ಭಾಲ್ಕಿ(ಬೀದರ): ರಾಜ್ಯ ರಾಜ್ಯಗಳ ನಡುವಿನ ವಿವಾದಗಳಿಗೆ ನೀರು ಹಂಚಿಕೆ ಪ್ರಮುಖ ಕಾರಣ. ನಾನು ಸಚಿವನಾದ ಮೇಲೆ ಹಲವು ರಾಜ್ಯಗಳಲ್ಲಿನ ಜಲ ವಿವಾದ ಬಗೆಹರಿಸಿದ್ದು, ಬರುವ ದಿನಗಳಲ್ಲಿ ಕರ್ನಾಟಕದ ಜಲ ವಿವಾದಗಳನ್ನು ಬಗೆಹರಿಸುತ್ತೇನೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.
ಭಾಲ್ಕಿಯಲ್ಲಿ ಬುಧವಾರ ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಾರಾಷ್ಟ್ರ- ಗುಜರಾತ್, ಉತ್ತರ ಪ್ರದೇಶ- ಮಧ್ಯಪ್ರದೇಶಗಳ ಜಲ ವಿವಾದಗಳನ್ನು ಈಗಾಗಲೇ ಬಗೆಹರಿಸಿದ್ದೇನೆ. ಮುಂದಿನ ದಿನಗಳಲ್ಲಿ ತಮಿಳುನಾಡು, ಕರ್ನಾಟಕ, ತೆಲಂಗಾಣದ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದರು.
ಭಾರತ ಶ್ರೀಮಂತ ದೇಶ. ಆದರೆ, ಇಲ್ಲಿ ವಾಸಿಸುವ ಜನರು ಮಾತ್ರ ಬಡವರು. ಇದಕ್ಕೆ ತಪ್ಪು ಆರ್ಥಿಕ ನೀತಿಗಳು, ಭ್ರಷ್ಟ ಆಡಳಿತ ಮತ್ತು ದೂರದೃಷ್ಟಿ ಇರದಿರುವುದೇ ಕಾರಣ. ರಾಷ್ಟ್ರಕ್ಕೆ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ನೀರು. ಇದು ದೇಶದ ವಿಕಾಸಕ್ಕೂ ಹಿನ್ನಡೆ ಆಗುತ್ತಿದೆ.
ರೈತರ ಕೃಷಿಗೆ ಅಗತ್ಯವಿರುವಷ್ಟು ನೀರು ಸಿಗುತ್ತಿಲ್ಲ. ಭೂಮಿಗೆ ಬಿದ್ದ ಮಳೆಯಲ್ಲಿ ಶೇ.60ರಷ್ಟು ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಈ ಬಗ್ಗೆ ಯಾರೂ ಚಿಂತನೆ ಮಾಡಿಲ್ಲ. ನೀರು ಸದ್ಬಳಕೆ ಮಾಡಿಕೊಳ್ಳುವ ದಿಸೆಯಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಆ ಮೂಲಕ 2020ರ ವೇಳೆ ರೈತರ ಆದಾಯವನ್ನು ದ್ವಿಗುಣ ಮಾಡುವ ಕಾರ್ಯಕ್ರಮ ಹಾಕಿಕೊಂಡು ಇದಕ್ಕಾಗಿ ನೀತಿ ರೂಪಿಸಲಾಗುತ್ತಿದೆ ಎಂದರು.
ಅಮೆರಿಕದಲ್ಲಿನ ರಸ್ತೆಗಳು ಗುಣಮಟ್ಟದಿಂದ ಕೂಡಿದ್ದರಿಂದಲೇ ಆ ರಾಷ್ಟ್ರ ಅಭಿವೃದ್ಧಿ ಆಗುತ್ತಿದೆ. ರಸ್ತೆಗಳು ಸರಿಯಿದ್ದರೆ ದೇಶವೂ ಪ್ರಗತಿ ಹೊಂದಲು ಸಾಧ್ಯ. ದೇಶದಲ್ಲಿಯೂ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಒತ್ತು ಕೊಡಲಾಗುತ್ತಿದೆ ಎಂದರು.
ನಾವು ಯಾವುದೇ ಗುತ್ತಿಗೆದಾರರ ಲಕ್ಷ್ಮೀ ದರ್ಶನ ಮಾಡುವುದಿಲ್ಲ. 8.5 ಲಕ್ಷ ಕೋಟಿ ರೂ. ವೆಚ್ಚದ ರಸ್ತೆಗಳ ನಿರ್ಮಾಣಕ್ಕೆ ಆದೇಶಿಸಲಾಗಿದೆ. ಒಳ್ಳೆಯ ರಸ್ತೆಗಳನ್ನು ನಿರ್ಮಿಸಿ, ಇಲ್ಲವಾದರೆ ನಿಮ್ಮನ್ನೇ ಬುಲ್ಡೋಜರ್‌ಗಳ ಕೆಳಗೆ ಹಾಕಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ.
– ನಿತೀನ್ ಗಡ್ಕರಿ, ಕೇಂದ್ರ ಹೆದ್ದಾರಿ ಮತ್ತು ಜಲ ಸಂಪನ್ಮೂಲ ಸಚಿವ