ಬೆಳ್ತಂಗಡಿ: ಇಂದಿನ ದಿನಗಳಲ್ಲಿ ಶಿಕ್ಷಣ ಪಡೆಯಲು ಸರಕಾರದಿಂದ ಸಾಕಷ್ಟು ಪ್ರೋತ್ಸಾಹ ಹಾಗೂ ಸೌಲಭ್ಯ ದೊರೆಯುತ್ತಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆಯಿದ್ದು, ಸರಕಾರ ಇದಕ್ಕೆ ನೆರವು ನೀಡುತ್ತಿದೆ. ಉತ್ತಮ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಲು ವ್ಯಕ್ತಿತ್ವ ವಿಕಸನಗಳಂತಹ ತರಬೇತಿ ಕಾರ್ಯಕ್ರಮಗಳು ಸಹಕಾರಿ ಎಂದು ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಹೇಳಿದರು.
ಅವರು ದ.ಕ. ಜಿಲ್ಲಾ ಮಲೆಕುಡಿಯ ಸಂಘದ ಪ್ರಧಾನ ಕಚೇರಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಶಿವಗಿರಿಯಲ್ಲಿ ಕರ್ನಾಟಕ ರಾಜ್ಯ ಮಲೆಕುಡಿಯ ಸಂಘ ಹಾಗೂ ವಿಶ್ವ ಚೇತನ ಪ್ರತಿಷ್ಠಾನ ತುಮಕೂರು ಇದರ ಆಶ್ರಯದಲ್ಲಿ ನಡೆದ ವಿಶೇಷ ವ್ಯಕ್ತಿತ್ವ ವಿಕಸನ ಶಿಬಿರವನ್ನು ವಿದ್ಯಾರ್ಥಿನಿಗೆ ಪುಸ್ತಕ ಹಸ್ತಾಂತರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಣ್ಣಪ್ಪ ಎನ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಲೆಕುಡಿಯ ಸಂಘವು ಸಮುದಾಯದ ಏಳ್ಗೆಗಾಗಿ ಶ್ರಮಿಸಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಕಷ್ಟು ತರಬೇತಿಗಳನ್ನು ಪಡೆದುಕೊಳ್ಳಬೇಕು ಎಂದರು.
ವ್ಯಕ್ತಿತ್ವ ವಿಕಸನ ತರಬೇತಿದಾರ ತುಮಕೂರಿನ ವಿಶ್ವ ಚೇತನ ಪ್ರತಿಷ್ಠಾನದ ಅಧ್ಯಕ್ಷ ಪಿ.ಎಂ. ಪ್ರಸನ್ನಕುಮಾರ್ ವಿದ್ಯಾರ್ಥಿಗಳಿಗೆ ಕಲಿಕಾ ಕೌಶಲ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ತರಬೇತಿ ನೀಡಿದರು.
ಮುಖ್ಯ ಅತಿಥಿಯಾಗಿ ಪತ್ರಕರ್ತ ಅಶ್ರಫ್ ಅಲಿಕುಂಞಿ ಭಾಗವಹಿಸಿದ್ದರು.ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಸಂಜೀವ ಕುಲ್ಲಾಜೆ, ಜಿಲ್ಲಾ ಕಾರ್ಯದರ್ಶಿ ಹಾಗೂ ತಾ.ಪಂ. ಸದಸ್ಯ ಜಯರಾಮ ಆಲಂಗಾರು, ತಾಲೂಕು ಸಮಿತಿಯ ಅಧ್ಯಕ್ಷ ನೋಣಯ್ಯ ಮಚ್ಚಿನ ಮೊದಲಾದವರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳು, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
ತಾಲೂಕು ಸಮಿತಿಯ ಉಪಾಧ್ಯಕ್ಷೆ ಸುಜಾತಾ ಸ್ವಾಗತಿಸಿ ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಈದು ಪ್ರಸ್ತಾವಿಸಿದರು.ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ವಂದಿಸಿದರು. ಕೋಶಾಧಿಕಾರಿ ಮೋಹನ್ ಎಸ್.ನಿಡ್ಲೆ ಕಾರ್ಯಕ್ರಮ ನಿರೂಪಿಸಿದರು.