Advertisement

ಮೂಲ ವಿಜ್ಞಾನದಲ್ಲಿ ಹೆಚ್ಚಿನ ಅಧ್ಯಯನ ಅಗತ್ಯ

10:56 AM Dec 30, 2018 | Team Udayavani |

ಗದಗ: ಭೌತಶಾಸ್ತ್ರದಲ್ಲಿ ಸರ್‌.ಸಿ.ವಿ. ರಾಮನ್‌ ಅವರ ಬಳಿಕ ಭಾರತದವರ್ಯಾರೂ ನೋಬೆಲ್‌ ಪ್ರಶಸ್ತಿ ಪಡೆದಿಲ್ಲ. ಅಂತಹ ಮಹೋನ್ನತ ಪ್ರಶಸ್ತಿಯನ್ನು ಭಾರತೀಯರು ಪಡೆಯಬೇಕು. ಈ ನಿಟ್ಟಿನಲ್ಲಿ ಮೂಲ ವಿಜ್ಞಾನದಲ್ಲಿ ಹೆಚ್ಚಿನ ಅಧ್ಯಯನ, ಸಂಶೋಧನೆಗೆ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಪ್ರೇರಣೆಯಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಪ್ರೊ| ಎಸ್‌.ವಿ. ಸಂಕನೂರ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ಸರಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿ.ಪಂ. ವತಿಯಿಂದ ನಗರದ ತೋಂಟದಾರ್ಯ ಇಂಜಿನಿಯರಿಂಗ್‌ ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಗುರುಬಸವ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಮಾನವನ ಬದುಕಿನ ವಿಜ್ಞಾನ ಮತ್ತು ತಂತ್ರಜ್ಞಾನ ಅವಿಭಾಜ್ಯ ಅಂಗ 
ಮೂಲ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಗೆ ಮುಂದುವರಿದ ರಾಷ್ಟ್ರಗಳಲ್ಲಿ ಸಾಕ್ಕಷ್ಟು ಪ್ರೋತ್ಸಾಹ ದೊರೆಯುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ ಅಮೆರಿಕ ತನ್ನ ವಾರ್ಷಿಕ ಬಜೆಟ್‌ನಲ್ಲಿ 511 ಬಿಲಿಯನ್‌ ಡಾಲರ್‌, ಚೀನಾ 411, ಸೌಥ್‌ ಕೋರಿಯಾ ಸೇರಿದಂತೆ ಅನೇಕ ರಾಷ್ಟ್ರಗಳು ನೂರಾರು ಕೋಟಿ ರೂ. ವ್ಯಯಿಸುತ್ತಿದೆ. ಆದರೆ, ಭಾರತ ಸರಕಾರ ವಾರ್ಷಿಕ ಕೇವಲ 66 ಬಿಲಿಯನ್‌ ಯುಎಸ್‌ ಡಾಲರ್‌ಗಳನ್ನು ಬಜೆಟ್‌ನಲ್ಲಿ ಘೋಷಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಒತ್ತು ನೀಡುವವರೆಗೂ ದೇಶದ ಅಭಿವೃದ್ಧಿ ಸಾಧ್ಯವಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಪಿಯುಸಿಯಲ್ಲಿ ಗರಿಷ್ಠ ಅಂಕಗಳಿಸಿದವರಲ್ಲಿ ಶೇ. 50ರಷ್ಟು ವೈದ್ಯಕೀಯ, ಇಂಜಿನಿಯರಿಂಗ್‌ ಆಯ್ದುಕೊಂಡರೆ, ಶೇ. 30ರಷ್ಟು ವಾಣಿಜ್ಯ, ಕಲಾ ಪದವಿಗೆ ಪ್ರವೇಶ ಪಡೆಯುತ್ತಾರೆ. ಇನ್ನುಳಿದಂತೆ ಶೇ. 20ರಷ್ಟು ವಿದ್ಯಾರ್ಥಿಗಳು ಬಿಎಸ್‌ಸಿ ಪ್ರವೇಶ ಪಡೆಯುತ್ತಾರೆ. ಹೀಗಾಗಿ ಮೂಲ ವಿಜ್ಞಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧನೆಗಳಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮೂಲ ವಿಜ್ಞಾನ ಕಲಿಕೆ, ಸಂಶೋಧನೆಯಲ್ಲಿ ತೊಡಗುವವರಿಗೆ ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಶಿಷ್ಯವೇತನ ನೀಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಇಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಹೊರತಾಗಿ ಮಾನವನ ಜೀವನವನ್ನು ಊಹಿಸಿಕೊಳ್ಳಲೂ ಅಸಾಧ್ಯ. ಆರೋಗ್ಯ, ಕೃಷಿ, ಆಹಾರದಲ್ಲೂ ವಿಜ್ಞಾನ ಹಾಸುಹೊಕ್ಕಾಗಿದೆ. ಬ್ಯಾಂಕಿಂಗ್‌, ಇ-ಆಡಳಿತ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ಕೆಲ ಕಾರ್ಯಗಳಲ್ಲಿ ಇಂಟರ್‌ ನೆಟ್‌, ತಂತ್ರಜ್ಞಾನದ ಬಳಕೆ ಹೆಚ್ಚಿದೆ . ಆದರೆ, ಇವುಗಳಿಂದಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆಯೂ ಜಾಗೃತರಾಗಬೇಕು. ಇಂಟರನೆಟ್‌, ಮೊಬೈಲ್‌ಗ‌ಳ ಉಪಯೋಗಕ್ಕಿಂತ ದುರುಪಯೋಗ ಹೆಚ್ಚುತ್ತಿದು, ಈ ಕುರಿತು ವಿದ್ಯಾರ್ಥಿಗಳು, ಪೋಷಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು. ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ತಾಪಂ ಅಧ್ಯಕ್ಷ ಮೋಹನ ದುರ್ಗಣ್ಣವರ, ಉಪಾಧ್ಯಕ್ಷೆ ಸುಜಾತಾ ಖಂಡು, ನಗರಸಭೆ ಅಧ್ಯಕ್ಷೆ ಸುರೇಶ್‌ ಕಟ್ಟಿಮನಿ, ಡಿಡಿಪಿಐ ಜಿ.ಎಲ್‌. ಬಾರಟಕ್ಕೆ, ಡಯಟ್‌ ಪ್ರಾಚಾರ್ಯ ಎಚ್‌.ಎಂ. ಖಾನ್‌ ಇದ್ದರು.

Advertisement

ಕಾಟಾಚಾರಕ್ಕೆ ನಡೆಯಿತು ಉದ್ಘಾಟನೆ 
ರಾಜ್ಯ ಸರಕಾರ, ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿರುವ ಪ್ರೌಢಶಾಲೆಗಳ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ನಡೆದ ಉದ್ಘಾಟನಾ ಸಮಾರಂಭ ಕಾಚಾರಕ್ಕೆ ಎನ್ನುವಂತೆ ಭಾಸವಾಯಿತು. ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಅವರೊಬ್ಬರೊನ್ನು ಹೊರತುಪಡಿಸಿದರೆ ಸಮಾರಂಭದ ಉದ್ಘಾಟನೆ ಮತ್ತು ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್‌.ಕೆ. ಪಾಟೀಲ ಸೇರಿದಂತೆ ಜಿಲ್ಲೆಯ ನಾಲ್ವರು ಶಾಸಕರು, ಇಬ್ಬರು ಸಂಸದರು, ಮೂವರು ವಿಧಾನ ಪರಿಷತ್‌ ಸದಸ್ಯರು, ಜಿ.ಪಂ. ಅಧ್ಯಕ್ಷರೂ ಗೈರು ಆಗಿದ್ದರು. ಅವರೊಂದಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು, ಅಪರ ಆಯುಕ್ತರೂ ಪಾಲ್ಗೊಳ್ಳದಿರುವ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ತಮ್ಮ ಭಾಷಣದಲ್ಲಿ ಬೇಸರ ವ್ಯಕ್ತಪಡಿಸಿದರು.

ಗದುಗಿನ ಗುರುಬಸವ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವ್ಯವಸಾಯ ಮತ್ತು ಸಾವಯವ ಕೃಷಿ, ಆರೋಗ್ಯ ಮತ್ತು ನೈರ್ಮಲ್ಯ, ಸಂಪನ್ಮೂಲ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ವಿನ್ಯಾಸದಲ್ಲಿ ಗಣಿತ ಶಾಸ್ತ್ರದ ಬಳಕೆ ಹಾಗೂ ಸಾರಿಗೆ ಮತ್ತು ಸಂಪರ್ಕ ಈ ವಿಷಯಗಳ ಕುರಿತು ರಾಜ್ಯದ ವಿವಿಧ ಶೈಕ್ಷಣಿಕ ಜಿಲ್ಲೆಗಳಿಂದ ಆಗಮಿಸಿರುವ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡಗಳು ಪ್ರಾತ್ಯಕ್ಷಿಕೆ ಪ್ರದರ್ಶಿಸುತ್ತಿದ್ದಾರೆ. ಡಿ. 29ರಿಂದ ಡಿ.31ರ ವರೆಗೆ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಸ್ತು ಪ್ರದರ್ಶನ ಹಾಗೂ ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next