Advertisement

ಕಲಿಕೆಯೊಂದಿಗೆ ಗಳಿಕೆ, ಜೀವನಕ್ಕೆ ಹಲವು ಲಾಭ 

03:14 PM Nov 14, 2018 | |

ಅಧ್ಯಯನದೊಂದಿಗೆ ಕೆಲಸ ಮಾಡುವುದು ಇಂದು ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿಯೇ ಹೆಚ್ಚಿನವರು ಈ ಎರಡೂ ಕ್ಷೇತ್ರಗಳಲ್ಲೂ ಆಸಕ್ತಿ ತೋರಿಸುತ್ತಿದ್ದಾರೆ. ಹಣ ಗಳಿಸುವುದರೊಂದಿಗೆ ಇಲ್ಲಿ ವಿದ್ಯೆಗೂ ಮಹತ್ವ ನೀಡುವ ಕಲೆ ಕರಗತ ಮಾಡಿಕೊಳ್ಳುವುದು ಅತೀ ಅವಶ್ಯ. 

Advertisement

ಕಲಿಕೆ, ಗಳಿಕೆ..ಇವೆಲ್ಲ ಮನುಷ್ಯ ಜೀವನದ ಅವಿಭಾಜ್ಯ ಅಂಗ. ಸರಿಯಾದ ವಿದ್ಯಾಭ್ಯಾಸ, ಉನ್ನತ ಶಿಕ್ಷಣ ಪಡೆದುಕೊಂಡರೆ ಜೀವನದಲ್ಲಿ ಉತ್ತಮ ನೆಲೆ ಕಂಡುಕೊಂಡು ನೆಮ್ಮದಿಯಾಗಿ ಬದುಕಬಹುದು ಎಂಬುದು ಹಲವರ ವಾದ. ಅದಕ್ಕಾಗಿ ಲಕ್ಷ ರೂ. ಕೊಟ್ಟಾದರೂ ಪರವಾಗಿಲ್ಲ ಒಳ್ಳೆ ಕಾಲೇಜು ಹುಡುಕಬೇಕು, ಉತ್ತಮ ಕಲಿಕಾ ವಾತಾವರಣ ಪಡೆದುಕೊಳ್ಳಬೇಕು ಎಂಬುದು ಹಲವರ ಬಯಕೆ. ಆದರೆ ಕಲಿಕೆಗೆ ಆಸಕ್ತಿ ಇದ್ದೂ, ಆರ್ಥಿಕ ಅಡಚಣೆಯಿಂದ ದುಡಿಯಲೇ ಬೇಕಾಗಿ ಬಂದಾಗ?

ದುಡಿಮೆಯ ಜತೆಗೇ ಗಳಿಕೆಗೆ ಸಾಕಷ್ಟು ಅವಕಾಶಗಳನ್ನು ಶಿಕ್ಷಣ ಕ್ಷೇತ್ರ ಕಲ್ಪಿಸಿಕೊಟ್ಟಿದೆ. ಅದೆಷ್ಟೋ ಬಾರಿ ಉನ್ನತ ವ್ಯಾಸಂಗ ಮಾಡಬೇಕು, ಜೀವನಕ್ಕೆ ಒಂದೊಳ್ಳೆ ತಳಪಾಯವನ್ನು ಕಂಡು ಕೊಳ್ಳಬೇಕು ಆ ಮೂಲಕ ಬದುಕು ಸುಭದ್ರವಾಗಿಸಬೇಕೆಂದು ಆಲೋಚಿಸಿ ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತದೆ. ಆದರೆ ಬಿಡದೇ ಕಾಡುವ ಬಡತನ, ಆರ್ಥಿಕತೆಯ ವೈಫಲ್ಯದಿಂದಾಗಿ ಅನೇಕ ಬಾರಿ ಆ ಕನಸು ಕೈಗೂಡದಿರುತ್ತದೆ. ಹೀಗಿದ್ದಾಗ ತಾನು ಸೋತೆ ಎಂದು ತಲೆಮೇಲೆ ಕೈ ಇಟ್ಟು ಕುಳಿತುಕೊಳ್ಳುವವರೇ ಹೆಚ್ಚು. ಆದರೆ ಅವಕಾಶಗಳ ಬಾಗಿಲು ತೆರೆದಿದೆ, ಅದರ ಸದುಪಯೋಗ ಆಗಬೇಕು ಎಂಬುದನ್ನು ಯೋಚನೆ ಮಾಡಿದರೆ ಬದುಕು ಸುಖಮಯವಾಗುವುದರಲ್ಲಿ ಎರಡು ಮಾತಿಲ್ಲ.

ಯಾವುದೋ ಕಾರಣದಿಂದ ಕ್ಲಾಸ್‌ರೂಂ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ ಎಂದರೆ ಉದ್ಯೋಗ ನಿರ್ವಹಿಸುತ್ತಲೇ ಕಲಿಯಲು ಸಾಕಷ್ಟು ಅವಕಾಶಗಳಿವೆ. ಅದಕ್ಕಾಗಿ ದೂರ ಶಿಕ್ಷಣ ಕೋರ್ಸ್‌ಗಳು ಮತ್ತು ಸಂಜೆ ಕಾಲೇಜುಗಳು ಲಭ್ಯವಿವೆ.

ದೂರ ಶಿಕ್ಷಣದೊಂದಿಗೆ ದುಡಿಮೆ
ದೂರ ಶಿಕ್ಷಣ ಕೋರ್ಸ್‌ ಪಡೆದುಕೊಂಡು ಉದ್ಯೋಗ ನಿರ್ವಹಣೆ ಹೆಚ್ಚು ಸುಲಭ. ಇಲ್ಲಿ ಕಲಿಯುವುದರೊಂದಿಗೆ ದುಡಿಮೆಗೂ ಸಾಕಷ್ಟು ಅವಕಾಶ ಸಿಗುವುದರಿಂದ ಎರಡನ್ನೂ ಸಮತೂಕದಲ್ಲಿಡುವುದು ಮತ್ತು ನಿರ್ವಹಣೆ ಮಾಡುವುದು ಸುಲಭವಾಗುತ್ತದೆ. ಹಗಲು ಹೊತ್ತಿನಲ್ಲಿ ಲಭ್ಯ ಉದ್ಯೋಗವನ್ನು ಮಾಡಿಕೊಂಡು, ರಾತ್ರಿ ಹೊತ್ತಿನಲ್ಲಿ ಓದುವಿಕೆ ನಿರ್ವಹಣೆ ಮಾಡಿದರೆ ಕಷ್ಟವಾಗದು. ದೂರ ಶಿಕ್ಷಣ ಕೋರ್ಸ್‌ ಪಡೆದುಕೊಂಡರೆ ಯಾವುದೇ ಕ್ಲಾಸ್‌ರೂಂ ಶಿಕ್ಷಣ ಇಲ್ಲವಾದ್ದರಿಂದ ಮತ್ತು ಪರೀಕ್ಷಾ ಸಮಯದಲ್ಲಿ ಮಾತ್ರ ಹೋಗಬೇಕಾಗಿರುವುದರಿಂದ ಕೆಲಸದ ಸ್ಥಳದಲ್ಲಿ ಅನಗತ್ಯ ರಜೆ ಹಾಕುವುದು ಮುಂತಾದ ಸಮಸ್ಯೆಗಳು ಉಂಟಾಗುವುದಿಲ್ಲ. ಇದರಿಂದ ಪರೀಕ್ಷಾ ಸಮಯ ಹೊರತುಪಡಿಸಿ ಉಳಿದ ಸಮಯಗಳಲ್ಲಿ ಗಳಿಕೆಯತ್ತಲೇ ಗಮನ ಹರಿಸಲು ಸಾಧ್ಯವಾಗುತ್ತದೆ.

Advertisement

ಸಾಮರ್ಥ್ಯದ ಕ್ಷೇತ್ರ ಆರಿಸಿ
ಕಲಿಯುತ್ತಾ ಉದ್ಯೋಗ ಮಾಡುವುದೇನೋ ಸುಲಭ. ಆದರೆ ಇದು ಲಾಭ ಹೇಗೆ ಎಂಬುದರ ಬಗ್ಗೆ ಗಮನ ಹರಿಸುವುದು ಆವಶ್ಯಕ. ಬಹುತೇಕರು ಮಾಡುವ ಮೊದಲ ತಪ್ಪೆಂದರೆ, ಹಣಕಾಸಿನ ತೀರಾ ಅಗತ್ಯವಿದೆಯೆಂದು ಯಾವುದೋ ಒಂದು ತಮ್ಮ ಪ್ರತಿಭೆಗೆ ಒಳಪಡದ ಅಥವಾ ಮುಂದೆ ಭವಿಷ್ಯಕ್ಕೆ ಅಗತ್ಯವಿಲ್ಲದ ದುಡಿಮೆಯೊಂದರಲ್ಲಿ ತೊಡಗಿಸಿಕೊಳ್ಳುವುದು. ದುಡಿಮೆಯ ಅನಿವಾರ್ಯತೆಗೆ ಕಟ್ಟುಬಿದ್ದು ದುಡಿಯುವುದರಿಂದ ಭವಿಷ್ಯಕ್ಕೆ ಪೂರಕವಾಗಿಲ್ಲದಿದ್ದರೆ ಮುಂದೆಯೂ ಕಷ್ಟಗಳು ಎದುರಾಗುತ್ತವೆ.

ಅನುಭವ ಇರಲಿ
ಸಂಧ್ಯಾ ಕಾಲೇಜು ಅಥವಾ ದೂರ ಶಿಕ್ಷಣ ಪಡೆಯುವ ಸಂದರ್ಭದಲ್ಲಿಯೂ ಒಟ್ಟಾರೆ ಒಂದು ಡಿಗ್ರಿಯೋ, ಸ್ನಾತಕೋತ್ತರ ಪದವಿಯೋಬೇಕೆಂದು ಓದದೆ, ಜೀವನದ ಸ್ಪಷ್ಟ ಗುರಿಯೊಂದಿಗೆ ಶಿಕ್ಷಣ ಪಡೆದರೆ ಉತ್ತಮ. ಕಲಿಯುವ ವಿಷಯಕ್ಕನುಗುಣವಾಗಿ ಉದ್ಯೋಗ ನಿರ್ವಹಿಸಿದರೆ, ಶಿಕ್ಷಣ ಮುಗಿದ ತತ್‌ಕ್ಷಣವೇ ಅನುಭವದೊಂದಿಗೆ ಸಂದರ್ಶನ ಎದುರಿಸುವುದು ಸಾಧ್ಯವಾಗುತ್ತದೆ. ಇದು ಕ್ಲಾಸ್‌ರೂಂ ಶಿಕ್ಷಣ ಪಡೆದ ವಿದ್ಯಾರ್ಥಿಗಳಷ್ಟೇ ಮಹತ್ವ ಪಡೆದುಕೊಳ್ಳುತ್ತದೆ. ಕಲಿಕೆ ಮತ್ತು ಉದ್ಯೋಗದ ಸಂದರ್ಭದಲ್ಲಿ ದೊರೆತ ಅನುಭವ ಉದ್ಯೋಗ ನಿರ್ವಹಣೆಗೂ ಪ್ರಯೋಜನವಾಗುತ್ತದೆ.

ಸ್ಪಷ್ಟ ಗುರಿ ಇರಲಿ
ಯಾವ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಬೇಕೆಂಬ ತುಡಿತವಿದೆಯೋ ಆ ಕ್ಷೇತ್ರದಲ್ಲಿ ಉದ್ಯೋಗದ ಅವಕಾಶಗಳನ್ನು ಹುಡುಕಿಕೊಳ್ಳಬೇಕು. ಅದು ತೀರಾ ಕೆಳ ಹಂತದ ಉದ್ಯೋಗವಾದರೂ ಸರಿಯೇ. ಆ ಕಚೇರಿಯಲ್ಲಿನ ಬೆರೆಯುವಿಕೆ, ಅಲ್ಲಿನ ವಾತಾವರಣವೇ ಮುಂದೆ ಓದು ಮುಗಿಸಿದ ಬಳಿಕ ಉದ್ಯೋಗಕ್ಕೆ ನೆರವಾಗಬಹುದು. ಪತ್ರಿಕೆ ಹಾಕಿದ ಹುಡುಗ ಪತ್ರಕರ್ತನಾದ ಬಗ್ಗೆಯೋ, ತಂತ್ರಜ್ಞಾನ ಸಂಬಂಧಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಮುಂದೆ ಎಂಜಿನಿಯರ್‌ ಆದ ಬಗ್ಗೆಯೋ ಹಲವು ಬಾರಿ ನಿದರ್ಶನಗಳನ್ನು ಕೇಳಿರಬಹುದು. ಇದೇ ಸ್ಫೂರ್ತಿದಾಯಕ ಅಂಶಗಳು ನಿಮ್ಮ ಜೀವನದಲ್ಲಿಯೂ ನೆರವಾಗಬಹುದು.

ಸಂಧ್ಯಾ ಕಾಲೇಜು ಪೂರಕ
ಇನ್ನು ಸಂಜೆ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವುದರ ಜತೆಗೇ ಉದ್ಯೋಗ ನಿರ್ವಹಣೆಯೂ ಲಾಭದಾಯಕವೇ. ಕೆಲವರಿಗೆ ಕ್ಲಾಸ್‌ರೂಂನಲ್ಲಿ ಕುಳಿತು ಪಾಠ ಕೇಳಿದರೇನೇ ಹೆಚ್ಚು ಪರಿಣಾಮಕಾರಿ. ಅಂತಹವರು ದೂರ ಶಿಕ್ಷಣದ ಬದಲಾಗಿ ಸಂಧ್ಯಾ ಕಾಲೇಜುಗಳನ್ನು ಆಯ್ಕೆ ಮಾಡಿ ಕಲಿಯುವುದು ಉತ್ತಮ. ಇಲ್ಲಿಯೂ ಬೆಳಗ್ಗಿನ ಹೊತ್ತಲ್ಲಿ ಗಳಿಕೆ, ಸಂಜೆ ಹೊತ್ತಲ್ಲಿ ಕಾಲೇಜಿಗೆ ತೆರಳುವುದರಿಂದ ಉದ್ಯೋಗ ನಿರ್ವಹಣೆ ಸುಸೂತ್ರವಾಗುತ್ತದೆ. 

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next