ಉದಯವಾಣಿ ಸಮಾಚಾರ
ಗದಗ: ಅನ್ನ-ಅಕ್ಷರ ದಾಸೋಹಕ್ಕೆ ನಾಡಿನಲ್ಲಿ ಪ್ರಸಿದ್ಧವಾಗಿರುವ ತೋಂಟದಾರ್ಯ ಮಠ ಸಮಾಜಕ್ಕೆ ಕೊಡುಗೆ ನೀಡಿದ ತೆರೆಮರೆಯಲ್ಲಿರುವ ಸಾಧಕರನ್ನು ಗುರುತಿಸಿ ಗೌರವಿಸುವುದಕ್ಕೆ ಹೆಸರುವಾಸಿಯಾಗಿದೆ ಎಂದು ಜಡೆ ಸಂಸ್ಥಾನಮಠದ ಡಾ| ಮಹಾಂತ ಸ್ವಾಮೀಜಿ ಹೇಳಿದರು.
ನಗರದ ತೋಂಟದಾರ್ಯ ಮಠದ 2024ನೇ ಸಾಲಿನ ಜಾತ್ರೋತ್ಸವದ ಲಘುರಥೋತ್ಸವ ಕಾರ್ಯಕ್ರಮದಲ್ಲಿ ಗೌರವ ಸಂಮಾನ ಸ್ವೀಕರಿಸಿ ಮಾತನಾಡಿದ ಅವರು, ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ನನಗೆ ಮಾರ್ಗದರ್ಶಕರಾಗಿದ್ದರು. ನಾನು ಪೀಠಾ ಧಿಕಾರ ವಹಿಸಿಕೊಂಡ ದಿನದಂದು ಜಡೆ ಸಂಸ್ಥಾನಮಠದ ಸಂಪೂರ್ಣ ಇತಿಹಾಸವುಳ್ಳ ಪುಸ್ತಕವೊಂದನ್ನು ನನಗೆ ನೀಡಿ ಅಧ್ಯಯನ ಮಾಡುವಂತೆ ತಿಳಿಸಿದ್ದರು ಎಂದರು.
ಜಡೆ ಸಂಸ್ಥಾನಮಠದ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಮಾತನಾಡಿ, ರಾಜ್ಯ ಇಂದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ಉನ್ನತ ಮಟ್ಟಕ್ಕೆ ತಲುಪಿದ್ದರೆ ಅದರ ಹಿಂದೆ ಮಠ-ಮಾನ್ಯಗಳ ಕೊಡುಗೆ ಸಾಕಷ್ಟಿದೆ. ತೋಂಟದಾರ್ಯ ಮಠ ಈ ಸಾಲಿನಲ್ಲಿ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುತ್ತದೆ.
ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿರುವ ತೋಂಟದ ಸಿದ್ಧರಾಮ ಶ್ರೀಗಳು ಅಪಾರ ವಿದ್ವತ್ತುಳ್ಳ ಅಪರೂಪದ ಯತಿಗಳಾಗಿದ್ದು, ಹಿರಿಯ ಸ್ವಾಮೀಜಿಗಳಿಗೆ ಅವರ ಮಾರ್ಗದರ್ಶನ ಸದಾಕಾಲ ಇರಬೇಕೆಂದರು. ದೆಹಲಿ ಜಾಟವಾ ಸಮುದಾಯದ ಶ್ರೀಮಠದ ಭಕ್ತರು ಹಾಗೂ ಕಾರ್ಪೋರೇಶನ್ ಅಧಿಕಾರಿಗಳಾದ ರವೀಂದ್ರ ಪ್ರಧಾನ್ ಮಾತನಾಡಿ, ಜಾಟವಾ ಜನಾಂಗ ಮತ್ತು ತೋಂಟದಾರ್ಯ ಮಠಕ್ಕೂ ಇರುವ ಬಾಂಧವ್ಯ ನೆನೆದರು. ಬೆಳಗಾವಿ ಶಾಲಿನಿ ದೊಡಮನಿ ರಚಿಸಿದ “ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರು ಗ್ರಂಥದ ಹಿಂದಿ ಆವೃತ್ತಿ ಲೋಕಾರ್ಪಣೆಗೊಳಿಸಲಾಯಿತು.
ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಡೂರ ವಿರಕ್ತಠದ ಡಾ| ಪ್ರಭು ಸ್ವಾಮೀಜಿ, ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಕಲಬುರ್ಗಿ ರೋಜಾ ಹಿರೇಮಠದ ಕೆಂಚಬಸವ ಶಿವಾಚಾರ್ಯ ಸ್ವಾಮೀಜಿ, ರಟಕಲ್ ಹಿರೇಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಡಾ| ಮಹಾಂತಸ್ವಾಮೀಜಿ ಸಮ್ಮುಖ ವಹಿಸಿದ್ದರು. ಡಾ| ಅಶೋಕ ಹುಗ್ಗಣ್ಣವರ ವಚನ ಸಂಗೀತ ನೀಡಿದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ತೋಂಟದಾರ್ಯ ವಿದ್ಯಾಪೀಠದ
ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಇದ್ದರು.