Advertisement

Ind V/s Aus: ಗಾಯಕ್ವಾಡ್‌,ಮ್ಯಾಕ್ಸ್‌ ವೆಲ್‌ ಸೆಂಚುರಿ- ಗುವಾಹಟಿಯಲ್ಲಿ ಆಸ್ಟ್ರೇಲಿಯ ಜಯಭೇರಿ

11:26 PM Nov 28, 2023 | Team Udayavani |

ಗುವಾಹಟಿ: ರುತುರಾಜ್‌ ಗಾಯಕ್ವಾಡ್‌ ಅವರ ಚೊಚ್ಚಲ ಟಿ20 ಶತಕಕ್ಕೆ ಸಡ್ಡು ಹೊಡೆದು ಸೆಂಚುರಿ ಬಾರಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಗುವಾಹಟಿ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ 5 ವಿಕೆಟ್‌ಗಳ ರೋಚಕ ಜಯ ತಂದಿತ್ತಿದ್ದಾರೆ. ಇದರೊಂದಿಗೆ 5 ಪಂದ್ಯಗಳ ಸರಣಿ ಜೀವಂತವಾಗಿ ಉಳಿದಿದೆ. ಭಾರತದ ಮುನ್ನಡೆ 2-1ಕ್ಕೆ ಇಳಿದಿದೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಮೂರೇ ವಿಕೆಟಿಗೆ 222 ರನ್‌ ರಾಶಿ ಹಾಕಿದರೆ, ಆಸ್ಟ್ರೇಲಿಯ ಭರ್ತಿ 20 ಓವರ್‌ಗಳಲ್ಲಿ 5 ವಿಕೆಟಿಗೆ 225 ರನ್‌ ಬಾರಿಸಿ ಮೊದಲ ಗೆಲುವು ಸಾಧಿಸಿತು.
ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಆಸ್ಟ್ರೇಲಿಯ ಹತ್ತರ ಸರಾಸರಿಯಲ್ಲಿ ರನ್‌ ಪೇರಿಸತೊಡಗಿತು. ಟ್ರ್ಯಾವಿಸ್‌ ಹೆಡ್‌ ಅಬ್ಬರಿಸತೊಡಗಿದರು. ಬಳಿಕ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಬ್ಯಾಟಿಂಗ್‌ ಮ್ಯಾಜಿಕ್‌ ಮೊದಲ್ಗೊಂಡಿತು. ಎಂದಿನಂತೆ ಮುನ್ನುಗ್ಗಿ ಬಾರಿಸತೊಡಗಿದ “ಮ್ಯಾಕ್ಸಿ’ ಭಾರತದ ಯುವ ಬೌಲಿಂಗ್‌ ಪಡೆಯ ಮೇಲೆ ನಿರ್ದಯ ಪ್ರಹಾರವಿಕ್ಕತೊಡಗಿದರು. ಅಂತಿಮ ಓವರ್‌ನಲ್ಲಿ 21 ರನ್‌ ತೆಗೆಯುವ ಸವಾಲನ್ನು ಮ್ಯಾಕ್ಸ್‌ ವೆಲ್‌-ವೇಡ್‌ ದಿಟ್ಟ ರೀತಿಯಲ್ಲಿ ನಿಭಾಯಿಸಿ ಭಾರತದ ಕೈಯಿಂದ ಗೆಲುವನ್ನು ಕಸಿದೇ ಬಿಟ್ಟರು. ಆಸೀಸ್‌ ಗೆಲುವಿನ ವೇಳೆ ಮ್ಯಾಕ್ಸ್‌ ವೆಲ್‌ ಅಜೇಯ 104 ರನ್‌ ಮಾಡಿದ್ದರು (48 ಎಸೆತ, 8 ಬೌಂಡರಿ, 8 ಸಿಕ್ಸರ್‌).

ಗಾಯಕ್ವಾಡ್‌ ಸೆಂಚುರಿ
ಭಾರತ ಸತತ 3ನೇ ಪಂದ್ಯದಲ್ಲೂ ಇನ್ನೂ ರರ ಗಡಿ ದಾಟಲು ಕಾರಣ ರುತುರಾಜ್‌ ಗಾಯಕ್ವಾಡ್‌ ಅವರ ಆಕರ್ಷಕ ಶತಕ. ಕೊನೆಯ ತನಕ ಔಟಾಗದೆ ಉಳಿದ ಗಾಯಕ್ವಾಡ್‌ 57 ಎಸೆತಗಳಿಂದ 123 ರನ್‌ ಬಾರಿಸಿ ಗುವಾಹಟಿಯಲ್ಲಿ ಗುಡುಗಿದರು. ಈ ಚೊಚ್ಚಲ ಸೆಂಚುರಿ ವೇಳೆ 13 ಬೌಂಡರಿ, 7 ಸಿಕ್ಸರ್‌ ಸಿಡಿಸಿದರು. ಮೊದಲ 22 ಎಸೆತಗಳಲ್ಲಿ ಬರೀ 22 ರನ್‌ ಮಾಡಿದ್ದ ಗಾಯಕ್ವಾಡ್‌ ಅನಂತರದ 35 ಎಸೆತಗಳಲ್ಲಿ ಬಾರಿಸಿದ್ದು ಬರೋಬ್ಬರಿ 101 ರನ್‌!

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಮೊದಲ ಓವರ್‌ನಲ್ಲೇ 14 ರನ್‌ ಗಳಿಸಿತಾದರೂ ಕಳೆದ ಪಂದ್ಯದ ಹೀರೋಗಳಾದ ಯಶಸ್ವಿ ಜೈಸ್ವಾಲ್‌ (6) ಮತ್ತು ಇಶಾನ್‌ ಕಿಶನ್‌ (0) ಅವರನ್ನು ಬೇಗನೇ ಕಳೆದುಕೊಂಡಿತು. ಆಗ ಕೇವಲ 24 ರನ್‌ ಆಗಿತ್ತು. 5 ಎಸೆತ ಎದುರಿಸಿಯೂ ಇಶಾನ್‌ಗೆ ಖಾತೆ ತೆರೆಯಲಾಗಲಿಲ್ಲ.

ಆರಂಭದಲ್ಲಿ ಗಾಯಕ್ವಾಡ್‌ ಎಂದಿನಂತೆ ವಿಕೆಟ್‌ ರಕ್ಷಣೆಯ ಕಾಯಕದಲ್ಲಿ ತೊಡಗಿದರು. 4ನೇ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ಸೂರ್ಯಕುಮಾರ್‌ ಯಾದವ್‌ ಆರಂಭದಲ್ಲಿ ಬಹಳ ನಿಧಾನ ಗತಿಯಲ್ಲಿದ್ದರು. ಮೊದಲ 10 ಎಸೆತಗಳಲ್ಲಿ ಗಳಿಸಿದ್ದು ಒಂದೇ ರನ್‌. ಬಳಿಕ ಮುನ್ನುಗ್ಗಿ ಬೀಸತೊಡಗಿದರು. ರನ್‌ರೇಟ್‌ನಲ್ಲಿ ಉತ್ತಮ ಪ್ರಗತಿ ಕಂಡುಬಂತು. 10 ಓವರ್‌ ಅಂತ್ಯಕ್ಕೆ ಭಾರತದ ಸ್ಕೋರ್‌ 80ಕ್ಕೆ ಏರಿತ್ತು.

Advertisement

ಅರ್ಧ ಹಾದಿ ಕ್ರಮಿಸಿದ ಬೆನ್ನಲ್ಲೇ ಆರನ್‌ ಹಾರ್ಡಿ ಆಸ್ಟ್ರೇಲಿಯಕ್ಕೆ ದೊಡ್ಡದೊಂದು ಯಶಸ್ಸು ತಂದಿತ್ತರು. ಸೂರ್ಯಕುಮಾರ್‌ ಅಬ್ಬರಕ್ಕೆ ತೆರೆ ಎಳೆದರು. ಎಜ್‌ ಆದ ಚೆಂಡು ನೇರವಾಗಿ ಕೀಪರ್‌ ವೇಡ್‌ ಕೈ ಸೇರಿತ್ತು. ಕಪ್ತಾನನ ಕೊಡುಗೆ 29 ಎಸೆತಗಳಿಂದ 39 ರನ್‌. 5 ಫೋರ್‌, 2 ಸಿಕ್ಸರ್‌ ಬಾರಿಸಿ ರಂಜಿಸಿದರು.

ಗಾಯಕ್ವಾಡ್‌ 12ನೇ ಓವರ್‌ ಬಳಿಕ ಬಿರುಸಿನ ಆಟಕ್ಕಿಳಿದರು. 32 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಮೊದಲ ಪಂದ್ಯದಲ್ಲಿ ಎಸೆತ ಎದುರಿಸದೆಯೇ ರನೌಟ್‌ ಆಗಿದ್ದ ಗಾಯಕ್ವಾಡ್‌ ಅವರ “ಕಮ್‌ ಬ್ಯಾಕ್‌’ ನಿಜಕ್ಕೂ ಅಮೋಘ. ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತ ಗಾಯಕ್ವಾಡ್‌, ಹಾರ್ಡಿ ಪಾಲಾದ 18ನೇ ಓವರ್‌ನಲ್ಲಿ 25 ರನ್‌ ಸಿಡಿಸಿದರು. ಅಂತಿಮ ಓವರ್‌ ಎಸೆದ ಮ್ಯಾಕ್ಸ್‌ವೆಲ್‌ ತನ್ನ ಏಕೈಕ ಓವರ್‌ನಲ್ಲಿ 30 ರನ್‌ ನೀಡಿ ದುಬಾರಿಯಾದರು. ಇದರಲ್ಲಿ 27 ರನ್‌ ಗಾಯಕ್ವಾಡ್‌ ಬ್ಯಾಟೊಂದರಿಂದಲೇ ಸಿಡಿದಿತ್ತು.

ಅಗ್ನಿಪರೀಕ್ಷೆ ಎದುರಿಸುತ್ತಿದ್ದ ತಿಲಕ್‌ ವರ್ಮ ಇಲ್ಲಿ ಪೋಷಕನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಗಾಯಕ್ವಾಡ್‌ ಜತೆಗೂಡಿ ಮುರಿಯದ 4ನೇ ವಿಕೆಟಿಗೆ 141 ರನ್‌ ಜತೆಯಾಟ ನಡೆಸಿದರು.
ಆಸೀಸ್‌ ಬೌಲರ್‌ಗಳೆಲ್ಲ ದುಬಾರಿಯಾದ ಹೊತ್ತಿನಲ್ಲಿ ಜೇಸನ್‌ ಬೆಹ್ರೆಂಡಾರ್ಫ್‌ ಭಾರೀ ನಿಯಂತ್ರಣ ಸಾಧಿಸಿದರು. 4 ಓವರ್‌ಗಳಲ್ಲಿ ನೀಡಿದ್ದು 12 ರನ್‌ ಮಾತ್ರ. ಇದರಲ್ಲೊಂದು ಓವರ್‌ ಮೇಡನ್‌ ಆಗಿತ್ತು. ಒಟ್ಟಾರೆಯಾಗಿ ಆಸೀಸ್‌ ಬೌಲರ್ 18 ವೈಡ್‌ ನೀಡುವ ಮೂಲಕ 3 ಹೆಚ್ಚುವರಿ ಓವರ್‌ ಎಸೆದಂತಾಯಿತು.

ಮುಕೇಶ್‌ಗೆ ಮದುವೆ
ಭಾರತ ಈ ಪಂದ್ಯಕ್ಕಾಗಿ ಒಂದು ಬದಲಾವಣೆ ಮಾಡಿಕೊಂಡಿತು. ಹಸೆಮಣೆ ಏರಲಿರುವ ಮುಕೇಶ್‌ ಕುಮಾರ್‌ ಬದಲು ಆವೇಶ್‌ ಖಾನ್‌ ಅವರನ್ನು ಕಣಕ್ಕಿಳಿಸಿತು. ಮುಕೇಶ್‌ ಸರಣಿಯ ಉಳಿದ ಪಂದ್ಯಗಳಿಗೂ ಲಭ್ಯರಿರುವುದಿಲ್ಲ. ಇವರ ಬದಲು ದೀಪಕ್‌ ಚಹರ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಆಸ್ಟ್ರೇಲಿಯ ತಂಡದಲ್ಲಿ 4 ಬದಲಾವಣೆ ಸಂಭವಿಸಿತು. ಸ್ಮಿತ್‌, ಶಾರ್ಟ್‌, ಅಬೋಟ್‌ ಮತ್ತು ಝಂಪ ಬದಲು ಟ್ರ್ಯಾವಿಸ್‌ ಹೆಡ್‌, ಆರನ್‌ ಹಾರ್ಡಿ, ಜೇಸನ್‌ ಬೆಹ್ರೆಂಡಾರ್ಫ್‌ ಮತ್ತು ಕೇನ್‌ ರಿಚರ್ಡ್‌ಸನ್‌ ಆಡಲಿಳಿದರು.

ಆಸ್ಟ್ರೇಲಿಯ ಟಿ20 ತಂಡದಲ್ಲಿ ಭಾರೀ ಬದಲಾವಣೆ
ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯ ಟಿ20 ತಂಡದಲ್ಲಿ ಭಾರೀ ಬದಲಾವಣೆ ಸಂಭವಿಸಿದೆ. ಏಕದಿನ ವಿಶ್ವಕಪ್‌ ವಿಜೇತ ತಂಡದ ಬಹುತೇಕ ಸದಸ್ಯರು ತವರಿಗೆ ಮರಳಲಿದ್ದು, ಇವರ ಸ್ಥಾನಕ್ಕೆ ಬೇರೆ ಕ್ರಿಕೆಟಿಗರನ್ನು ಆಯ್ಕೆ ಮಾಡಲಾಗಿದೆ.

ಗುವಾಹಟಿಯ ತೃತೀಯ ಪಂದ್ಯಕ್ಕೂ ಮುನ್ನ ಸ್ಟೀವನ್‌ ಸ್ಮಿತ್‌ ಮತ್ತು ಆ್ಯಡಂ ಝಂಪ ಆಸ್ಟ್ರೇಲಿಯಕ್ಕೆ ವಿಮಾನ ಏರಿದರು. ಈ ಮುಖಾಮುಖೀ ಬಳಿಕ ಗ್ಲೆನ್‌ ಮ್ಯಾಕ್ಸ್‌ ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಜೋಶ್‌ ಇಂಗ್ಲಿಸ್‌ ಮತ್ತು ಸೀನ್‌ ಅಬೋಟ್‌ ಕೂಡ ಆಸ್ಟ್ರೇಲಿಯಕ್ಕೆ ವಾಪಸಾಗಲಿದ್ದಾರೆ.

ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯ ತಂಡದ 7 ಮಂದಿ ಕ್ರಿಕೆಟಿಗರು ಟಿ20 ತಂಡದಲ್ಲಿ ಉಳಿ ದುಕೊಂಡಿದ್ದರು. ಇದೀಗ 3ನೇ ಪಂದ್ಯದ ಬಳಿಕ ಇವರಲ್ಲಿ 6 ಮಂದಿ ತಂಡದಿಂದ ಬೇರ್ಪಟ್ಟಂತಾಗುತ್ತದೆ. ಕೊನೆಯಲ್ಲಿ ಉಳಿ ಯುವ ವಿಶ್ವಕಪ್‌ ವಿಜೇತ ತಂಡದ ಏಕೈಕ ಆಟಗಾರನೆಂದರೆ ಟ್ರ್ಯಾವಿಸ್‌ ಹೆಡ್‌. ಇದರಿಂದ ಕೊನೆಯ 2 ಟಿ20 ಪಂದ್ಯಗಳ ವೇಳೆ ಆಸ್ಟ್ರೇಲಿಯ ತಂಡ ಭಿನ್ನ ಸ್ವರೂಪ ಪಡೆಯಲಿದೆ.

ಹೊಸ ಆಟಗಾರರು
ವಿಕೆಟ್‌ ಕೀಪರ್‌-ಬ್ಯಾಟರ್‌ ಜೋಶ್‌ ಫಿಲಿಪ್‌ ಮತ್ತು ಬಿಗ್‌ ಹಿಟ್ಟರ್‌ ಬೆನ್‌ ಮೆಕ್‌ಡರ್ಮಟ್‌ ಮಂಗಳವಾರ ಆಸ್ಟ್ರೇಲಿಯ ಟಿ20 ತಂಡವನ್ನು ಸೇರಿಕೊಂಡಿದ್ದಾರೆ. ರಾಯ್‌ಪುರದ 4ನೇ ಪಂದ್ಯಕ್ಕೂ ಮುನ್ನ ಬೆನ್‌ ಡ್ವಾರ್ಶಿಯಸ್‌ ಮತ್ತು ಸ್ಪಿನ್ನರ್‌ ಕ್ರಿಸ್‌ ಗ್ರೀನ್‌ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಮೊದಲೆರಡು ಪಂದ್ಯಗಳ ಸೋಲಿಗೂ ಆಸ್ಟ್ರೇಲಿಯ ತಂಡದಲ್ಲಿನ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ಕಳೆದ ಅನೇಕ ತಿಂಗಳಿಂದ ಭಾರೀ ಬಿಸಿಲಲ್ಲಿ ಸತತವಾಗಿ ಕ್ರಿಕೆಟ್‌ ಆಡುತ್ತಲೇ ಇರುವ ವಿಶ್ವಕಪ್‌ ತಂಡದ ಆಟಗಾರರಿಗೆ “ಕ್ರಿಕೆಟ್‌ ಆಸ್ಟ್ರೇಲಿಯ’ ವಿಶ್ರಾಂತಿ ನೀಡಲು ನಿರ್ಧರಿಸಿರುವುದೇ ಇದಕ್ಕೆ ಕಾರಣ.

ಪರಿಷ್ಕೃತ ತಂಡ: ಮ್ಯಾಥ್ಯೂ ವೇಡ್‌ (ನಾಯಕ), ಜೇಸನ್‌ ಬೆಹ್ರೆಂಡಾರ್ಫ್‌ , ಟಿಮ್‌ ಡೇವಿಡ್‌, ಬೆನ್‌ ಡ್ವಾರ್ಶಿಯಸ್‌, ನಥನ್‌ ಎಲ್ಲಿಸ್‌, ಕ್ರಿಸ್‌ ಗ್ರೀನ್‌, ಆರನ್‌ ಹಾರ್ಡಿ, ಟ್ರ್ಯಾವಿಸ್‌ ಹೆಡ್‌, ಬೆನ್‌ ಮೆಕ್‌ಡರ್ಮಟ್‌, ಜೋಶ್‌ ಫಿಲಿಪ್‌, ತನ್ವೀರ್‌ ಸಂಘಾ, ಮ್ಯಾಟ್‌ ಶಾರ್ಟ್‌, ಕೇನ್‌ ರಿಚರ್ಡ್‌ಸನ್‌.

Advertisement

Udayavani is now on Telegram. Click here to join our channel and stay updated with the latest news.

Next