ಗದಗ: ದಕ್ಷಿಣ ಭಾರತ ಸಸ್ಯಕಾಶಿ, ಅಮೂಲ್ಯ ಔಷಧೀಯ ಸಸ್ಯ, ಜೀವ ವೈವಿದ್ಯ ಹಾಗೂ ಉತ್ಕೃಷ್ಟ ಖನಿಜ ಸಂಪತ್ತು ಹೊಂದಿರುವ ಜಿಲ್ಲೆಯ ಕಪ್ಪತ್ತಗುಡ್ಡದ ಮೇಲೆ ಮತ್ತೆ ಗಣಿಗಾರಿಕೆಯ ಕರಿನೆರಳು ಆವರಿಸತೊಡಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ನೇತೃತ್ವದಲ್ಲಿ ಸೆ. 26ರಂದು ನಡೆಯಲಿರುವ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಕಪ್ಪತ್ತಗುಡ್ಡ ವನ್ಯಧಾಮ ಘೋಷಣೆಯನ್ನು ಹಿಂಪಡೆಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ ಶುರುವಾಗಿದೆ.
Advertisement
ಪೋಸ್ಕೋ ಹೋರಾಟದ ಬಳಿಕ 2016ರಿಂದ ಕಪ್ಪತ್ತಗುಡ್ಡ ವಿಚಾರವಾಗಿ ಸರಕಾರ ಮತ್ತು ಈ ಭಾಗದ ಪರಿಸರವಾದಿಗಳ ನಡುವಿನ ಹಗ್ಗ ಜಗ್ಗಾಟ ಮುಂದುವರಿದಿದೆ. 2016ರ ಆ. 31ರಂದು ಕಪ್ಪತ್ತಗುಡ್ಡಕ್ಕೆ ಸಂರಕ್ಷಿತ ಅರಣ್ಯ ಸ್ಥಾನಮಾನ ಕಲ್ಪಿಸಿದ್ದ ಸರಕಾರ, ಅದೇ ವರ್ಷ ನ. 4ರಂದು ಹಿಂಪಡೆದಿತ್ತು. ಸರಕಾರದ ಈ ನಡೆಯನ್ನು ಖಂಡಿಸಿ ಲಿಂ| ತೋಂಟದ ಸಿದ್ಧಲಿಂಗ ಸ್ವಾಮೀಜಿ, ಎಸ್.ಆರ್. ಹಿರೇಮಠ, ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಮೂರು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆದ ಫಲವಾಗಿ ಏಪ್ರಿಲ್ 2017ರಲ್ಲಿ ಸರಕಾರ ಮತ್ತೆ ಸಂರಕ್ಷಿತ ಸ್ಥಾನ ಕಲ್ಪಿಸಿತ್ತು.
Related Articles
Advertisement
ಈ ನಡುವೆ ಎಚ್.ಡಿ. ಕುಮಾರಸ್ವಾಮಿ ಸರಕಾರ ಕಪ್ಪತ್ತಗುಡ್ಡವನ್ನು ವನ್ಯಧಾಮವನ್ನಾಗಿಸಿ ಘೋಷಿಸಿದ್ದು, ಲಾಭಿ ಕೋರರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಹೇಗಾದರೂ ಮಾಡಿ ಕಪ್ಪತ್ತಗುಡ್ಡವನ್ನು ಗಣಿಗಾರಿಕೆ ಮುಕ್ತಗೊಳಿಸಬೇಕು ಎಂಬ ಉದ್ದೇಶದಿಂದ ಇದೀಗ ಬಿಜೆಪಿ ಸರಕಾರದಲ್ಲಿ ಲಾಭಿ ನಡೆದಿದೆ ಎಂದು ಹೇಳಲಾಗಿದೆ.
ಅದಕ್ಕಾಗಿ ಹೋರಾಟದ ನೆಪದಲ್ಲಿ ಕಪ್ಪತ್ತಗುಡ್ಡ ಸೆರಗಿನಲ್ಲಿ ವಾಸಿಸುವರನ್ನು ಸರಕಾರದ ವಿರುದ್ಧ ಎತ್ತಿಕಟ್ಟು ಪ್ರಯತ್ನಗಳು ನಿರಂತರವಾಗಿದೆ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಲಿಂಗೈಕ್ಯರಾದ ಬಳಿಕ ಪ್ರಾಯೋಜಿತ ಹೋರಾಟಗಳು ಹೆಚ್ಚುತ್ತಿದ್ದು, ಅದೇ ಅರ್ಜಿಗಳನ್ನು ಮುಂದಿಟ್ಟುಕೊಂಡು ಸರಕಾರ ವನ್ಯಧಾಮ ಆದೇಶವನ್ನು ಹಿಂಪಡೆಯಬಹುದು. ಸೆ.26 ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವವನ್ಯಜೀವಿ ಮಂಡಳಿ ಸಭೆಯಲ್ಲಿ ಕಪ್ಪತ್ತಗುಡ್ಡ ವನ್ಯಧಾಮ ಡಿನೋಟಿಫಿಕೇಷನ್ ವಿಚಾರ ಪ್ರಸ್ತಾಪವಾಗಲಿದೆ ಎಂದು ಹೇಳಲಾಗುತ್ತಿದೆ.