ಗದಗ: ಹವಾಮಾನ ವೈಪರಿತ್ಯ ಹಾಗೂ ಬರಗಾಲ ಮಧ್ಯೆಯೂ ಈ ಬಾರಿ ಜಿಲ್ಲೆಯಲ್ಲಿ ಹಣ್ಣುಗಳ ರಾಜ ಮಾವು ಬಂಪರ್ ಬೆಳೆ ನಿರೀಕ್ಷಿಸಲಾಗಿದೆ. ಎಲ್ಲೆಡೆ ಮಾವಿನ ಗಿಡಗಳಲ್ಲಿ ಹೂವು ಅರಳುತ್ತಿದ್ದು, ಅಲ್ಲಲ್ಲಿ ಕಾಯಿ ಕಟ್ಟುತ್ತಿವೆ. ಮಾವು ಬೆಳೆಗಾರರ ಮೊಗದಲ್ಲೀಗ ಮಂದಹಾಸ ಮೂಡಿಸಿದೆ.
ಕೆಲವೇ ದಿನಗಳ ಹಿಂದೆ ಎಲೆಗಳು ಉದುರಿ, ಬೋಳಾಗಿದ್ದ ಮಾವಿನ ಮರಗಳು ಇದೀಗ ವಸಂತ ಋತುಕಾಲದಲ್ಲಿ ಹೊಸ ಚಿಗುರಿನಿಂದ ಕಂಗೊಳಿಸುತ್ತಿದೆ. ಅದರೊಂದಿಗೆ ಮಾವಿನ ಮರಗಳಲ್ಲಿ ಹೂವು ಬಿಡಲಾರಂಭಿಸಿದ್ದು, ಅಲ್ಲಲ್ಲಿ ಕಾಯಿ ಕಟ್ಟುತ್ತಿವೆ.
ಕಳೆದ ವರ್ಷ ನಾನಾ ಕಾರಣಗಳಿಂದ ಆರ್ಥಿಕ ನಷ್ಟ ಅನುಭವಿಸಿದ್ದ ಮಾವು ಬೆಳೆಗಾರರಿಗೆ ಈ ಬಾರಿ ಮಾವು ಕೈ ಹಿಡಿಯುವ ಸಾಧ್ಯತೆಗಳಿವೆ. ಹೂವುಗಳೆಲ್ಲವೂ ಕಾಯಿ ಕಟ್ಟಲು ಸಾಧ್ಯವಿಲ್ಲದಿದ್ದರೂ, ಶೇ.75ರಷ್ಟು ಹೂವುಗಳಲ್ಲಿ ಕಾಯಿ ಕಟ್ಟುತ್ತವೆ. ಆದರೆ, ಕೊನೆ ಗಳಿಗೆಯಲ್ಲಿ ಬೆಳೆಗೆ ಯಾವುದೇ ರೋಗ ಬಾರದಿರಲೆಂದು ಮಾವು ಬೆಳೆಗಾರರು ಪ್ರಕೃತಿ ಮಾತೆಯಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಎಲ್ಲೆಲ್ಲಿ ಮಾವು ಬೆಳೆ?: ಮಾವು ಉಷ್ಣವಲಯದ ಬೆಳೆಯಾಗಿರುವುದರಿಂದ ಜಿಲ್ಲೆಯಲ್ಲಿ ಸವಳು ಭೂಮಿ ಹೊರತುಪಡಿಸಿ ನೀರು ಬಸಿದು ಹೋಗುವ ಕೆಂಪು ಮಣ್ಣಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಕೆಲವು ರೈತರು ಮಾತ್ರ ಮಳೆ ಆಶ್ರಯದಲ್ಲಿ ಮಾವು ಬೆಳೆದಿದ್ದು, ಹೆಚ್ಚಿನ ರೈತರು ನೀರಾವರಿ ಆಶ್ರಯದಲ್ಲೇ ಮಾವು ಬೆಳೆದಿದ್ದಾರೆ. ಮುಂಡರಗಿ ಭಾಗದ ರೈತರು ತುಂಗಭದ್ರಾ ನದಿ ನೀರಿನಲ್ಲಿಯೇ ಮಾವು ಬೆಳೆ ಬೆಳೆಯುವ ಮೂಲಕ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಗದಗ ತಾಲೂಕಿನಲ್ಲಿ ಹುಲಕೋಟಿ, ಕುರ್ತಕೋಟಿ, ದುಂದೂರನಲ್ಲಿ ಸೇರಿದಂತೆ ಒಟ್ಟು 800 ಹೆಕ್ಟೇರ್, ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಹಮ್ಮಿಗಿ, ನಾಗರಳ್ಳಿ, ಹೆಸರೂರು ಸೇರಿ 184 ಹೆಕ್ಟೇರ್, ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ, ಬಾಲೆಹೊಸೂರ, ಶಿಗ್ಲಿ ಸೇರಿ 128 ಹೆಕ್ಟೇರ್, ರೋಣ ತಾಲೂಕಿನ ನರೇಗಲ್, ಗಜೇಂದ್ರಗಡ, ರಾಜೂರು, ಕುಂಟೋಜಿ ಸೇರಿದಂತೆ ಒಟ್ಟು 100 ಹೆಕ್ಟೇರ್ ಮತ್ತು ನರಗುಂದ ತಾಲೂಕಿನ 35 ಹೆಕ್ಟೇರ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1247 ಹೆಕ್ಟೇರ್ ಮಾವು ಪ್ರದೇಶ ಹೊಂದಿದೆ. ವಾರ್ಷಿಕವಾಗಿ ಅಂದಾಜು 10 ಸಾವಿರ ಟನ್‌ಗಳಷ್ಟು ಇಳುವರಿ ಬರುತ್ತಿದ್ದು, ಸುಮಾರು 20 ಕೋಟಿಯಷ್ಟು ವರಮಾನ ತರುತ್ತಿದೆ. ಅಲ್ಲದೇ ಜಿಲ್ಲೆಯ ಒಣ ಹವಾಗುಣಕ್ಕೆ ಹೊಂದಿಕೊಳ್ಳುವ ಮಾವು ಕ್ಷೇತ್ರ ಮತ್ತು ಉತ್ಪಾದನೆ ವರ್ಷದಿಂದ ವರ್ಷ ವಿಸ್ತಾರಗೊಳ್ಳುತ್ತಿದೆ ಎಂಬುದು ಗಮನಾರ್ಹ.
ಉತ್ಕೃಷ್ಟ ಗುಣಮಟ್ಟದ ಹಣ್ಣು ಪಡೆಯಲು ಪೋಷಕಾಂಶಗಳ ನಿರ್ವಹಣೆ ಜತೆಗೆ ಮಾವಿನಲ್ಲಿ ಬರುವ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಕ್ರಮ ಕೈಗೊಳ್ಳುವುದು ಅಗತ್ಯ. ಹೂವು ಬಿಡುವ ಸಮಯದಲ್ಲಿ ಮಳೆ ಮತ್ತು ಮೋಡ ಕವಿದ ವಾತಾವರಣವಿದ್ದರೆ, ಬೂದು ರೋಗ ಬೀಳುವ ಅಪಾಯವಿದೆ. ಬೂದು ರೋಗ, ಜಿಗಿ ಹುಳುವಿನ ಬಾಧೆ ಸಮಸ್ಯೆ ತಲೆದೋರದಿದ್ದರೆ ಈ ಬಾರಿ ಉತ್ತಮ ಮಾವಿನ ಫಸಲು ಉತ್ತಮವಾಗಲಿದೆ. ಅಲ್ಲದೇ ಈ ಬಾರಿ ಚಳಿಗಾಲ ಮುಗಿಯುತ್ತಿದ್ದಂತೆ ಬಿಸಿಲಿನ ಪ್ರಖರ ಹೆಚ್ಚಿದೆ. ಮಾವಿನ ಉತ್ತಮ ಇಳುವರಿಗೆ ಪೂರಕ ವಾತಾವರಣವಿದ್ದು, ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಫಸಲು ಕೈ ಸೇರಬಹುದು ಎನ್ನುತ್ತಾರೆ ಮಾವು ಬೆಳೆಗಾರರು.
ಜಿಲ್ಲೆಯ ಪ್ರಮುಖ ಮಾವು ತಳಿಗಳು
ಜಿಲ್ಲೆಯಲ್ಲಿ ಅಲ್ಪಾನ್ಸೋ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಅದರೊಂದಿಗೆ ಕೇಸರ, ದಶೇರಿ, ಮಲ್ಲಿಕಾ, ತೋತಾಪುರಿ, ನೀಲಂ ಹಾಗೂ ಮತ್ತಿತರೆ ತಳಿಯ ಮಾವುಗಳನ್ನು ಬೆಳೆಯಲಾಗುತ್ತದೆ.
ಜಿಲ್ಲೆಯಲ್ಲಿ ಈಗಾಗಲೇ ಮಾವು ಬೆಳೆ ಹೂವು ಬಿಟ್ಟು ಕಾಯಿ ಕಟ್ಟುತ್ತಿವೆ. ಈ ಬಾರಿ ಬಿಸಿಲಿನ ಝಳ ಹೆಚ್ಚಿದ್ದು, ಈವರೆಗೆ ಗಂಭಿರವಾದ ಕೀಟ ಭಾದೆ ಕಾಣಿಸಿಕೊಂಡಿಲ್ಲ. ಹೀಗಾಗಿ ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಫಸಲು ಬರುವ ನಿರೀಕ್ಷೆಯಿದೆ. ಕೊನೆ ಗಳಿಕೆಯಲ್ಲಿ ಕಾಣಿಸಿಕೊಳ್ಳುವ ಕೀಟ ಭಾದೆ ಮತ್ತು ಮಾವಿನ ರೋಗಗಳನ್ನು ನಿಯಂತ್ರಿಸುವ ಬಗ್ಗೆ ಮಾವು ಬೆಳೆಗಾರರಿಗೆ ತಾಂತ್ರಿಕ ಸಲಹೆ ನೀಡಲಾಗಿದೆ.
. ಎಲ್. ಪ್ರದೀಪ,
ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ
ವೀರೇಂದ್ರ ನಾಗಲದಿನ್ನಿ