Advertisement

ಗಾಯಕ್ವಾಡ್‌ ಹಾರಾಟಕ್ಕೆ ನಿಷೇಧ

03:50 AM Mar 25, 2017 | Team Udayavani |

ಹೊಸದಿಲ್ಲಿ: ಏರ್‌ ಇಂಡಿಯಾ ಸಿಬಂದಿಗೆ ಚಪ್ಪಲಿಯಿಂದ ಹೊಡೆದ ಮಹಾರಾಷ್ಟ್ರದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್‌ ಇನ್ನು ರೈಲು, ಬಸ್ಸಿನಲ್ಲಿ ಪ್ರಯಾಣಿಸಲು ಸಿದ್ಧರಾಗಬೇಕಿದೆ! 

Advertisement

ಗುರುವಾರದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಫೆಡರೇಷನ್‌ ಆಫ್ ಇಂಡಿಯಾ ಏರ್‌ಲೈನ್ಸ್‌ನ ಸದಸ್ಯ ಸಂಸ್ಥೆಗಳಾದ ಏರ್‌ ಇಂಡಿಯಾ, ಇಂಡಿಗೋ, ಜೆಟ್‌ ಏರ್‌ವೆಸ್‌, ಸ್ಪೈಸ್‌ಜೆಟ್‌ ಮತ್ತು ಗೋಏರ್‌ ಸಂಸ್ಥೆಗಳು “ತಕ್ಷಣದಿಂದಲೇ ಜಾರಿಗೆ ಬರುವಂತೆ’ ಗಾಯಕ್ವಾಡ್‌ರನ್ನು ಕಪ್ಪುಪಟ್ಟಿಗೆ ಸೇರಿಸಿವೆ. ಇದರೊಂದಿಗೆ ಏರ್‌ಏಷ್ಯಾ ಹಾಗೂ ವಿಸ್ತಾರ ಸಂಸ್ಥೆಗಳೂ ಗಾಯಕ್ವಾಡ್‌ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ ಎಂದಿವೆ. ಹೀಗಾಗಿ ಮುಂದೆ ಸ್ಥಳೀಯವಾಗಿ “ಹಾರಾಡಲು’ ಗಾಯಕ್ವಾಡ್‌ ಸ್ವಂತ ವಿಮಾನ, ಕಾಪ್ಟರ್‌ ಹೊಂದಬೇಕು. ಇಲ್ಲವೇ ರೈಲು, ರಸ್ತೆ ಮಾರ್ಗದ ಮೊರೆ ಹೋಗಬೇಕಾದ್ದು ಅನಿವಾರ್ಯ. ಆದರೆ ವಿಮಾನಯಾನ ಸಂಸ್ಥೆಗಳ ಈ ನಿರ್ಧಾರಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂಬ ಬಗ್ಗೆ ಸರಕಾರ ಪರಿಶೀಲಿಸುತ್ತಿದೆ.

ಟಿಕೆಟ್‌ ರದ್ದು: ದೆಹಲಿಯಿಂದ ಪುಣೆಗೆ ತೆರಳಲು ಸಂಜೆ 4 ಗಂಟೆಯ ವಿಮಾನಕ್ಕೆ ಗಾಯಕ್ವಾಡ್‌ ಕಾಯ್ದಿರಿಸಿದ್ದ ರಿಟರ್ನ್ ಟಿಕೆಟ್‌ ಅನ್ನು ಏರ್‌ ಇಂಡಿಯಾ ರದ್ದು ಮಾಡಿದೆ. ನಂತರ ಗಾಯಕ್ವಾಡ್‌ರ ಟ್ರಾವೆಲ್‌ ಏಜೆಂಟ್‌ 5.50ಕ್ಕೆ ಹೊರಡಲಿದ್ದ ಇಂಡಿಗೋ ವಿಮಾನದಲ್ಲಿ ಟಿಕೆಟ್‌ ಬುಕ್‌ ಮಾಡಿದ್ದು, ಸ್ವಲ್ಪ ಸಮಯದ ನಂತರ ಇಂಡಿಗೋ ಕೂಡ ಈ ಟಿಕೆಟ್‌ ರದ್ದು ಮಾಡಿದೆ. 

ಪಶ್ಚಾತ್ತಾಪವಿಲ್ಲ!: ಏರ್‌ ಇಂಡಿಯಾ ಸಿಬ್ಬಂದಿ, 60 ವರ್ಷದ ಸುಕುಮಾರ್‌ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದ ಗಾಯಕ್ವಾಡ್‌, ಈ ಪ್ರಕರಣದ ಬಗ್ಗೆ ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಪಶ್ಚಾತ್ತಾಪ ಪಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಗುರುವಾರ ದೆಹಲಿಯ ಮಹಾರಾಷ್ಟ್ರ ಸದನದಲ್ಲಿ ತಂಗಿದ್ದ ಸಂಸದ, ಶುಕ್ರವಾರ ಬೆಳಗ್ಗೆ ಬಾಲಿವುಡ್‌ ಸಿನಿಮಾ ನೋಡಿದರು. “”ಟೆನÒನ್‌ ಫ್ರೀ ಆಗಲು ಸಿನಿಮಾಗೆ ಹೋಗಿದ್ದೆ,” ಎಂದು ಮಾಧ್ಯಮಗಳಿಗೆ ಅವರು ತಿಳಿಸಿದರು.

ವಿವರಣೆ ಕೇಳಿದ ಸೇನೆ: ಘಟನೆ ಕುರಿತಂತೆ ವಿವರ ನೀಡುವಂತೆ ಶಿವಸೇನೆ ತನ್ನ ಸಂಸದನಿಗೆ ಸೂಚಿಸಿದೆ. ಈ ವಿಷಯ ಸ್ಪಷ್ಟಪಡಿಸಿರುವ ಪಕ್ಷದ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರ ಮಾಧ್ಯಮ ಸಲಹೆಗಾರ ಹರ್ಶಲ್‌ ಪ್ರಧಾನ್‌, “”ಪಕ್ಷ ಈ ರೀತಿಯ ಹಿಂಸೆಯನ್ನು ಸಹಿಸುವುದಿಲ್ಲ,” ಎಂದಿದ್ದಾರೆ. ಇತ್ತ ಸಂಸದನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷಗಳು ಆಗ್ರಹಿಸಿವೆ. ಇನ್ನೊಂದೆಡೆ ಸಂಸದರ ಕ್ಷೇತ್ರ ಒಸ್ಮಾನಾಬಾದ್‌ನಲ್ಲಿ ಶಿವಸೇನೆ ಕಾರ್ಯಕರ್ತರು ಏರ್‌ ಇಂಡಿಯಾ ವಿರುದ್ಧ ಪ್ರತಿಭಟಿಸಿದ್ದಾರೆ.

Advertisement

ಗಾಯಕ್ವಾಡ್‌ ವಿರುದ್ಧ ಎಫ್ಐಆರ್‌!
ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಪೊಲೀಸರು ಸಂಸದ ರವೀಂದ್ರ ಗಾಯಕ್ವಾಡ್‌ ವಿರುದ್ಧ ಐಪಿಸಿ ಸೆಕ್ಷನ್‌ 186ರ ಅಡಿ (ಸರ್ಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ)ಎಫ್ಐಆರ್‌ ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಗಾಯಕ್ವಾಡ್‌ ಕೂಡ ಏರ್‌ ಇಂಡಿಯಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಈ ನಡುವೆ, “”ಧೈರ್ಯ ಇದ್ದರೆ ದೆಹಲಿ ಪೊಲೀಸರು ನನ್ನನ್ನು ಬಂಧಿಸಲಿ,” ಎಂದು ಗಾಯಕ್ವಾಡ್‌ ಸವಾಲು ಹಾಕಿದ್ದಾರೆ. ಅಲ್ಲದೆ,  ವಿಮಾನಯಾನ ಸಂಸ್ಥೆಗಳು ತಮಗೆ ನಿಷೇಧ ಹೇರಿರುವ ಬಗ್ಗೆ ಪ್ರತಿಕ್ರಿಯಿಸಿ, “”ಆ ಸಂಸ್ಥೆಗಳು ನಾನು “ಹಾರಾಡುವುದನ್ನು’ ಅದು ಹೇಗೆ ತಡೆಯುತ್ತವೋ ತಡೆಯಲಿ,” ಎಂದಿದ್ದಾರೆ.

ವಿಮಾನದಲ್ಲಿ ಅಶಿಸ್ತಿನಿಂದ ವರ್ತಿಸುವುದು ಮತ್ತು ಹಿಂಸೆ, ಹಲ್ಲೆ ಮಾಡುವುದು ಆಕ್ಷೇಪಾರ್ಹ. ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಘಟನೆಯ ಕುರಿತು ತನಿಖೆ ನಡೆಯಲಿದ್ದು, ನ್ಯಾಯಾಲಯ ಮುಂದಿನ ನಿರ್ಧಾರ ಕೈಗೊಳ್ಳಲಿದೆ.
ಜಯಂತ್‌ ಸಿನ್ಹಾ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next