ಗದಗ: ಎಲ್ಲೆಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸರಕಾರಿ ಹಾಗೂ ಖಾಸಗಿ ವಲಯದ ವೈದ್ಯರಿಂದ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‌ಮೆಂಟ್) ಕಿಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿವೆ. ಆದರೆ ಪೂರೈಕೆಯಿಲ್ಲದ್ದರಿಂದ ಅವುಗಳ ಬೆಲೆಯೂ ಗಗನಕ್ಕೇರಿದೆ. ಪರಿಸ್ಥಿತಿ ಅರಿತ ಸ್ಥಳೀಯ ಐಎಂಎ, ಜಿಮ್ಸ್ ಆಸ್ಪತ್ರೆಯ ವೈದ್ಯರು ಸ್ಥಳೀಯ ಟೇಲರ್‌ಗಳ ನೆರವಿನಿಂದ ಪಿಪಿಇ ತಯಾರಿಕೆಗೆ ಮುಂದಾಗಿದ್ದಾರೆ.
ಸಾಮಾನ್ಯವಾಗಿ 700 ರೂ.ಗೆ ದೊರೆಯುತ್ತಿದ್ದ ಅಜ್ಮಸ್ ಸೂಟ್‌ಗಳು 2000-2500 ರೂ. ಬೆಲೆಯಲ್ಲಿ ಮಾರಾಟಗೊಳ್ಳುತ್ತಿದ್ದವು. ಇದನ್ನರಿತು ಡಾ| ಪವನ್ ಪಾಟೀಲ ಮುಂದಾಳತ್ವದಲ್ಲಿ ಪಿಪಿಇ ಕಿಟ್ ತಯಾರಿಸಲಾಗುತ್ತಿದೆ. ವೈದ್ಯಕೀಯ ನಿಯಮಾವಳಿಯಂತೆ 50-60 ಜಿಎಸ್‌ಎಂ ಗಾತ್ರದ ಹಳದಿ, ಕೆಂಪು ಹಾಗೂ ನೀಲಿ ಬಣ್ಣದ ಬಟ್ಟೆಗಳನ್ನು ಹುಬ್ಬಳ್ಳಿಯಿಂದ ಖರೀದಿಸಲಾಗಿದೆ. ಐಎಂಎ ಗುರುತಿಸಿದ ಸ್ಥಳದಲ್ಲಿ ಸುಮಾರು 20 ಟೈಲರ್‌ಗಳು ತಲೆಗೆ ಶೀಲ್ಡ್ ಸಹಿತ ಅಜ್ಮಸ್ ಸೂಟ್ ಹೊಲಿಯುತ್ತಿದ್ದಾರೆ. ಇನ್ನುಳಿದಂತೆ ಕಾಲು ಚೀಲಗಳನ್ನು ಎನ್.ಬಿ. ಆಸ್ಪತ್ರೆಯಿಂದ ತಯಾರಿಸಲಾಗುತ್ತಿದೆ. ಅದರೊಂದಿಗೆ ಎನ್.ಬಿ. ಪಾಟೀಲ ಆಸ್ಪತ್ರೆಯಿಂದ ದಪ್ಪ ಗಾತ್ರ ಪ್ಲಾಸ್ಟಿಕ್ ಬಳಸಿ ಕಾಲು ಚೀಲಗಳನ್ನು ತಯಾರಿಸುತ್ತಿದ್ದಾರೆ. ವೈದ್ಯರು ಧರಿಸಬೇಕಾದ ಕನ್ನಡಕಗಳನ್ನು ಹುಬ್ಬಳ್ಳಿಯಿಂದ ತಂದಿದ್ದಾರೆ. ಹೀಗೆ ಒಟ್ಟುಗೂಡಿಸಿ ಪಿಪಿಇ ಕಿಟ್‌ಗಳನ್ನು ತಯಾರಿಸುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಪಿಪಿಇ ಕಿಟ್ ತಯಾರಿಕೆ ಆರಂಭವಾಗಿದ್ದು, ಪ್ರತಿನಿತ್ಯ 250ರಿಂದ 300 ಕಿಟ್‌ಗಳನ್ನು ತಯಾರಿಸಲಾಗುತ್ತಿದ್ದು, ವಿವಿಧ ರಾಜ್ಯಗಳ ಆಸ್ಪತ್ರೆಯಿಂದಲೂ ಬೇಡಿಕೆ ಬರುತ್ತಿದೆ.
ಕೋವಿಡ್ ಸೇರಿದಂತೆ ವೈರಾಣು ಹರಡುವ ಗಂಭೀರ ಸ್ವರೂಪದ ಕಾಯಿಲೆ ಇರುವ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್ ಬೇಕು. ಈ ಕಿಟ್‌ಗಳು ಮರು ಬಳಸಲಾಗದು. ಒಮ್ಮೆ ಬಳಸಿದ ನಂತರ ಅವುಗಳನ್ನು ವೈಜ್ಞಾನಿಕವಾಗಿ ನಾಶಪಡಿಸಲಾಗುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಿಟ್‌ಗಳು ಬೇಕಾಗುತ್ತವೆ.
ಸದ್ಯ ಎಲ್ಲೆಡೆ ಅಜ್ಮಸ್ ಸೂಟ್‌ಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ನಮ್ಮಲ್ಲೇ ತಯಾರಿಸುತ್ತಿದ್ದೇವೆ. ನಮ್ಮ ವೈದ್ಯಕೀಯ ಮಾರ್ಗಸೂಚಿಗಳಂತೆ ನಾವು ವಿವಿಧ ರೀತಿಯಲ್ಲಿ ಬಟ್ಟೆ ಹಾಗೂ ಇನ್ನಿತರೆ ವಸ್ತುಗಳನ್ನು ಪ್ರಯೋಗಕ್ಕೆ ಒಳಡಿಸಿದ್ದೇವೆ. ಅವು ತೇವಾಂಶ ಹೀರಿಕೊಳ್ಳದ ಹಾಗೂ ಒಂದು ಕಡೆಯಿಂದ ಇನ್ನೊಂದು ಕಡೆ ವರ್ಗಾಹಿಸುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದೇವೆ. ಆದರೂ, ಕೊಯಮತ್ತೂರು ಮೂಲದ ಐಎಎಸ್‌ಒ ಪ್ರಮಾಣ ಪತ್ರ ಪಡೆಯಬೇಕು. ಆದರೆ ಅಗತ್ಯ ಸಂದರ್ಭದಲ್ಲಿ ಏನೂ ಇಲ್ಲ ಎನ್ನುವುದಕ್ಕಿಂತ ಇದನ್ನು ಬಳಸಬಹುದು ಎಂಬುದು ನಮ್ಮ ಉದ್ದೇಶ.
ಡಾ| ಪವನ್ ಪಾಟೀಲ,
ಪಿಪಿಇ ಕಿಟ್ ತಯಾರಿಕೆಯ ರೂವಾರಿ
ವಿಶೇಷ ವರದಿ