ಚೆನ್ನೈ: ಭಾರೀ ಭೀತಿ ಹುಟ್ಟಿಸಿದ್ದ “ಗಜ’ ಚಂಡಮಾರುತವು ಶುಕ್ರವಾರ ಮುಂಜಾನೆ ತಮಿಳುನಾಡು ಮತ್ತು ಪುದು ಚೇರಿಯ ಕರಾವಳಿಗೆ ಅಪ್ಪಳಿಸಲಿದೆ. ಹವಾಮಾನ ಇಲಾಖೆಯ ಪ್ರಕಾರ ಗಂಟೆಗೆ 90ರಿಂದ 100 ಕಿ.ಮೀ. ವೇಗದಲ್ಲಿ ಪಂಬನ್ ಮತ್ತು ಕಡಲೂರು ಮಧ್ಯದಲ್ಲಿ ಚಂಡಮಾರುತ ಅಪ್ಪಳಿಸಲಿದೆ. ಕರೈಕಲ್ ಸೇರಿದಂತೆ ನಾಗಪಟ್ಟಣ ಜಿಲ್ಲೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಭಾರೀ ಪ್ರಮಾ ಣದ ಮಳೆಯಾಗಿದೆ. ಅಲ್ಲದೆ 7 ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಎರಡೂ ರಾಜ್ಯ ಸರಕಾರಗಳೂ ಸರ್ವ ಸನ್ನದ್ಧ ವಾಗಿದ್ದು, ತಗ್ಗು ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರಗೊಳಿಸಲಾಗಿದೆ. 30,500 ಮಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಈಗಾಗಲೇ ವಿಶಾಖಪಟ್ಟಣಂನಿಂದ ನಾಗಪಟ್ಟಣಗೆ ಹೆಲಿಕಾಪ್ಟರ್ ಮೂಲಕ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಲಾಗಿದೆ. ಚೆನ್ನೈ, ಕಡಲೂರು ಮತ್ತು ನಾಗಪಟ್ಟಣ ಗಳಲ್ಲಿ ಹಡಗುಗಳನ್ನು ಸಜ್ಜಾಗಿರಿಸಲಾಗಿದೆ. ತಂಜಾವೂರು, ತಿರುವಾರೂರು, ಪುದು ಕೊಟ್ಟಾಯ್, ನಾಗಪಟ್ಟಣ, ಕಡಲೂರು ಮತ್ತು ರಾಮನಾಥಪುರಂ ಜಿಲ್ಲಾಧಿಕಾರಿ ಗಳು ಜಿಲ್ಲಾ ಸ್ಥಳಗಳಲ್ಲಿಯೇ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆಯ ನಿಗಾ ವಹಿಸಿದ್ದಾರೆ.
ಚಂಡಮಾರುತದ ಹಿನ್ನೆಲೆಯಲ್ಲಿ ಕೆಲವೆಡೆಗಳಲ್ಲಿ ಗುರುವಾರವೇ ಶಾಲಾ ಕಾಲೇಜು ಗಳಿಗೆ ರಜೆ ಘೋಷಿಸಲಾಗಿತ್ತು. ಶುಕ್ರವಾರವೂ ಈ ಏಳೂ ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ತಮಿಳುನಾಡಿನ ಕಂದಾಯ ಸಚಿವ ಜಯಕುಮಾರ್ ಅವರು ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದು, ಪರಿಹಾರ ಕೇಂದ್ರಗಳಿಗೆ ತೆರಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಈ ಮಧ್ಯೆ, ಮರೀನಾ ಸೇರಿದಂತೆ ತಮಿಳುನಾಡು ಮತ್ತು ಪುದುಚೇರಿಯ ಕಿನಾರೆಗಳಿಗೆ ಪ್ರವಾಸಿ ಗರಿಗೆ ಪ್ರವೇಶ ನಿರಾಕರಿಸಲಾಗಿದೆ.
ಅತ್ತ ಪುದುಚೇರಿಯಲ್ಲೂ ಚಂಡ ಮಾರುತ ವನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವತಃ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರೇ ಉಸ್ತುವಾರಿ ವಹಿಸಿದ್ದಾರೆ.