Advertisement
ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆ ಕುರಿತ ಪ್ರಗತಿ ಪರಿಶೀಲಿಸಲಾಯಿತು. ಈ ವೇಳೆ ಮಾತನಾಡಿದ ಜಿ.ಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಜಿಲ್ಲೆಯ ಅನೇಕ ಸರಕಾರಿ ಶಾಲೆಗಳ ಮೂರನೇ ತರಗತಿ ವಿದ್ಯಾರ್ಥಿಗಳಿಗೆ ಅಆಇಈ, ಒಂದೆರಡು ಅಂಕಿಗಳೂ ಹೇಳಲು ಬರುತ್ತಿಲ್ಲ. ಖಾಸಗಿ ಶಾಲೆಗಳ ಎಲ್‌ಕೆಜಿ ಮಕ್ಕಳನ್ನು ನಾಲ್ಕನೇ ಅವೆಲ್ಲವನ್ನೂ ಓದುತ್ತವೆ ಎಂದರು.
Related Articles
ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುರಿತು ಪ್ರಗತಿ ಪರಿಶೀಲನೆ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ ಅವರು ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಕಳೆದ ತಿಂಗಳು ಖಾಸಗಿ ಸಂಸ್ಥೆ ಅನಧಿಕೃತವಾಗಿ ನಡೆಸಿದ ‘ಸ್ವರ್ಣಬಿಂದು’ ಪ್ರಾಶನ ಶಿಬಿರದ ಬಗ್ಗೆ ಅಧ್ಯಕ್ಷರ ಗಮನ ಸೆಳೆದರು.
Advertisement
ಸಭೆಗೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ, ಸೃಷ್ಟಿ ಎಂಬ ಸಂಸ್ಥೆ ಅನಧಿಕೃತವಾಗಿ ಮೆಣಸಗಿಯಲ್ಲಿ ಸ್ವರ್ಣ ಬಿಂದು ಲಸಿಕೆ ಹಾಕಿರುವುದು ಗೊತ್ತಾಗಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ ಮಾತನಾಡಿ, ಸರಕಾರದಿಂದ ಉಚಿತವಾಗಿ ಸ್ವರ್ಣ ಬಿಂದು ಪ್ರಾಶನ ಕಾರ್ಯಕ್ರಮವಿದ್ದರೂ, ಖಾಸಗಿ ಸಂಸ್ಥೆಗಳು ಜನರಿಂದ ಹಣ ಪಡೆದು, ಲಸಿಕೆ ಹಾಕುತ್ತಾರೆ. ಅದರ ಗುಣಮಟ್ಟದ ಬಗ್ಗೆ ನಮಗೆ ಖಾತ್ರಿಯಾಗದು. ಸಂಸ್ಥೆ ವಿರುದ್ಧ ದೂರು ನೀಡಲು ತಮ್ಮಿಂದ ಸುತ್ತೋಲೆ ಹೊರಡಿಸಬೇಕು ಎಂದು ಕೋರಿದರು.
ಅದಕ್ಕೆ ಸ್ಪಂದಿಸಿದ ಜಿಪಂ ಸಿಇಒ ಮಂಜುನಾಥ ಚವ್ಹಾಣ, ಡಿಎಚ್ಒ ಮತ್ತು ಆಯುಷ್ ಅಧಿಕಾರಿಗಳು ಒಟ್ಟಾಗಿ ಸೃಷ್ಟಿ ಸಂಸ್ಥೆ ವಿರುದ್ಧ ಪೊಲೀಸರಿಗೆ ದೂರು ನೀಡಬೇಕು. ಅದರೊಂದಿಗೆ ಇಂಥ ಸಂಸ್ಥೆಗಳಿಗೆ ಸಹಕರಿಸದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆದೇಶ ಹೊರಡಿಸುವಂತೆ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ ಅಧ್ಯಕ್ಷ ಎಸ್.ಪಿ.ಬಳಿಗಾರ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು 8 ಸಾವಿರ ರೈತರ ಜಮೀನು ಒಣ ಬೇಸಾಯವಿದ್ದು, ನೀರಾವರಿ ಎಂದು 2016ರ ಬೆಳೆ ಹಾನಿ ಸಮೀಕ್ಷೆ ಸಂದರ್ಭದಲ್ಲಿ ತಪ್ಪಾಗಿ ನಮೂಸಿದ್ದರಿಂದ ರೈತರ ಬೆಳೆ ವಿಮೆಯಿಂದ ವಂಚಿತರಾಗುತ್ತಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು. ಜಿಲ್ಲೆಯ ಮಲಪ್ರಭಾ ನೀರಾವರಿ ಕಾಲುವೆಗಳಲ್ಲಿ ಹೂಳೆತ್ತಿ, ತಾತ್ಕಾಲಿಕ ದುರಸ್ತಿಗೊಳಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ನರಗುಂದ ಉಪವಿಭಾಗದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆ ಅಭಿವೃದ್ಧಿಗಾಗಿ ಸಣ್ಣ ನೀರಾವರಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗಳಡಿ ಪ್ರದೇಶ, ರಸ್ತೆ ಗುರುತಿಸುವಾಗ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ವಿವಿಧ ಇಲಾಖೆಗಳ ಸೌಲಭ್ಯ ಪಡೆಯುವ ಫಲಾನುಭವಿಗಳ ಅಂತಿಮ ಪಟ್ಟಿಯ ಪ್ರತಿಯನ್ನು ಜನಪ್ರತಿನಿಧಿಗಳಿಗೆ ನೀಡಲು ಕ್ರಮ ಜರುಗಿಸಬೇಕು ಎಂದು ಸ್ಥಾಯಿ ಸಮಿತಿ ಸದಸ್ಯರು ಆಗ್ರಹಿಸಿದರು.
ಪರಿಸರ ಬೆಳೆಸುವ ಟ್ರೀ ಪಾರ್ಕ್ ಯೋಜನೆಯ ಮಾರ್ಗದರ್ಶಿ ಸೂತ್ರಗಳನ್ವಯ ನಗರ ಪ್ರದೇಶದ 5 ಕಿಮೀ ವ್ಯಾಪ್ತಿಯಲ್ಲಿ ಜಿಲ್ಲೆಯ ಬಿಂಕದಕಟ್ಟಿ, ನರಗುಂದ ಹಾಗೂ ತಡಕೋಡಗಳಲ್ಲಿ ಟ್ರೀ ಪಾರ್ಕ್ ಬೆಳೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.
ಅರಣ್ಯ ಹಕ್ಕು ಪತ್ರ ನೀಡುವ ಪ್ರಕ್ರಿಯೆಯನ್ನು ಜಿಲ್ಲಾಮಟ್ಟದ ಸಮಿತಿ ಆದಷ್ಟು ಬೇಗನೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಸಮಿತಿ ಸದಸ್ಯ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.
ಗ್ರಾಮಿಣ ಕುಡಿಯುವ ನೀರು, ಕೃಷಿ, ತೋಟಗಾರಿಕೆ, ಹಿಂದುಳಿದ ವರ್ಗ, ವಿವಿಧ ನಿಗಮ, ಹೆಸ್ಕಾಂ, ರೇಷ್ಮೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಜರುಗಿತು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ, ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ, ಜಿಪಂ ಉಪಕಾರ್ಯದರ್ಶಿ ಡಿ.ಪ್ರಾಣೇಶ, ಯೋಜನಾಧಿಕಾರಿ ಬಿ.ಆರ್. ಪಾಟೀಲ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಸಾಕಷ್ಟು ಅನುದಾನ, ಶಿಕ್ಷಕರಿಗೆ ಕೈ ತುಂಬ ಸಂಬಳ ಹಾಗೂ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸಲು ಹತ್ತು ಹಲವು ಯೋಜನೆ ಜಾರಿಗೊಳಿಸಿದೆ. ಆದರೂ, ಸರಕಾರಿ ಶಾಲಾ ಮಕ್ಕಳು ಕಲಿಕೆಯಲ್ಲಿ ಸಾಕಷ್ಟು ಹಿಂದಿದ್ದಾರೆ. ಶಿಕ್ಷಣ ಗುಣಮಟ್ಟ ಸುಧಾರಣೆಗಾಗಿ ಕಾಲಕಾಲಕ್ಕೆ ಇಲಾಖೆ ಅಧಿಕಾರಿಗಳು ಶಿಕ್ಷಕರಿಗೆ ಸೂಚಿಸಬೇಕು.· ಶಕುಂತಲಾ ಮೂಲಿಮನಿ, ಜಿ.ಪಂ ಉಪಾಧ್ಯಕ್ಷೆ. ಸರಕಾರಿ ಶಾಲೆಗಳ ಎಸ್‌ಡಿಎಂಸಿಗಳು ಶಾಲಾ ಕಟ್ಟಡ, ಅನುದಾನ ಬಳಕೆಗಿನ ಆಸಕ್ತಿಯನ್ನು ಮಕ್ಕಳ ಕಲಿಕೆಯತ್ತ ತೋರುತ್ತಿಲ್ಲ. ಎಸ್‌ಡಿಎಂಸಿಗಳಿಂದಾಗಿ ಅನೇಕ ಶಾಲೆಗಳು ರಾಜಕೀಯ ತಲೆ ಎತ್ತಿರುವುದು ನೋವಿನ ಸಂಗತಿ.
ಈರಪ್ಪ ಈಶ್ವರಪ್ಪ ನಾಡಗೌಡ್ರ,
ಸ್ಥಾಯಿ ಸಮಿತಿ ಅಧ್ಯಕ್ಷ.