ಗದಗ: ಜೀವನದಲ್ಲಿ ಒತ್ತಡಗಳ ನಿವಾರಿಸುವಲ್ಲಿ ಯೋಗ ಅಭ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. ಯೋಗದಿಂದ ಸದಾ ಸರ್ವದಾ ಆರೋಗ್ಯ ಎಂಬ ಅದ್ಭುತ ಕೊಡುಗೆ ನೀಡಿದ ನಮ್ಮ ಸಂಸ್ಕೃತಿಯಿಂದಾಗಿ ಇಡೀ ವಿಶ್ವವೇ ನಿಬ್ಬೆರ ಗಾಗಿರುವುದು ಭಾರತೀಯರಾದ ನಮಗೆ ಅತ್ಯಂತ ಹೆಮ್ಮೆಯ ಸಂಗತಿ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿ.ಪಂ., ಆಯುಷ್ ಇಲಾಖೆ, ಜಿಲ್ಲಾ ಯೋಗ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಭೀಷ್ಮ ಕೆರೆ ಆವರಣದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗದಿಂದ ಮನಸ್ಸು ಮತ್ತು ದೇಹದ ಅನುಸಂದಾನ ಸಾಧಿಸಬಹುದಾಗಿದೆ. ಯೋಗದ ಮಹತ್ವವನ್ನು ಅರಿತಿದ್ದ ಮಹರ್ಷಿ, ಸಾಧು ಸಂತರು ಯೋಗ ಅಭ್ಯಾಸವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸ್ಪರ್ಧಾತ್ಮಕ ಯುಗದ ಒತ್ತಡಗಳಲ್ಲಿ ಶಿಸ್ತು ಬದ್ಧ ಜೀವನ ನಡೆಸುವುದು ಅತ್ಯಂತ ಕಷ್ಟಕರವಾಗಿದೆ. ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ನೌಕರರು ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಒತ್ತಡ ರಹಿತ ಜೀವನ ಸಾಗಿಸಬಹುದಾಗಿದೆ ಎಂದರು.
ಶಿವಾನಂದ ಮಠದ ಕೈವಲ್ಯನಾಥ ಸ್ವಾಮೀಜಿ ಮಾತನಾಡಿ, ಎಂಟು ನೂರು ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಪರಂಪರೆಯಲ್ಲಿ ಜೀವನಕ್ಕೆ ಅಗತ್ಯವಿರುವ ಅಂಶಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅದರಲ್ಲೂ ರೋಗ ರುಜಿನಗಳು ಬಾರದಂತೆ ಇರಲು ಪತಂಜಲಿ ಮುನಿಗಳು ಯೋಗವನ್ನು ಕಂಡುಹಿಡಿದಿರುವುದು ಮಹತ್ವದ್ದಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ತನ್ನ ಜೀವನವನ್ನು ಯೋಗ ಜೀವನವನ್ನಾಗಿ ಬದಲಾಯಿಸಿಕೊಳ್ಳಬೇಕು. ಯೋಗದಿಂದ ಮಾತ್ರ ಜೀವನ ನಿತ್ಯೋತ್ಸವವಾಗಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಯೋಗಸಾಧನೆ ಮಾಡಿದ ಮಹನಿಯರಿಗೆ ಸನ್ಮಾನಿಸಲಾಯಿತು. ಜಿಲ್ಲಾ ಆಯುಷ ಅಧಿಕಾರಿ ಸುಜಾತಾ ಪಾಟೀಲ ಸ್ವಾಗತಿಸಿ, ವಂದಿಸಿದರು.