Advertisement
ರಾಜ್ಯ ಸಂರಕ್ಷಿತ ಸ್ಮಾರಕ ಪಟ್ಟಿಗೆ ಸೇರಿರುವ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ರಾಜ್ಯ ಸರಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನವನ್ನು ಮೂಲಸ್ವರೂಪಕ್ಕೆ ತರುವ ಉದ್ದೇಶದಿಂದ ಕೃತಕವಾಗಿ ನಿರ್ಮಿಸಿದ ಗೋಡೆಗಳನ್ನು ಜಿಲ್ಲಾಧಿಕಾರಿಗಳ ಆದೇಶದನ್ವಯ ತೆರವುಗೊಳಿಸಲಾಯಿತು.
Related Articles
Advertisement
ಆದರೆ, ದೇವಸ್ಥಾನದ ಅನುವಂಶಿಕ ಪಾರುಪತ್ಯದಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಅಧಿಕಾರಿಗಳು ಗೊಂದಲಕ್ಕೀಡಾದರು. ಇದೇ ಸಮಯಕ್ಕೆ ಸ್ಥಳಕ್ಕಾಗಮಿಸಿದ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ಚರ್ಚಿಸಿ ಪೊಲೀಸರ ಸುಪರ್ದಿಯಲ್ಲಿ ತೆರವು ಕಾರ್ಯಾಚರಣೆ ಮುಂದುವರಿಸಿದರು.
ಇದಕ್ಕೂ ಮುನ್ನ ವೀರನಾರಾಯಣ ದೇವಸ್ಥಾನದ ಪ್ರವೇಶ ದ್ವಾರದ ಮಂಟಪದ 10 ಕಂಬಗಳ ಪೈಕಿ 2 ಕಂಬಗಳಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಾಸನ, ಕಂಬದ ಇನ್ನೊಂದು ಬದಿಯಲ್ಲಿ ಎರಡು ಅಪ್ರಕಟಿತ ಶಾಸನಗಳು ಹಾಗೂ ಇನ್ನೊಂದು ಕಂಬದಲ್ಲಿ ಶಿಲ್ಪಿಯ ಹೆಸರಿರುವ ಶಾಸನ ಪತ್ತೆಯಾಗಿದೆ. ಶಾಸನದಲ್ಲಿ ತ್ರಿಪುರುಷ ವಿಷ್ಣು ದೇವಾಲಯಲ್ಲೆ ಸುವರ್ಣ ನಾಣ್ಯಗಳು ಹಾಗೂ ಭೂದಾನದ ಉಲ್ಲೇಖಗಳಿರುವುದು ಲಭ್ಯವಾಗಿದೆ.
ಅಲ್ಲದೇ, ಹೊಯ್ಸಳ ಇತಿಹಾಸದಲ್ಲಿ ಪ್ರಖ್ಯಾತನಾಗಿದ್ದ ವಿಷ್ಣುವರ್ಧನನ ಕಾಲದಲ್ಲಿ ಅಂದರೆ 1102-1142ರ ಕಾಲದಲ್ಲಿ ತನ್ನ ರಾಜಕೀಯ ಸಾಧನೆಗಳ ಸ್ಮರಣಾರ್ಥವಾಗಿ ಕಟ್ಟಿಸಿದ ಐದು ವಿಜಯ ನಾರಾಯಣ ದೇವಾಲಯಗಳಲ್ಲಿ ಇದು ಎಂದು ಪ್ರತೀತಿ ಇದ್ದುದರಿಂದ ಹಾಗೂ ಕುಮಾರವ್ಯಾಸನು ಇದೇ ದೇವಸ್ಥಾನದ ಮಹಾಮಂಟಪದ ಕಮಲ ಬೋದಿಗೆಯುಳ್ಳ ಕಂಬಕ್ಕೆ ಒರಗಿಕೊಂಡು ಗದುಗಿನ ಭಾರತ ಕಾವ್ಯ ಬರೆದಿದ್ದನು ಎಂಬ ಇತಿಹಾಸ ಹೊಂದಿದ್ದು, ರಾಜ್ಯ ಸಂರಕ್ಷಿತ ಸ್ಮಾರಕ ಪಟ್ಟಿಗೆ ಸೇರಿಸಲಾಗಿದ್ದು, 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಾರಂಭ ಮಾಡಲಾಗಿದೆ.
ವೀರನಾರಾಯಣ ದೇವಸ್ಥಾನದ ಕುರಿತಾಗಿ ನ್ಯಾಯಾಲಯದಲ್ಲಿ ವ್ಯಾಜ್ಯಗಳಿರುವ ಸಂದರ್ಭದಲ್ಲಿ ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಪುನರುತ್ಥಾನದ ಹೆಸರಿನಲ್ಲಿ ದೇವಸ್ಥಾನದ ಮೂಲಕ ಕುಮಾರವ್ಯಾಸ ಮಂಟಪದ ಸುತ್ತಲಿನ ಗೋಡೆಗಳನ್ನು ತೆರವುಗೊಳಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕಾರಿಗಳು ಮಾಹಿತಿ ನೀಡದೇ, ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದನ್ನು ನಾವು ಖಂಡಿಸುವುದರ ಜೊತೆಗೆ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ.-ಸಮೀರ ಗುಡಿ, ದೇವಸ್ಥಾನದ ಅನುವಂಶಿಕ ಪಾರುಪತ್ಯದಾರರು, ಪರಿಚಾರಕರು. ರಾಜ್ಯ ಸಂರಕ್ಷಿತ ಸ್ಮಾರಕ ಪಟ್ಟಿಯಲ್ಲಿ ಗದುಗಿನ ಇತಿಹಾಸ ಪ್ರಸಿದ್ಧಿ ಹೊಂದಿರುವ ವೀರನಾರಾಯಣ ದೇವಸ್ಥಾನ ಸೇರಿದ್ದರಿಂದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪುನರುತ್ಥಾನ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ದೇವಸ್ಥಾನದ ಮೂಲಸ್ವರೂಪಕ್ಕೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ಮೂಲಸ್ವರೂಪವನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಆಡಳಿತಾತ್ಮಕವಾಗಿ ಅನುಮೋದನೆ ನೀಡಿರುವುದರಿಂದ ಕೆಲಸ ಆರಂಭಿಸಲಾಗಿದೆ.
-ಕೊಟ್ರೇಶ ವಿಭೂತಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು