Advertisement

ನಕಲಿ ವೈದ್ಯರ ಹಾವಳಿ: ಅಧಿಕಾರಿಗಳ ವಿರುದ್ಧ ಆಕ್ರೋಶ

10:54 AM Feb 01, 2019 | Team Udayavani |

ಗದಗ: ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಕಲಿ ಸಂಸ್ಥೆಯೊಂದು ಅನಧಿಕೃತವಾಗಿ ಮಕ್ಕಳಿಗೆ ಸ್ವರ್ಣ ಬಿಂಧು ಲಸಿಕೆ ಹಾಕಿರುವ ಪ್ರಕರಣದ ಬೆನ್ನಲ್ಲೇ ಇದೀಗ ನಕಲಿ ವೈದ್ಯರ ಹಾವಳಿ ಬೆಳೆಕಿಗೆ ಬಂದಿದೆ. ಈ ಕುರಿತು ಜಿಪಂ ಅಧ್ಯಕ್ಷ ಎಸ್‌.ಪಿ.ಬಳಿಗಾರ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಿಪಂ ಸದಸ್ಯ ವಾಸಣ್ಣ ಕುರಡಗಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸಭೆಯಲ್ಲಿ ಮಾತನಾಡಿದ ವಾಸಣ್ಣ ಕುರಡಗಿ, ಮುಂಡರಗಿ ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿ ನಕಲಿ ವೆೃದ್ಯನಿಂದ ಚಿಕಿತ್ಸೆ ಪಡೆದ ವ್ಯಕ್ತಿಯೊಬ್ಬ ಗ್ಯಾಂಗ್ರಿಂಗ್‌ಗೆ ಒಳಗಾಗಿದ್ದಾನೆ. ಕೆೃ-ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಕಲಿ ವೆೃದ್ಯನೋರ್ವ ನೀಡಿದ ತಪ್ಪು ಚಿಕಿತ್ಸೆಯೇ ಇದಕ್ಕೆ ಕಾರಣ. ಜಿಲ್ಲೆಯಲ್ಲಿ ನಕಲಿ ವೈದ್ಯರು, ವೆೃದ್ಯಕೀಯ ಸಂಸ್ಥೆಗಳ ಉಪದ್ರವ ಹೆಚ್ಚಿದ್ದು, ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಕೆೃಗೊಂಡ ಕ್ರಮವೇನು ಎಂದು ಖಾರವಾಗಿ ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಸುಜಾತಾ ಪಾಟೀಲ, ನಕಲಿ ವೈದ್ಯನ ವಿರುದ್ಧ ಈಗಾಗಲೇ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಲಾಖೆಯಿಂದ ರೋಗಿಯ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೆೃಗೊಳ್ಳಲಾಗುವುದು. ಜಿಲ್ಲೆಯ ವಿವಿಧೆಡೆ ಕೆಲ ನಕಲಿ ವೆೃದ್ಯರು ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಮೂರು ತಂಡಗಳಲ್ಲಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 8 ಜನರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ದಾಳಿಯನ್ನು ಮತ್ತಷ್ಟು ಹೆಚ್ಚಿಸಿ ನಕಲಿ ವೈದ್ಯರ ಹಾವಳಿಯನ್ನು ಸಂಪೂರ್ಣವಾಗಿ ಮಟ್ಟಹಾಕಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಬಳಿಕ ಜಿಪಂ ಅಧ್ಯಕ್ಷ ಎಸ್‌.ಪಿ. ಬಳಿಗಾರ, ಜಿಪಂ ಸಿಇಒ ಮಂಜುನಾಥ ಚವ್ಹಾಣ ಮಾತನಾಡಿ, ಹುಲಿಗುಡ್ಡ ಏತ ನೀರಾವರಿ ಯೋಜನೆಯಿಂದ ನೀರು ತುಂಬಿಸಿರುವ ಕೆರೆಗಳ ಸ್ವಚ್ಛತೆ, ದುರಸ್ತಿ ನಿರ್ವಹಣೆಗೆ ಕ್ರಮ ಕೆೃಗೊಳ್ಳಬೇಕು. ಮುಂಗಾರು ಮತ್ತು ಹಿಂಗಾರು ಮಳೆ ಕೆೃಕೊಟ್ಟಿದ್ದರಿಂದ ಎಲ್ಲೆಡೆ ಬರಗಾಲ ಆವರಿಸಿದೆ. ಡಿಬಿಒಟಿ ಮೂಲಕ ನದಿ ಮೂಲಗಳಿಂದ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಬೇಕು. ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಅಗತ್ಯವಿದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು. ಅಗತ್ಯವಿದ್ದಲ್ಲಿ ಮೇವು ಬ್ಯಾಂಕ್‌ ಹಾಗೂ ಗೋಶಾಲೆ ತೆರೆಯಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ ಎಂದು ಹೇಳಿದರು.

ಜಿಪಂ ಹೊಳೆಆಲೂರು ಕ್ಷೇತ್ರದ ಸದಸ್ಯ ಪಡಿಯಪ್ಪ ಪೂಜಾರ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ವರ್ತನೆಯಿಂದ ಜಿಲ್ಲೆಯ ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಸರಕಾರದ ಯೋಜನೆಗಳು ತಲುಪುತ್ತಿಲ್ಲ. ರೋಣ ತಾಲೂಕಿನ ಕೆಲ ಆಸ್ಪತ್ರೆಗಳಲ್ಲಿ ವೈದ್ಯರು ನಿಗದಿತ ಅವಧಿಯಲ್ಲಿ ಆಸ್ಪತ್ರೆಗೆ ಬರುತ್ತಿಲ್ಲ ಎಂದು ದೂರಿದರು. ಇದಕ್ಕೆ ಇನ್ನಿತರೆ ಸದಸ್ಯರು ಧ್ವನಿಗೂಡಿಸಿದ್ದರಿಂದ ಕೆಲಕಾಲ ಚರ್ಚೆಗೆ ಕಾರಣವಾಯಿತು.

Advertisement

ಈ ವೇಳೆ ಮಧ್ಯ ಪ್ರವೇಶಿಸಿದ ಜಿಪಂ ಅಧ್ಯಕ್ಷ ಎಸ್‌.ಪಿಬಳಿಗಾರ, ಆಸ್ಪತ್ರೆಗೆ ಬಾರದ ವೆೃದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ವೆೃದ್ಯಾಧಿಕಾರಿಗೆ ಸೂಚಿಸಿದರು.

ತಾಪಂ ಅಧ್ಯಕ್ಷ ಮೋಹನ ದುರಗಣ್ಣವರ ಮಾತನಾಡಿ, ತಾಪಂ ನೂತನ ಕಟ್ಟಡ ಕಾಮಗಾರಿ ಆರಂಭಕ್ಕೆ ವರ್ಷದ ಹಿಂದೆ ಭೂಮಿ ಪೂಜೆ ಮಾಡಲಾಗಿದೆ. ಜತೆಗೆ ಕಟ್ಟಡ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 1 ಕೋಟಿ ರೂ. ಬಿಡುಗಡೆಯಾಗಿ, ಹಣ ಸಂದಾಯವಾದರೂ, ಕಾಮಗಾರಿ ಆರಂಭವಾಗಿಲ್ಲ ಸಭೆಗೆ ದೂರಿದರು.

ಅದಕ್ಕೆ ಧ್ವನಿಗೂಡಿಸಿದ ಜಿಪಂ ಸದಸ್ಯ ವಾಸಣ್ಣ ಕುರಡಗಿ, ಆರ್ಥಿಕ ವರ್ಷದ ಕೊನೆ ಹಂತದಲ್ಲಿದ್ದರೂ, ಜಿಲ್ಲೆಯ ಹಲವೆಡೆ ವಿವಿಧ ಇಲಾಖೆಗಳ ಕಟ್ಟಡ ಕಾಮಗಾರಿಗಳು ಆರಂಭವಾಗಿಲ್ಲ. ಈ ಕುರಿತು ವಿಚಾರಿಸಿದರೆ, ಗುತ್ತಿಗೆ ಏಜೆನ್ಸಿಯವರು ಹಣ ಬಿಡುಗಡೆಯಾಗಿಲ್ಲ ಎನ್ನುತ್ತಿದ್ದಾರೆ. ಅಧಿಕಾರಿಗಳ ಈ ಧೋರಣೆಯಿಂದ ಕಾಮಗಾರಿಗಳು ವಿಳಂಬವಾಗುತ್ತಿವೆ. ಈ ಕುರಿತು ಹಿಂದಿನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರೂ, ಯಾವುದೇ ಸುಧಾರಣೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಪಂ ಅಧ್ಯಕ್ಷ ಎಸ್‌.ಪಿ. ಬಳಿಗಾರ ಮಾತನಾಡಿ, ಯಾವ್ಯಾವ ಇಲಾಖೆಗಳಿಂದ ನಿರ್ಮಿತಿ ಕೇಂದ್ರಕ್ಕೆ ಸಂದಾಯವಾದ ಹಣ, ಪ್ರಗತಿಯಲ್ಲಿರುವ ಕಾಮಗಾರಿಗಳು ಹಾಗೂ ಆರಂಭಿಸಬೇಕಾದ ಕಾಮಗಾರಿಗಳ ಕುರಿತು ಸಮಗ್ರ ವರದಿಯನ್ನು ಒಂದು ವಾರದಲ್ಲಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಗ್ರಾಮೀಣ ರಸ್ತೆ, ಶಾಲೆಗಳ ದುರಸ್ತಿ, ಮಕ್ಕಳ ಕಲಿಕಾ ಗುಣಮಟ್ಟ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಚರ್ಚೆ ನಡೆಯಿತು.

ಇದೇ ಸಂದರ್ಭದಲ್ಲಿ 2019ರ ಜಿಪಂದ ದಿನಚರಿ ಹಾಗೂ ಸ್ವಚ್ಛ ಭಾರತ್‌ ಮಿಷನ್‌ದ ಕ್ಯಾಲೆಂಡರ್‌ ಬಿಡುಗಡೆ ಮಾಡಿದರು.

ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ, ಈಶ್ವರಪ್ಪ ಹುಲ್ಲಲ್ಲಿ, ಮಂಜುಳಾ ಹುಲ್ಲಣ್ಣವರ, ಸಿದ್ಧಲಿಂಗೇಶ ಪಾಟೀಲ, ಜಿಪಂ ಯೋಜನಾ ನಿರ್ದೇಶಕ ಟಿ.ದಿನೇಶ, ಮುಖ್ಯ ಲೆಕ್ಕಾಧಿಕಾರಿ ಜೆ.ಸಿ.ಪ್ರಶಾಂತ, ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next