ಗದಗ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ನಾಲ್ಕು ದಿನಗಳ ಕಾಲ ನಡೆದ ಮತದಾರ ಮಿಂಚಿನ ನೋಂದಣಿ ಕಾರ್ಯದಲ್ಲಿ ಒಟ್ಟು 10,889 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 23, 24ರಂದು ನಡೆದ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಹೊಸದಾಗಿ ಹೆಸರು ನೋಂದಾಯಿಸಲು 2,643 ಹಾಗೂ ತಿದ್ದುಪಡಿ, ಹೆಸರು ತೆಗೆದು ಹಾಕುವಿಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ 2,391 ಸೇರಿದಂತೆ ಒಟ್ಟು 5034 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
2ನೇ ಹಂತದಲ್ಲಿ ಮಾ. 2 ಹಾಗೂ 3ರಂದು ನಡೆದ ವಿಶೇಷ ನೋಂದಣಿ ಕಾರ್ಯಕ್ರಮದಲ್ಲಿ 2,522 ಹೊಸ ನೋಂದಣಿ ಹಾಗೂ 3,333 ಇತರೆ ಅರ್ಜಿಗಳನ್ನು ಸೇರಿದಂತೆ ಒಟ್ಟು 5,855 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 18-19ರ ವಯೋಮಿತಿಯಲ್ಲಿ ಇರುವವರಿಂದ ಹೊಸದಾಗಿ ನೋಂದಣಿಗೆ ಫೆ. 23, 24ರಂದು 1,234 ಹಾಗೂ ಮಾರ್ಚ್ 2 ಹಾಗೂ 3 ರಂದು 1,297 ಸೇರಿ ಒಟ್ಟು 2,522 ಯುವ ಮತದಾರರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿ.ಪಂ. ಸಿಇಒ ಮಂಜುನಾಥ ಚವ್ಹಾಣ ಮಾತನಾಡಿ, ಮತದಾರರ ಪಟ್ಟಿಯಲ್ಲಿರುವ ಮತದಾರರು ತಪ್ಪದೇ ಹಾಗೂ ನೈತಿಕವಾಗಿ ಮತದಾನ ಮಾಡಬೇಕು ಎಂಬುದು ಸ್ವೀಪ್ ಸಮಿತಿಯ ಮುಖ್ಯ ಉದ್ದೇಶ. ಅರ್ಹರು ಮತದಾರರ ಪಟ್ಟಿಯಲ್ಲಿ ನೋಂದಾಯಿಸುವುದು, ಪ್ರತಿಯೊಬ್ಬ ಮತದಾರನೂ ಮತ ಚಲಾಯಿಸಬೇಕು ಎಂಬುದರ ಬಗ್ಗೆ ಜಿಲ್ಲೆಯ ತಾಲೂಕು ಹಾಗೂ ಗ್ರಾಪಂ ಮಟ್ಟದಲ್ಲಿ ಅನುಷ್ಠಾನ ಸಮಿತಿಗಳು, ಪ್ರತಿ ಮತದಾನ ಕೇಂದ್ರದಲ್ಲಿ ಬೂತ್ ಮಟ್ಟದ ಜಾಗೃತಿ ಗುಂಪು ಹಾಗೂ ಚುನಾವಣಾ ಜಾಗೃತಿ ಕ್ಲಬ್, ಪ್ರತಿ ಸರ್ಕಾರಿ ಕಚೇರಿಯಲ್ಲಿ ವೋಟರ್ ಅವೇರನಸ್ ಫೋರಂ ಗಳನ್ನು ರಚಿಸಲಾಗುತ್ತಿದೆ.
ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಮತದಾರ ಜಾಗೃತಿಯ ಘೋಷವಾಕ್ಯಗಳ ರಚನೆ, ವಿದ್ಯಾರ್ಥಿಗಳಿಂದ ಪಾಲಕರಿಗೆ ಪತ್ರ ಆಂದೋಲನ ದ ಮೂಲಕ ಮತದಾನ ಜಾಗೃತಿಗೆ ಕ್ರಮ ಜರುಗಿಸಿದೆ. ಮಾ. 13ರಂದು ವಿದ್ಯಾರ್ಥಿಗಳಿಂದ ಬೈಸಿಕಲ್ ರ್ಯಾಲಿ ಹಾಗೂ ಮಾ. 15ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮತದಾನದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ತಿಳಿಸಿದರು.
ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ ಇದ್ದರು.
2.56 ಲಕ್ಷ ಮತದಾರರಿಗೆ ತಿಳಿವಳಿಕೆ
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ, ವಿಧಾನಸಭಾ ಕ್ಷೇತ್ರ ಹಾಗೂ ಗ್ರಾಪಂ ಸಮಿತಿಗಳನ್ನು ರಚಿಸಿ ವಿಕಲಚೇತನರಿಗೆ ಇರುವ ಸೌಲಭ್ಯಗಳನ್ನು ಒದಗಿಸಲು ಕ್ರಮ ಜರುಗಿಸಲಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಿದ್ಯುನ್ಮಾನ ಮತ ಯಂತ್ರದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗುತ್ತಿದ್ದು, ಈವರೆಗೆ 2.56 ಲಕ್ಷ ಮತದಾರರಿಗೆ ತಿಳಿವಳಿಕೆ ನೀಡಲಾಗಿದೆ. ವಿಕಲಚೇತನರು, ಹಿರಿಯ ನಾಗರಿಕರು, ತೃತೀಯ ಲಿಂಗ ಹಾಗೂ ಲೈಂಗಿಕ ಕಾರ್ಯಕರ್ತೆಯರ ಮತದಾನ ಜಾಗೃತಿಗಾಗಿ ಸಂಬಂಧಿತ ಸಂಘ ಸಂಸ್ಥೆಗಳ ಸಭೆ ನಡೆಸಲಾಗಿದೆ ಎಂದು ಸಿಇಒ ತಿಳಿಸಿದರು.