Advertisement

ಚುರುಕುಗೊಂಡ ಕೆಲಸ ಕಾರ್ಯ

02:22 PM Apr 24, 2020 | Suhan S |

ಗದಗ: ರಾಜ್ಯ ಸರಕಾರ ಕೆಂಪು ವಲಯವನ್ನು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಲ್ಲಿ ಸಡಿಲಿಕೆ ನೀಡಿದೆ. ಹೀಗಾಗಿ ಗುರುವಾರ ಸರಕಾರ ನೀಡಿದ ಸಡಿಲಿಕೆಯಿಂದ ಸಣ್ಣಪುಟ್ಟ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕೆಲಸ ಕಾರ್ಯಗಳು ಗರಿಗೆದರಿವೆ. ಆದರೆ ಜನ ಸಂಚಾರ, ವ್ಯಾಪಾರದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬರಲಿಲ್ಲ.

Advertisement

ಜಿಲ್ಲೆಯಲ್ಲಿ ನಾಲ್ಕು ಕೋವಿಡ್ 19 ಪ್ರಕರಣಗಳು ದೃಢಪಟ್ಟಿದ್ದು, ಎಲ್ಲವೂ ಗದಗ ನಗರದ ರಂಗನವಾಡ ಪ್ರದೇಶದಲ್ಲೇ ಕಂಡುಬಂದಿವೆ. ಹೀಗಾಗಿ ಜಿಲ್ಲೆಯ ಇನ್ನುಳಿದ ಪ್ರದೇಶಗಳಲ್ಲಿ ಕೋವಿಡ್ 19  ಭೀತಿ ಅಷ್ಟಿಲ್ಲ. ಹೀಗಾಗಿ ಗುರುವಾರ ಸರಕಾರ ಜಾರಿಗೊಳಿಸಿದ ಲಾಕ್‌ಡೌನ್‌ ವಿನಾಯಿತಿ ಹೆಚ್ಚಿನ ಪರಿಣಾಮ ಬೀರಲಿಲ್ಲ.

ಮಾರುಕಟ್ಟೆಯಲ್ಲಿ ಜನರು ಗುಂಪು ಸೇರುವುದನ್ನು ತಪ್ಪಿಸಲು ಈಗಾಗಲೇ ದವಸ-ಧಾನ್ಯ ಮಾರುಕಟ್ಟೆ ಬಂದ್‌ ಮಾಡಿರುವ ಜಿಲ್ಲಾಡಳಿತ, ವಾರ್ಡ್‌ ವಾರು ತರಕಾರಿ ಮಾರಾಟಕ್ಕೆ ಅವಕಾಶ ನೀಡಿದೆ. ಎರಡು ದಿನಕ್ಕೊಮ್ಮೆ ತರಕಾರಿ ಸಗಟು ಮಾರಾಟಕ್ಕೆ ವ್ಯವಸ್ಥೆ ಮಾಡಿದೆ. ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿರುವ ಕಿರಾಣಿ ಅಂಗಡಿಗಳಲ್ಲಿ ಜನರು ಗುಂಪು ಸೇರದಿರಲಿ ಎಂದು ವಾರದಲ್ಲಿ ಎರಡು ದಿನ(ಬುಧವಾರ, ಶನಿವಾರ) ಚಿಲ್ಲರೆ ಮಾರಾಟಕ್ಕೆ ಅನುಮತಿ ನೀಡಿದೆ. ಅದರಂತೆ ಜನರು ಬುಧವಾರವಷ್ಟೇ ಕಿರಾಣಿ ಖರೀದಿಸಿದ್ದರು. ಹೀಗಾಗಿ ಗುರುವಾರ ನಾಮಜೋಶಿ ರಸ್ತೆಯಲ್ಲಿರುವ ಕಿರಾಣಿ ಅಂಗಡಿಗಳು ಬಾಗಿಲು ತೆರೆಯಲಿಲ್ಲ. ಇನ್ನುಳಿದಂತೆ ಮನೆಯ ಸಮೀಪದಲ್ಲಿರುವ ಕಿರಾಣಿ ಅಂಗಡಿಗಳು ಹಾಗೂ ತರಕಾರಿ ಮಾರಾಟ ಎಂದಿನಂತೆ ಕಂಡು ಬಂದಿತು.

ಕಡಲೆ ಆವಕ ಹೆಚ್ಚಳ: ಲಾಕ್‌ಡೌನ್‌ ನಿಂದಾಗಿ ಮುಂಬರುವ ದಿನಗಳಲ್ಲಿ ಆಹಾರ ಧಾನ್ಯಕ್ಕೆ ಕೊರತೆಯಾಗದಿರಲಿ ಎಂಬ ಉದ್ದೇಶದಿಂದ ವಾರದಿಂದ ಜಿಲ್ಲಾಡಳಿತ ಸ್ಥಳೀಯ ಎಪಿಎಂಸಿ ವರ್ತಕರಿಗೆ ಷರತ್ತು ಬದ್ಧ ವಿನಾಯಿತಿ ನೀಡಿದೆ. ಗುರುವಾರದಿಂದ ಲಾಕ್‌ ಡೌನ್‌ ಸಡಿಲಿಕೆ ಆಗಿದ್ದರಿಂದ ಹಿಂದಿನ ದಿನಗಳಿಗಿಂತ ಕಡಲೆ ಹೆಚ್ಚು ಪ್ರಮಾಣದಲ್ಲಿ ಆವಕವಾಗಿದೆ. ಲಾಕ್‌ಡೌನ್‌ ಸಡಿಲಿಕೆಯ ಮೊದಲ ದಿನವೇ ಗದಗ ಎಪಿಎಂಸಿಗೆ 4237 ಕ್ವಿಂಟಾಲ್‌ ಆವಕವಾಗಿದ್ದು, 1509 ಕನಿಷ್ಠ ಹಾಗೂ 4112 ಗರಿಷ್ಠ ಬೆಲೆಗೆ ಮಾರಾಟವಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡ ಕಾಮಗಾರಿ ಶುರು: ಸಂಪೂರ್ಣ ಸ್ಥಗಿತಗೊಂಡಿದ್ದ ಕಟ್ಟಡ ಕಾಮಗಾರಿಗಳು, ಎಲೆಕ್ಟ್ರಿಕಲ್‌ ಕೆಲಸಗಳು ಆಮೆಗತಿಯಲ್ಲಿ ಶುರುವಾಗಿವೆ. ಇಲ್ಲಿನ ಡಂಬಳ ಕಾನಾ, ಸ್ವಾಮಿ ವಿವೇಕಾನಂದ ನಗರ, ಹುಡ್ಕೊ ಕಾಲೋನಿ ಸೇರಿದಂತೆ ವಿವಿಧೆಡೆ ಬೆರಳೆಣಿಕೆಯಷ್ಟು ಕಟ್ಟಡ ಕಾಮಗಾರಿಗಳು ಆರಂಭಗೊಂಡಿದ್ದವು. ಆದರೆ ಕೊರೊನಾ ಭಯದಿಂದ ಹೆಚ್ಚಿನ ಕಾರ್ಮಿಕರು ಕೆಲಸಕ್ಕೆ ಬರುವ ಸಾಧ್ಯತೆಗಳಿಲ್ಲ ಎಂದು ಗುತ್ತಿಗೆದಾರರೊಬ್ಬರು ತಿಳಿಸಿದರು.

Advertisement

ಲಾಕ್‌ಡೌನ್‌ನಿಂದ ತುರ್ತು ಕೆಲಸಗಳಿಗೆ ಸಡಿಲಿಕೆ ಸಿಕ್ಕಿದ್ದರೂ ಬೇಕಾಬಿಟ್ಟಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಹೀಗಾಗಿ ನಗರದ ಹಳೇ ಡಿಸಿ ಕಚೇರಿ ಸರ್ಕಲ್‌, ಮುಳಗುಂದ ನಾಕಾ, ರೋಟರಿ ಸರ್ಕಲ್‌ನಲ್ಲಿ ವಾಹನಗಳ ತಪಾಸಣೆ ಬಿಗಿಯಾಗಿತ್ತು. ಈ ವೇಳೆ ಅನತ್ಯವಾಗಿ ಸಂಚರಿಸುತ್ತಿದ್ದವರ ಬೈಕ್‌ಗಳನ್ನು ವಶಕ್ಕೆ ಪಡೆಯಲಾಯಿತು. ಇನ್ನುಳಿದಂತೆ ಇತ್ತೀಚೆಗೆ ಜಿಲ್ಲೆಯಲ್ಲಿ ಒಂದೆರಡು ದೊಡ್ಡ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ.

Advertisement

Udayavani is now on Telegram. Click here to join our channel and stay updated with the latest news.

Next