Advertisement
ಜಿಲ್ಲೆಯ ಹಲವಾರು ಸಂಘಟನೆಗಳು ಪಿಓಪಿ ಗಣೇಶ ಮೂರ್ತಿಗಳ ಮಾರಾಟ, ತಯಾರಿಕೆಗೆ ನಿಷೇಧ ಹೇರುವಂತೆ ಸರ್ಕಾರ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರಿಂದ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಲಾಗಿದೆ. ಇದರಿಂದ ಮಣ್ಣಿನ ಗಣೇಶ ಮೂರ್ತಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ತಿಂಗಳುಗಳ ಮುಂಚೆಯೇ ಗಣೇಶನ ಮೂರ್ತಿಗಳು ಬುಕ್ ಆಗಿವೆ. ಕಳೆದ ಬಾರಿಗಿಂತ ಗಣೇಶನ ಮೂರ್ತಿ ಕೊಂಡುಕೊಳ್ಳುವವರಿಗೆ ಬೆಲೆ ಕೊಂಚ ದುಬಾರಿಯಾಗಿದೆ.
ಯುಗಾದಿ ಹಬ್ಬದಿಂದಲೇ ಗಣೇಶ ಮೂರ್ತಿ ತಯಾರಿಕೆಗೆ ಸಜ್ಜುಗೊಂಡು, ಜಿಗಿ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿ ತಯಾರಿಸುತ್ತಾರೆ. ಸಿಂಹಾಸನ ಗಣಪತಿ, ಬಲಮುರಿ ಗಣಪತಿ, ನಾಗರಹಾವು, ಇಲಿ, ತ್ರಿಶೂಲ, ಕಮಲ, ಕೈ ಹಾಗೂ ಡಮರುಗ
ಮೇಲೆ ಕುಳಿತ ಗಣಪತಿ, ನಿಂತ ಗಣಪತಿ, ಕೊಪ್ಪಳ ಗವಿಸಿದ್ಧೇಶ್ವರ ಸ್ವಾಮೀಜಿ, ಶ್ರೀಕೃಷ್ಣ, ಬಸವಣ್ಣನ ತಲೆ ಮೇಲೆ ಗಣೇಶ ಹಾಗೂ ವಿಶೇಷವಾಗಿ ಪುನೀತರಾಜ್ ಕುಮಾರ ಜೊತೆಗೆ ಗಣೇಶ ಮೂರ್ತಿ ಹೀಗೆ ವಿಶಿಷ್ಟ ರೀತಿಯ ಗಣಪತಿಗಳು ಸಿದ್ಧವಾಗಿವೆ.
Related Articles
Advertisement
ಮಣ್ಣಿನ ಅಭಾವ-ದುಬಾರಿ: ತಾತ, ಮುತ್ತಜ್ಜನ ಕಾಲದಿಂದೂ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡ ಚಕ್ರಸಾಳಿ ಕುಟುಂಬ ಈ ಮೊದಲು ಗಣೇಶನ ಮೂರ್ತಿ ತಯಾರಿಕೆಗೆ ಬೇಕಾಗುವ ಮಣ್ಣನ್ನು ಹುಬ್ಬಳ್ಳಿ, ಚನ್ನಾಪುರ, ಅಂಚಟಗೇರಿ ಚವಡಗುಡ್ಡ, ಬೆಂಡಿಗೇರಿ ಭಾಗದಲ್ಲಿ ಖರೀದಿಸುತ್ತಿದ್ದರು. ಸದ್ಯ ಒಂದು ಟ್ರಾಕ್ಟರ್ ಜೇಡಿ ಮಣ್ಣಿನ ಬೆಲೆ 10,000 ರೂ. ಆಗಿದ್ದರಿಂದ ಬೆಳಗಾವಿ ಜಿಲ್ಲೆ ಗೋಕಾಕ್ ಭಾಗದಿಂದ 1 ಟನ್ ಜೇಡಿ ಮಣ್ಣಿಗೆ 6500 ರೂ. ನೀಡಿ ಖರೀದಿಸಿದ್ದಾರೆ. ಬಣ್ಣದ ಬೆಲೆ ದುಬಾರಿಯಾಗಿದೆ. ಜೊತೆಗೆ ಸಾಗಾಣಿಕೆ ವೆಚ್ಚ ದುಪ್ಪಟ್ಟಾಗಿರುವುದರಿಂದ ಗಣೇಶನ ಮೂರ್ತಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿದೆ ಎನ್ನುತ್ತಾರೆ ಗಣೇಶಮೂರ್ತಿ ತಯಾರಕ ಬಸವರಾಜ ಶಿವಪ್ಪ ಚಕ್ರಸಾಲಿ. ಸರ್ಕಾರಿ ಸೌಲಭ್ಯಕ್ಕಾಗಿ ಮನವಿ: ಪೂರ್ವಿಕರ ಕಾಲದಿಂದಲೂ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಕುಟುಂಬ ಇದುವರೆಗೆ ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದೇವೆ. ಇದುವರೆಗೆ ಸರಕಾರದಿಂದ ಯಾವುದೇ ಸೌಲಭ್ಯ ದೊರೆತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ಸಂಕಷ್ಟ ಎದುರಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ವಿಶೇಷ ಸೌಲಭ್ಯ ಒದಗಿಸಬೇಕೆಂದು ಚಕ್ರಸಾಳಿ ಕುಟುಂಬ ಒತ್ತಾಯಿಸಿದೆ. ನಮ್ಮ ಕುಟುಂಬ ಕಳೆದ ನವೆಂಬರ್ ತಿಂಗಳಿನಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತದೆ. 8 ಇಂಚಿನ ಗಣೇಶ
ಮೂರ್ತಿಯಿಂದ 5 ಅಡಿ ಎತ್ತರದ ಗಣೇಶನನ್ನು ತಯಾರಿಸಲಾಗುತ್ತದೆ. ಗಣೇಶ ಚತುರ್ಥಿಗೆ ಸುಮಾರು 700, 800 ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಲಾಗುತ್ತದೆ.
ಬಸವರಾಜ ಚಕ್ರಸಾಲಿ, ಗಣೇಶ ಮೂರ್ತಿ ತಯಾರಕರು, ಗದಗ *ಅರುಣಕುಮಾರ ಹಿರೇಮಠ