕರಪತ್ರದ ಮೂಲಕ ಪ್ರಚಾರ ಮಾಡಿದಾಗ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು ಎನ್ನುತ್ತಾರೆ ಶಿಕ್ಷಕ ಸೋಮಲಿಂಗಪ್ಪ. ವಿಷಯ ತಿಳಿದು ಸುಮಾರು 15 ಲಕ್ಷ ಕ್ಕೂ ಅಧಿಕ ಮೊತ್ತ ನೀಡಲು ದಾನಿಗಳು ಮುಂದೆ ಬಂದಿದ್ದಾರೆ. ಇದರಲ್ಲಿ ಸ್ಥಳೀಯ ಗ್ರಾಪಂ ಸದಸ್ಯರಾಗಿರುವ ಬಿ.ಎಸ್ ನಾಗರಾಜ ಎಂಬುವವರೇ ಶಾಲೆಯ ವಿವಿಧ ಚಟುವಟಿಕೆಗಳಿಗೆ 1 ಲಕ್ಷ ರೂಗಳಷ್ಟು ಸಹಾಯ ನೀಡಿದ್ದಾರಂತೆ. ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರು ಹಾಗೂ ಗಾರೆ ಕೆಲಸಗಾರರು ಇದ್ದಾರೆ. ಜೊತೆಗೆ ಎಲ್ಲರೂ ಶಿಕ್ಷಣ ವಂಚಿತರೇ. ಹೀಗಿದ್ದರೂ ಈಗ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡಲು ಅವರೆಲ್ಲಾ ದಾನಿಗಳಾಗಲು ನಿರ್ಧರಿಸಿದ್ದಾರೆ.
500 ರೂ. ಬಾಂಡ್ ಜೊತೆಗೆ ಎಲ್ಲ ವಿದ್ಯಾರ್ಥಿಗಳಿಗೆ ಒಂದು ವರ್ಷದ ಉಚಿತ ನೊಟ್ ಪುಸ್ತಕ, ಪೆನ್, ಎರೇಸರ್‌ಗಳನ್ನು ನೀಡಲಾಗುತ್ತಿದೆ. ಇದನ್ನು ಒದಗಿಸಲು ಸ್ಥಳೀಯ ತುಂಗಾ ಪರಿಸರ ಅಭಿವೃದ್ದಿ ಸಮಿತಿ ಮುಂದೆ ಬಂದಿದೆ.
ನ್ಪೋಕನ್ ಇಂಗ್ಲೀಷ್ಸರ್ಕಾರಿ ಶಾಲೆಯ ಮಕ್ಕಳಿಗೂ ಇಂಗ್ಲೀಷ್ ಕಲಿಸುವ ನಿಟ್ಟಿನಲ್ಲಿ ಗಾಡಿಕೊಪ್ಪದಲ್ಲಿರುವ ಸೇಂಟ್ ಜೋಸೆಫ್ ಅಕ್ಷರ ಧಾಮಶಾಲೆಯ ಸಹಕಾರದೊಂದಿಗೆ ಗ್ರಾಮರ್ ಹಾಗೂ ನ್ಪೋಕನ್ ಇಂಗ್ಲೀಷ್ ತರಗತಿಗಳು ನಡೆಯುತ್ತಿವೆ. ಪ್ರತಿ ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಈ ಶಾಲೆಯ ಮಕ್ಕಳಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಉತ್ತಮ ಶಿಕ್ಷಣ ನೀಡುವುದರೊಂದಿಗೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಚಿಣ್ಣರ ಚಿತ್ತಾರ ಎಂಬ ಮಾಸಪತ್ರಿಕೆಯು ಶಿಕ್ಷಕ ಸೋಮಲಿಂಗಪ್ಪನವರ ಸಂಪಾದಕತ್ವದಲ್ಲಿ ಹೊರಬರುತ್ತಿದೆ. ಇಲ್ಲಿ ಮಕ್ಕಳು ಕಥೆ, ಕವನ, ಚಿತ್ರಕಲೆಗಳನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ತಿಂಗಳು 500 ಪತ್ರಿಕೆಗಳನ್ನು ಮುದ್ರಿಸಿ ಗ್ರಾಮದ ಮನೆಮನೆಗಳಿಗೆ ತಲುಪಿಸಲಾಗುತ್ತಿದೆ. ಈ ಪತ್ರಿಕೆಯ ಮುದ್ರಣದ ಖರ್ಚನ್ನು ಗ್ರಾಮದ ಡಾ. ಕಿರಣ ಭರಿಸುತ್ತಿದ್ದಾರೆ. ಹೀಗೆ ಸರ್ಕಾರಿ ಶಾಲೆ ಗ್ರಾಮಸ್ಥರಿಂದಲೇ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುತ್ತಿದೆ. ಗುರುರಾಜ.ಬ.ಕನ್ನೂರ