Advertisement

ಚರಗ ಚೆಲ್ಲಿ ಭೂತಾಯಿಗೆ ಭಕ್ತಿ ಸಮರ್ಪಣೆ : ರೈತ ಕುಟುಂಬಗಳಿಂದ ಸಡಗರದ ಎಳ್ಳ ಅಮಾವಾಸ್ಯೆ ಆಚರಣೆ

02:56 PM Jan 14, 2021 | Team Udayavani |

ಗದಗ: ಕೊರೊನಾ ಹಾಗೂ ಅಕಾಲಿಕ ಮಳೆ ಮಧ್ಯೆಯೂ ಜಿಲ್ಲೆಯ ರೈತಾಪಿ ಜನರು ಬುಧವಾರ ಎಳ್ಳ ಅಮಾವಾಸ್ಯೆಯನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. ಎಳ್ಳ ಅಮಾವಾಸ್ಯೆ ನಿಮಿತ್ತ ತಮ್ಮ ಜಮೀನುಗಳಲ್ಲಿ ಚರಗ ಚೆಲ್ಲಿ ಭೂತಾಯಿಗೆ ಭಕ್ತಿ ಸಮರ್ಪಿಸಿದರು. ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಎಳ್ಳ ಅಮವಾಸೆಯನ್ನು ಬಲು ಖುಷಿಯಿಂದ ಆಚರಿಸಿದರು.

Advertisement

ಹೊಲಗದ್ದೆಗಳಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ, ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಬಳಿಕ ಜಮೀನು ತುಂಬೆಲ್ಲಾ ಸುತ್ತಾಡಿ ಚೆರಗ ಚೆಲ್ಲಿ ಭೂತಾಯ ಕೃಪೆಗೆ ಪಾತ್ರರಾದರು. ಕಳೆದ ನಾಲ್ಕೈದು ವರ್ಷಗಳಿಂದ ಬರ ಹಾಗೂ ನೆರೆಯಿಂದ ಬೆಳೆ ಕೈಹಿಡಿಯುತ್ತಿಲ್ಲ. ಅದರಂತೆ ಈ ಬಾರಿ ಹಿಂಗಾರಿನಲ್ಲೂ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಆತಂಕವನ್ನು
ತಂದೊಡ್ಡಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ವಿವಿಧ ಬೆಳೆಗಳನ್ನು ಉಳಿಸಿಕೊಳ್ಳಲು ಪ್ರಯಾಸಪಡುತ್ತಿರುವ ರೈತರು, ಎಳ್ಳ ಅಮವಾಸ್ಯೆ ಅಂಗವಾಗಿ ಭೂತಾಯಿಗೆ ನೈವೇದ್ಯ ಸಮರ್ಪಿಸುವ ಮೂಲಕ ಹಿಂಗಾರು ಬೆಳೆಯನ್ನಾದರೂ ದಕ್ಕಿಸಿಕೊಡುವಂತೆ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ:ಕಲಬುರಗಿ: 65 ಕ್ವಿಂಟಲ್ ಭಾರವನ್ನು 15 ಕಿ.ಮೀ ಎಳೆದ ಜೋಡಿ ಎತ್ತುಗಳು!

ಕೆಲವರು ಬನ್ನಿ ಮರಕ್ಕೆ ಸೀರೆ ತೊಡಿಸಿ, ಉಡಿ ತುಂಬಿ, ಕೈಗೆ ಕಂಕಣಕಟ್ಟಿ ಹಾಗೂ ಪಂಚ ಪಾಂಡವರ ಸ್ವರೂಪವಾಗಿ ಐದು ಕಲ್ಲುಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಪೂಜೆಗೆ ಅರ್ಪಿಸಿದ ನೈವೇದ್ಯವನ್ನು ಜಮಿನಿನೆಲ್ಲೆಡೆ ಸುತ್ತಾಡಿ ಚರಗ ಚೆಲ್ಲಿದರು.

ಹುಲ್ಲಲಿಗೂ… ಸುರಾಂಬ್ಲಿಗೋ  ಎಂದು ಸಿಹಿ ತಿನಸುಗಳನ್ನ ಹೊಲದ ಸುತ್ತ ಚೆಲ್ಲಿ, ಉತ್ತಮ ಫಸಲು ಬರಬೇಕು.
ವಿಶ್ವವನ್ನೇ ಸಂಕಷ್ಟಕ್ಕೆ ಸಿಲುಕಿಸಿರುವ ಮಹಾಮಾರಿ ಕೊರೊನಾ ಸೋಂಕು ನಿವಾರಣೆಯಾಗಬೇಕು. ಮುಂದೆಯೂ ಉತ್ತಮ ಮಳೆ-ಬೆಳೆ ನೀಡಬೇಕು ಎಂದು ಲೋಕಕಲ್ಯಾಣಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದರು.

Advertisement

ಸಜ್ಜಿ ರೊಟ್ಟಿ-ಪುಂಡಿಪಲ್ಯಾ: ನಂತರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗೆಳೆಯರೊಡನೆ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಪುಂಡಿಪಲ್ಯಾ, ಬದನೆಕಾಯಿ ಪಲ್ಯಾ, ಖಡಕ್‌ ರೊಟ್ಟಿ, ವಿವಿಧ ಬಗೆಯ ಪಲ್ಲೆಗಳು, ಶೇಂಗಾ, ಗುರೆಳ್ಳು, ಪುಠಾಣಿ ಚಟ್ನಿ, ಕಡಬು, ಎಳ್ಳು ಹೋಳಿಗೆ, ಸೇಂಗಾ ಹೋಳಿಗೆ, ಕರಿಗಡಬು, ಬಜ್ಜಿ ಹಬ್ಬದೂಟ ಸವಿದರು.

ರಂಗೇರಿದ ಹಳ್ಳಿ ಸೊಗಡು: ಜಿಲ್ಲೆಯಲ್ಲಿ ರೈತರು ಎಳ್ಳ ಅಮವಾಸ್ಯೆ ಅಂಗವಾಗಿ ರೈತರು ತಮ್ಮ ಹೊಲಗಳಿಗೆ ತೆರಳು
ಬೆಳಗ್ಗೆಯಿಂದಲೇ ಸಿದ್ಧತೆ ನಡೆಸಿದ್ದರು. ಅದಕ್ಕಾಗಿ ಎತ್ತಿನ ಬಂಡಿ, ಎತ್ತುಗಳು ಹಾಗೂ ಟ್ರ್ಯಾಕ್ಟರ್‌ಗಳನ್ನು ಸ್ವತ್ಛಗೊಳಿಸಿ,
ಬಣ್ಣ ಬಣ್ಣದ ರಿಬ್ಬನ್‌, ಬಲೂನ್‌ಗಳನ್ನು ಕಟ್ಟಿ ವಿಶೇಷವಾಗಿ ಸಿಂಗರಿಸಿದ್ದರು.

ಮನೆಯಲ್ಲಿ ಮಹಿಳೆಯರು ಹಬ್ಬದ ನಿಮಿತ್ತ ವಿಶೇಷ ಖಾದ್ಯ ಗಳನ್ನು ಸಿದ್ಧಪಡಿಸುತ್ತಿದ್ದಂತೆ ತಂಡೋ ಪತಂಡವಾಗಿ ಎತ್ತಿನ ಗಾಡಿ, ಟ್ರ್ಯಾಕ್ಟರ್‌ ಗಳಲ್ಲಿ ತಮ್ಮ ತಮ್ಮ ಹೊಲ-ಗದ್ದೆಗಳತ್ತ ಪ್ರಯಾಣ ಬೆಳಿಸಿದರು. ಈ ವೇಳೆ ಹಲವೆಡೆ ಗ್ರಾಮೀಣ ಭಾಗದಲ್ಲಿ ಸಾಲು ಸಾಲಾಗಿ ತೆರಳುತ್ತಿದ್ದ ಚಕ್ಕಡಿಗಳು ನೋಡುಗರಿಗೆ ಮುದ ನೀಡುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next