ಗದಗ: ಭೀಕರ ಬರದ ಮಧ್ಯೆಯೂ ಗಿಡದ ತುಂಬಾ ಹಣ್ಣು ಗೊಂಚಲು ಬಿಟ್ಟಿದ್ದವು. ರೈತರು ಈ ಸಲ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದರು. ಆದರೆ ನಿನ್ನೆ ರಾತ್ರಿ ಸುರಿದ ಆಲಿಕಲ್ಲು ಮಳೆ ರೈತರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದೆ.
ಹೌದು. ಹುಲಕೋಟಿ ಭಾಗದಲ್ಲಿ ಬುಧವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ರೈತರ ಬದುಕನ್ನು ನುಚ್ಚು ನೂರು ಮಾಡಿದೆ. ಹುಲಕೋಟಿ, ಹೊಸಹಳ್ಳಿ ಹಾಗೂ ದುಂದೂರು ಗ್ರಾಮಗಳ ತೋಟಗಳಲ್ಲಿ ಅಲ್ಲಲ್ಲಿ ಮಾವು, ಚಿಕ್ಕು ಮತ್ತು ಪೇರಲ ಗಿಡಗಳು ನೆಲಕ್ಕುರುಳಿವೆ. ಅದರೊಂದಿಗೆ ಅಪಾರ ಪ್ರಮಾಣದ ಕಾಯಿ, ಹಣ್ಣುಗಳು ನೆಲಕ್ಕುದುರಿ ಬಿದ್ದಿವೆ. ಪರಿಣಾಮ ಎಕರೆಗೆ ಸುಮಾರು 2 ಲಕ್ಷ ರೂ. ಗೂ ಹೆಚ್ಚು ಬೆಳೆ ಹಾನಿ ಸಂಭವಿಸಿದ್ದು ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1247 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಅದರಲ್ಲಿ ಹುಲಕೋಟಿ ಭಾಗವೇ ಸಿಂಹಪಾಲು ಹೊಂದಿದೆ. ಹುಲಕೋಟಿ, ಹೊಸಹಳ್ಳಿ, ದುಂದೂರು ಗ್ರಾಮಗಳಲ್ಲಿ ಹೆಚ್ಚಾಗಿ ಮಾವು ಬೆಳೆಯಲಾಗುತ್ತದೆ. ಇಲ್ಲಿನ ಮಾವು ಅತ್ಯಂತ ಉತ್ಕೃಷ್ಟ ತಳಿಯಾಗಿದ್ದು, ವಿದೇಶಗಳಿಗೂ ರಫ್ತಾಗುತ್ತದೆ. ಹೀಗಾಗಿ ವರ್ಷವಿಡೀ ತೋಟದ ನಿರ್ವಹಣೆ, ಕಾವಲುಗಾರ ಹಾಗೂ ಕೂಲಿ, ಗಿಡಗಳಿಗೆ ಔಷ ಧಿಗಾಗಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ, ಪ್ರತಿ ಗಿಡವನ್ನೂ ಮಗುವಂತೆ ಜೋಪಾನ ಮಾಡಿದ್ದರು. ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ಅನ್ನದಾತರು ಹತ್ತಾರು ಕನಸು ಕಟ್ಟಿಕೊಂಡಿದ್ದರು. ವರ್ಷಗಳಿಂದ ಶ್ರಮವಹಿಸಿ ಬೆಳೆಸಿದ ಗಿಡಗಳು ಕಣ್ಮುಂದೆಯೇ ಧರೆಗುರುಳಿರುವುದನ್ನು
ಕಂಡು ಕಣ್ಣೀರಿಟ್ಟಿದ್ದಾರೆ.
ನೆಲದಲ್ಲಿ ಬಿದ್ದಿರುವ ಹಣ್ಣು, ಕಾಯಿಗಳನ್ನು ಒಲ್ಲದ ಮನಸ್ಸಿನಿಂದಲೇ ಹೆಕ್ಕಿ ತೆಗೆದಿದ್ದಾರೆ. ಟೊಂಕ ಮುರಿದಂತೆ ಬಿದ್ದ ಗಿಡಗಳಿಗೆ ಬಂಬು, ಕಟ್ಟಿಗೆಗಳ ಆಸರೆ ನೀಡಿ, ನಿಲ್ಲಿಸಿದ್ದಾರೆ. ಲಕ್ಷಾಂತರ ರೂ. ಬೆಳೆ ಹಾನಿ: ಹುಲಕೋಟಿ ಸುತ್ತಮುತ್ತಲಿನ ಭಾಗದಲ್ಲಿ ಬೆಳೆಯಲಾಗಿದ್ದ ಮಾವು ಹೆಚ್ಚಿನ ಹಾನಿಗೀಡಾಗಿದೆ. ಕಳೆದ ಒಂದೂವರೆ ದಶಕದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸದ್ಯ ಮಾವು, ಅದರಂತೆ ಚಿಕ್ಕು,
ಪೇರಲ ಗಿಡಗಳೂ ಫಲ ನಿಡುವ ಕಾಲವಿದು. ಪ್ರತಿ ಎಕರೆಗೆ ಒಂದೂವರೆ ಟನ್ ಮಾವು ಇಳುವರಿ ಬರಲಿದ್ದು, ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 2 ಲಕ್ಷ ರೂ. ಧಾರಣೆಯಿದೆ. ಚಿಕ್ಕು, ಪೇರಲ ಹಣ್ಣುಗಳಿಗೆ ಪ್ರತಿ ಕ್ವಿಂಟಲ್ 2,500 ರೂ. ಬೆಲೆಯಲ್ಲಿ ಮಾರಾಟಗೊಳ್ಳುತ್ತಿದೆ. ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿದ್ದು, ಅದರ ನಿರ್ವಹಣೆಗೆ ಮಾಡಿದ ಖರ್ಚೂ ಕೈ ಸೇರದ ಸ್ಥಿತಿ ಬಂದೊದಗಿದೆ ಎಂಬುದು ರೈತರ ಅಳಲು. ಸರಕಾರ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ರೈತರ ಆಗ್ರಹ.
ಹುಲಕೋಟಿ, ಹೊಸಹಳ್ಳಿ, ದುಂದೂರುಭಾಗದಲ್ಲಿ ಬೆಳೆಯಲಾಗಿದ್ದ ಸುಮಾರು 50 ಹೆಕ್ಟೇರ್ ಪ್ರದೇಶದಷ್ಟು ವಿವಿಧ ತೋಟಗಾರಿಕೆ ಬೆಳೆಗಳು ಬಹುತೇಕ ನಾಶವಾಗಿದೆ. ಆ ಪೈಕಿ ಮಾವು ಬೆಳೆ ಹೆಚ್ಚಿನ ಕ್ಷೇತ್ರವನ್ನು ಹೊಂದಿದೆ. ಕಳೆದ ಬಾರಿ ತಹಶೀಲ್ದಾರ್ ಅವರ ಮೂಲಕ ವರದಿ ಮಾಡಿಸಿ, ಹೆಕ್ಟೇರ್‌ಗೆ 25 ಸಾವಿರ ರೂ. ಪರಿಹಾರ ಕೊಡಿಸಲಾಗಿದೆ. ಅದರಂತೆ ಈ ಬಾರಿಯೂ ನಾಳೆ ತೋಟಗಾರಿಕೆ ಇಲಾಖೆಯಿಂದ ಬೆಳೆ ಹಾನಿ ಸಮೀಕ್ಷೆ ನಡೆಸಿ, ಜಿಲ್ಲಾಡಳಿತ ಮೂಲಕ ಪರಿಹಾರಕ್ಕೆ ಶಿಫಾರಸು ಮಾಡಲಾಗುತ್ತದೆ.
ಗಿರೀಶ್ ಹೊಸೂರು,
ಸಹಾಯಕ ತೋಟಗಾರಿಕೆ ಅಧಿಕಾರಿ.
ಗಿರೀಶ್ ಹೊಸೂರು,
ಸಹಾಯಕ ತೋಟಗಾರಿಕೆ ಅಧಿಕಾರಿ.
ವರ್ಷಾನುಗಟ್ಟಲೆ ಇದೇ ಬೆಳೆ ನೆಚ್ಚಿಕೊಂಡಿರುತ್ತೇವೆ. ಈ ಬಾರಿ ಬರದ ಮಧ್ಯೆಯೂ ಸಾಮಾನ್ಯವಾಗಿ
ಮಾವು ಕಾಯಿ ಬಿಟ್ಟಿದ್ದವು. ನಾಳೆ ನಾಡಿದ್ದು, ಪೂಜೆ ಮಾಡಿ ಮಾವು ಕೀಳಲು ಉದ್ದೇಶಿಸಿದ್ದೆವು. ಆದರೆ, ಪ್ರಕೃತಿ ಮಾತೆಯ ಮುನಿಸಿನಿಂದ ನಮ್ಮೆಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಈ ಹಿನ್ನೆಲೆಯಲ್ಲಿ ಸರಕಾರ ಪ್ರತಿಯೊಬ್ಬ ರೈತರಿಗೂ ಕನಿಷ್ಟ 2 ಲಕ್ಷ ರೂ. ಪರಿಹಾರ ಒದಗಿಸಬೇಕು.
ಕರಿಯಪ್ಪ ಫಕ್ಕೀರಪ್ಪ ರವಳೋಜಿ,
ಮಾವು ಬೆಳೆಗಾರ.