ಗದಗ: ಮನುಷ್ಯ ಹಾಗೂ ಪ್ರಾಣಿಗಳಲ್ಲಿ ಉಸಿರಾಟ ಹಾಗೂ ಶ್ವಾಸಕೋಶಕ್ಕೆ ತೊಂದರೆ ಉಂಟುಮಾಡುವ ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಆದರೆ, ಮುಂಜಾಗೃತೆ ವಹಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಹಾನಗರಗಳಿಗೆ ಕೆಲಸಕ್ಕಾಗಿ ಗುಳೆಹೋಗಿ ಬರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೊರೊನಾ ವೈರಸ್ ತಡೆಗಟ್ಟುವ ಕುರಿತು ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ರಚಿಸಿದ್ದು, ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪ್ರಮುಖವಾಗಿ ತಾಂಡಾಗಳಲ್ಲಿ ಕೆಲಸಕ್ಕಾಗಿ ಗೋವಾ ಹಾಗೂ ಮಂಗಳೂರು ಪ್ರದೇಶಗಳಿಗೆ ಹೋಗಿ ಬರುವ ಜನರ ಮೇಲೆ ತೀವ್ರ ನಿಗಾ ಇಡಬೇಕು. ಈ ತಾಂಡಾ ಹಾಗೂ ಪ್ರತಿ ಗ್ರಾಮದಲ್ಲಿ ವಾರ್ಡ್‌ವಾರು ಕೊರೊನಾ ವೈರಸ್ ತಡೆಗಟ್ಟಲು ಆರೋಗ್ಯ ಇಲಾಖೆ ಕಡ್ಡಾಯವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅದಕ್ಕೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಹಯೋಗ ನೀಡಬೇಕು ಎಂದು ತಿಳಿಸಿದರು.
ಅದರೊಂದಿಗೆ ಗೋವಾ ಮತ್ತು ಮಂಗಳೂರಿಗೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಚಾಲಕ ಹಾಗೂ ನಿರ್ವಾಹಕರಿಗೆ, ಆರೋಗ್ಯ ಇಲಾಖೆಯ ಎಲ್ಲ ವೈದ್ಯಾಧಿಕಾರಿಗಳು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಉಪಯೋಗಿಸಬೇಕು. ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡು ಬರುವ ಪ್ರಯಾಣಿಕರ ಕುರಿತು ನಿಗಾ ವಹಿಸಬೇಕು. ಆರೋಗ್ಯ ಇಲಾಖೆ, ಅಂಗನವಾಡಿ, ಪೊಲೀಸ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ಸಿಬ್ಬಂದಿಗೆ ಕೊರೊನಾ ವೈರಸ್ ತಡೆ ಕುರಿತಂತೆ ಸೋಂಕಿನ ಲಕ್ಷಣಗಳು ಹಾಗೂ ಪತ್ತೆ ಹೆಚ್ಚುವಿಕೆ ಇವುಗಳ ಕುರಿತು ಆರೋಗ್ಯ ಇಲಾಖೆ ನಿರ್ದೇಶನದಂತೆ ತರಬೇತಿ ನೀಡಬೇಕು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ವೈ.ಕೆ.ಭಜಂತ್ರಿ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಕೊರೊನಾ ವೈರಸ್ ತಡೆ ಹಾಗೂ ಜಾಗೃತಿ ಕುರಿತಂತೆ ಹೊರಡಿಸಿದ ಸುತ್ತೋಲೆಯನ್ನು ವಿವರಿಸಿದ ಅವರು, ಕೊರೊನಾ ಸೋಂಕಿನ ಲಕ್ಷಣಗಳಾದ ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ ಹಾಗೂ ಭೇದಿ ಕಂಡುಬಂದಲ್ಲಿ ತಕ್ಷಣ ಸಮೀಪದ ಪ್ರಾಥಮಿಕ ಕೇಂದ್ರ, ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸಬೇಕು. ಕೊರೊನಾ ವೈರಸ್ ಸೋಂಕಿನ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ನಿಕಟ ಸಂಪರ್ಕದಲ್ಲಿ ಬಂದಾಗ ಹಸ್ತಲಾಘವ ಮಾಡುವುದರಿಂದ ಮತ್ತು ಮುಟ್ಟುವುದರಿಂದ ಸೋಂಕು ಹರಡಬಹುದಗಿದೆ. ಕರೋನಾ ಸೋಂಕು ಲಕ್ಷಣ ಕಂಡು ಬಂದ ವ್ಯಕ್ತಿಯ ಮೂಗು ಗಂಟಲಿನ ಸ್ರವದ ಲೇಪನ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಿ ಸೋಂಕಿನ ಕುರಿತು ದೃಢೀಕರಣಗೊಳ್ಳುತ್ತದೆ. ಸಾರ್ವಜನಿಕರು ಕೆಮ್ಮು ಅಥವಾ ಸೀನುವಿಕೆ ಸಂದರ್ಭದಲ್ಲಿ ಕರವಸ್ತ್ರಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ., ಜಿ.ಪಂ. ಯೋಜನಾ ನಿರ್ದೇಶಕ ಸಿ.ಆರ್. ಮುಂಡರಗಿ, ಜಿಮ್ಸ್ ಆಸ್ಪತ್ರೆ ಅಧೀಕ್ಷಕ ಜಿ.ಎಸ್.ಪಲ್ಲೇದ, ಡಾ|ಬಿಜ್ಜಳ, ಆರೋಗ್ಯ ಇಲಾಖೆ, ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಪಾಲ್ಗೊಂಡಿದ್ದರು.